ಶಿವಮೊಗ್ಗ ಅಕ್ಟೋಬರ್ 28 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಆವರಣದ ಉದ್ಯಾನವನಕ್ಕೆ ಪವಿತ್ರ ಮೃತ್ತಿಕೆ(ಮಣ್ಣು)ಸಂಗ್ರಹಿಸುವ ಅಭಿಯಾನಕ್ಕೆ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಅವರು ಚಾಲನೆ ನೀಡಿದರು.
ಮಾನ್ಯ ಮುಖ್ಯಮಂತ್ರಿಗಳು ಕೆಂಪೇಗೌಡ ಥೀಮ್ ಪಾರ್ಕ್‍ನ ಭೂಮಿ ಪೂಜೆಗೆ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ(ಮಣ್ಣು) ಯನ್ನು ಸಂಗ್ರಹಿಸುವ ‘ಬನ್ನಿ ನಾಡ ಕಟ್ಟೋಣ’ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇಂದು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸುವ ರಥಕ್ಕೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಬೆಂಗಳೂರು ನಗರ ನಿರ್ಮಾಣ ಕಾರ್ಯದಲ್ಲಿ ಗೌರವ ತರುವ ಕೆಲಸವನ್ನು ಕೆಂಪೇಗೌಡರು ಮಾಡಿದ್ದು, ಎಲ್ಲ ಸಮುದಾಯಗಳಿಗೆ ಸಮಾನತೆ ಒದಗಿಸಿದ್ದಾರೆ. ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಇಂತಹ ಮಾದರಿ ಕೆಂಪೇಡೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಎದುರು ಅನಾವರಣಗೊಳಿಸಲು ಜಿಲ್ಲೆಗಳಿಂದ ಮೃತ್ತಿಕೆ ಸಂಗ್ರಹ ಮೂಲಕ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮ ಪ್ರಧಾನಮಂತ್ರಿಯವರು ನವೆಂಬರ್ 21 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಟಾಪಿಸುವ ಮೂಲಕ ಇಡೀ ವಿಶ್ವವೇ ನೋಡುವಂತೆ ಮಾಡಲಿದ್ದಾರೆ. ಇದು ರಾಜ್ಯದ ಜನತೆಗೆ ಹೆಮ್ಮೆ ತರುವ ವಿಷಯವಾಗಿದೆ. ಕೆಂಪೇಗೌಡರು ಓರ್ವ ಯಶಸ್ವಿ ಆಡಳಿತಗಾರ. ನೀರಾವರಿ, ಎಲ್ಲ ಕುಲ ಕಸುಬುಗಳಿಗೆ ದೇವಾಲಯ, ಕೆರೆ ಕಟ್ಟೆಗಳನ್ನು ಕಟ್ಟಿದರು. ಅವರ ಅವಧಿಯಲ್ಲಿ ಒಂದೇ ಒಂದು ಜಾತಿ ಗಲಭೆ ಆಗಲಿಲ್ಲ ಎಂದ ಅವರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಾಣವಾಗುವ ಬಡಾವಣೆಗಳಲ್ಲಿ ಕೆಂಪೇಗೌಡರ ಪರಿಕಲ್ಪನೆಯ ಎಲ್ಲ ರೀತಿಯ ಅಭಿವೃದ್ದಿಗಳು ಆಗಿ, ಆ ನಗರಕ್ಕೆ ಕೆಂಪೇಗೌಡ ನಗರ ಎಂಬ ಹೆಸರು ಇಡುವ ಆಸೆ ನನಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ನಾಡುಗಳನ್ನು ಕಟ್ಟಿ ಬೆಳೆಸಿದ ಮಹನೀಯರು ಮತ್ತು ಅವರ ಸಾಧನೆ ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ನಮ್ಮ ಜಿಲ್ಲೆಯೂ ಸಂಗ್ರಾಮದಲ್ಲಿ ಉತ್ತಮ ಛಾಪು ಮೂಡಿಸಿದೆ. ಕೆಂಪೇಗೌಡರು ಎಲ್ಲರೂ ಅನುಸರಿಸಬಹುದಾದ ನಾಯಕ. ಅವರು ಸರ್ವ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದರು ಎಂಬುದಕ್ಕೆ ಬೆಂಗಳೂರು ನಗರವೇ ಸಾಕ್ಷಿಯಾಗಿದೆ. ಅಂತಹ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಗಣ್ಯರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೃತ್ತಿಕೆ ಸಂಗ್ರಹಿಸಿ ನೀಡಿದರು. ಮಹಿಳೆಯರು ಪೂರ್ಣ ಕುಂಭದೊಂದಿಗೆ ರಥವನ್ನು ಸ್ವಾಗತಿಸಿದರು. ಮೃತ್ತಿಕೆ ಸಂಗ್ರಹಿಸುವ ಅಭಿಯಾನದ ರಥವು ಜಿಲ್ಲೆಯ ಎಲ್ಲಾ ತಾಲ್ಲೂಕು, ನಗರ ಪ್ರದೇಶ, ಗ್ರಾ.ಪಂ ಗಳಲ್ಲಿ ಸಂಚಾರ ಮಾಡಲಿದೆ. ರಥವು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಹೊರಟು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶರಾವತಿ ನಗರದ ಆದಿಚುಂಚನಗಿರಿ ಶಾಖಾಮಠ, ಚಿಕ್ಕಲ್ ಅರಕೇಶ್ವರ ದೇವಸ್ಥಾನ ಸಾಗಲಿದೆ. ಆ ನಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿಗದಿಪಡಿಸಿದ ಮಾರ್ಗನಕ್ಷೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಸ್ಥಳಗಳಿಗೆ ತೆರಳಿ ನ.4 ರವರೆಗೆ ಮೃತ್ತಿಕೆ ಸಂಗ್ರಹ ಮಾಡಲಿದ್ದು, ನ.5 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೃತ್ತಿಕೆಗಳ ಪ್ರದರ್ಶನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವಿರುತ್ತದೆ. ನ.5 ರಂದು ಬೆಳಿಗ್ಗೆ 11 ಗಂಟೆಗೆ ಭದ್ರಾವತಿ ಮಾರ್ಗವಾಗಿ ಬೆಂಗಳೂರಿಗೆ ರಥ ತೆರಳಲಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಕೆ.ಬಿ.ಅಶೋಕನಾಯ್ಕ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಸಿಇಓ ಎನ್‍ಡಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.
(ಫೋಟೊ ಇದೆ)