ಶಿವಮೊಗ್ಗ, ಮಾರ್ಚ್-14: ಕರೋನ ವೈರಸ್ ನಿರ್ವಹಣೆಗೆ ಅಗತ್ಯವಿರುವ ಕಿಟ್, ಮಾಸ್ಕ್ ಸೇರಿದಂತೆ ಎಲ್ಲಾ ಸಾಧನ ಸಲಕರಣೆಗಳೊಂದಿಗೆ ದಿನದ 24 ಗಂಟೆ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಗ್ಗಾನ್ ಆಸ್ಪ್ರತೆಯಲ್ಲಿ ಕರೋನಾ ವೈರಸ್ ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಅವರು ಶನಿವಾರ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕರೋನಾ ವೈರಸ್ ಪತ್ತೆಗೆ ಅಗತ್ಯವಾದ ಕಿಟ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಮಾಸ್ಕ್ ಇನ್ನಷ್ಟು ಇಂದು ಸಂಜೆಯೊಳಗಾಗಿ ತರಿಸಬೇಕು. ತಮ್ಮಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಮಾಸ್ಕ್‍ಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚನೆ ನೀಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಶಂಕಿತ ಪ್ರಕರಣಗಳು ವರದಿಯಾಗಿಲ್ಲ. ಆದರೆ ನೆರೆಯ ಜಿಲ್ಲೆಗಳಿಂದ ತಪಾಸಣೆಗಾಗಿ ಸ್ಯಾಂಪಲ್‍ಗಳನ್ನು ಮೆಗ್ಗಾನ್‍ಗೆ ಕಳುಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಯೋಗಾಲಯದಲ್ಲಿ ಆದಷ್ಟು ಬೇಗನೆ ಪರೀಕ್ಷಿಸಿ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಕರೋನಾ ವೈರಸ್ ನಿರ್ವಹಣೆಗೆ ಈಗಾಗಲೇ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಸಿದ್ಧಪಡಿಸಲಾಗಿದೆ. ಇದೇ ರೀತಿಯಲ್ಲಿ ವೃತ್ತಿಪರವಾಗಿ ಪ್ರಕರಣಗಳನ್ನು ನಿರ್ವಹಿಸಬೇಕು. ಈ ಕುರಿತು ಈಗಾಗಲೇ ಮೆಗ್ಗಾನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಇತರರಿಗೆ ತರಬೇತಿ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರ ಪ್ರಯಾಣ ದಾಖಲೆಗಳನ್ನು ಹಾಗೂ ರೋಗ ದಾಖಲೆಗಳನ್ನು ಪರಿಶೀಲಿಸಿ ನಮೂದಿಸಬೇಕು ಎಂದರು.
ಕರೋನಾ ವೈರಸ್ ನಿರ್ವಹಣೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂವರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತಿದೆ. ಕರೋನಾ ವೈರಸ್ ಕುರಿತಂತೆ ತಪಾಸಣೆಗೊಳಗಾದವರ ವಿವರ, ಲಭ್ಯವಿರುವ ಸಾಧನ ಸಂಪನ್ಮೂಲಗಳು ಸೇರಿದಂತೆ ಮಾಹಿತಿಯನ್ನು ಪ್ರತಿ ದಿನ ಸಂಜೆ 6ಗಂಟೆಗೆ ಒದಗಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಾರ್ಗಸೂಚಿ ಅನುಸರಿಸಿ: ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಇದೇ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪ್ರತಿಯೊಬ್ಬರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಗಾಬರಿಗೊಳ್ಳುವ ಅಗತ್ಯವಿಲ್ಲ. ಕರೋನಾ ಕುರಿತು ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಜ್ಜುಗೊಳಿಸಲಾಗಿರುವ ಐಸೋಲೇಶನ್ ವಾರ್ಡ್, ಫ್ಲೂ ಕಾರ್ನರ್, ವೈರಲ್ ಲ್ಯಾಬ್‍ಗಳಿಗೆ ಭೇಟಿ ನೀಡಿದರು.