ಕಳೆದ ಸಾಲಿನ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿಯೂ ಸಹ ಈ ಬೆಳೆಯಲ್ಲಿ ಸೈನಿಕ ಹುಳು ಕಾಣಿಸಿಕೊಳ್ಳುವ ಸಂಭವವಿರುವುದರಿಂದ ತಪ್ಪದೇ ಮುಂಜಾಗ್ರತಾ ಹತೋಟಿ ಕ್ರಮಗಳನ್ನು ಅನುಸರಿಸಲು ರೈತ ಬಾಂಧವರಲ್ಲಿ ವಿನಂತಿಸಿದೆ.
ಸೈನಿಕ ಹುಳು
ಕೀಟ ಬಾಧೆಯ ಲಕ್ಷಣಗಳು : ಸೈನಿಕ ಹುಳು – ಫಾಲ್ ಆರ್ಮಿ ವರ್ಮ್ ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿನ್ನುತ್ತದೆ ಮತ್ತು ಕೇವಲ ಎಲೆ ಮದ್ಯದ ದೇಟನ್ನು ಉಳಿಸುತ್ತದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹತೋಟಿ ಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಸಾಂಘಿಕವಾಗಿ ಶೀಘ್ರವಾಗಿ ಕ್ರಮಕೈಗೊಳ್ಳುವುದು ಅವಶ್ಯಕ.
ಹತೋಟಿ ಕ್ರಮಗಳು :
ಬೇಸಾಯ ಕ್ರಮಗಳು: ಆಳವಾದ ಉಳುಮೆ ಮಾಡುವುದು, ಸಕಾಲದಲ್ಲಿ ಬಿತ್ತನೆ ಮಾಡುವುದು(ಜೂನ್ ಮಾಹೆಯ ಅಂತ್ಯದೊಳಗಾಗಿ ಬಿತ್ತನೆ ಕಾರ್ಯ ಪೂರ್ಣಗೊಳಿಸುವುದು), ಮುಸುಕಿನ ಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ/ಹೆಸರು ಬಿತ್ತನೆ ಮಾಡುವುದು, ಬೆಳೆಯ ಸುತ್ತಲು 3-4ಸಾಲು ಆಕರ್ಷಕ ಬೆಳೆಗಳನ್ನು(ಉದಾ:ನೇಪಿಯಾರ್ ಹುಲ್ಲು) ಬೆಳೆಯುವುದು, ರಸಗೊಬ್ಬರಗಳ ಸಮತೋಲನ ಬಳಕೆ, ಕೀಟದ ಮೊಟ್ಟೆ ಮತ್ತು ಹುಳುಗಳನ್ನು ಆರಿಸಿ ನಾಶ ಮಾಡುವುದು.
ಬೀಜೋಪಚಾರ: 1 ಕೆಜಿ ಬಿತ್ತನೆ ಬೀಜಕ್ಕೆ 4ಗ್ರಾಂ ಸಯಂಟ್ರನಿಲಿಪ್ರೋಲ್ 19.8% + ಥಯೋಮೆಥಾಕ್ಸಾಮ್ 19.8 % ರಾಸಾಯನಿಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬಿತ್ತನೆ ಮಾಡಿದ 2-3 ವಾರಗಳ ವರೆಗೆ ಹುಳುವಿನಿಂದ ರಕ್ಷಣೆ ನೀಡುತ್ತದೆ.
ರಾಸಾಯನಿಕ ಕ್ರಮಗಳು: ಸೈನಿಕ ಹುಳುವಿನ ಹತೋಟಿಗಾಗಿ 0.4 ಗ್ರಾಂ ಎಮಮೆಕ್ಟಿನ್ ಬೆಂಜೋಯೇಟ್ 5 % Sಅ ಅಥವಾ 0.4ಮಿಲಿ ಕ್ಲೋರಂತ್ರನಿಲಿಪ್ರೊಲ್ 18.5% Sಅ ಅಥವಾ 0.5 ಮಿಲಿ ಥಯೋಮೆಥಾಕ್ಸಾಮ್ 12.6 %+ ಲ್ಯಾಂಬ್ಡಸೈಹಲೋತ್ರಿನ್ 9.5 %. ಪ್ರತಿ ಲೀಟರ್ ನೀರಿಗೆ ಬೆರಸಿ ಸಂಜೆಯ ಸಮಯದಲ್ಲಿ ಸಿಂಪಡಿಸಬೇಕು. ಎಕರೆಗೆ 200-250 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
ವಿಷ ಪಾಷಾಣವನ್ನು ಬಳಸಿ ಪರಿಣಾಮಕಾರಿ ಹತೋಟಿ ಸಾದ್ಯ: 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ ಮತ್ತು 2-3 ಲೀಟರ್ ನೀರು ಬೆರೆಸಿ 24 ಗಂಟೆ ನೆನೆಸುವುದು, ನಂತರ 100 ಗ್ರಾಂ ಥಯೋಡಿಕಾರ್ಬ್ ಕೀಟನಾಶಕವನ್ನು ಬೆರೆಸಿ ಅರ್ಧ ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಉದುರಿಸಬೇಕು
ಸೈನಿಕ ಹುಳು ನಿರ್ವಹಣೆಯಲ್ಲಿ ಎಚ್ಚರಿಕೆ ಕ್ರಮಗಳು:
- ದಿನನಿತ್ಯ ಜಮೀನಿನ ಪರಿವೀಕ್ಷಣೆ ಅತಿ ಮುಖ್ಯ.
- ಎಕರೆಗೆ 2ರಂತೆ ಮೊಹಕ ಬಲೆಗಳನ್ನು ಬಳಸುವುದು.
- ಗ್ರಾಮದ ರೈತರು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಅನುಸರಿಸುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಕೋರಿದೆ
ದಿನಾಂಕ: 08.05.2019
(ಡಾ. ಎಂ. ಕಿರಣ್ಕುಮಾರ್)
ಜಂಟಿ ಕೃಷಿ ನಿರ್ದೇಶಕರು,
ಶಿವಮೊಗ್ಗ