ಕಳೆದ ಸಾಲಿನ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ (FALL ARMY WORM) ಬಾಧೆ ಕಂಡು ಬಂದಿದ್ದು, ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿಯೂ ಸಹ ಈ ಬೆಳೆಯಲ್ಲಿ ಸೈನಿಕ ಹುಳು ಕಾಣಿಸಿಕೊಳ್ಳುವ ಸಂಭವವಿರುವುದರಿಂದ ತಪ್ಪದೇ ಮುಂಜಾಗ್ರತಾ ಹತೋಟಿ ಕ್ರಮಗಳನ್ನು ಅನುಸರಿಸಲು ರೈತ ಬಾಂಧವರಲ್ಲಿ ವಿನಂತಿಸಿದೆ.
ಸೈನಿಕ ಹುಳು (Fall Army worm)
ಕೀಟ ಬಾಧೆಯ ಲಕ್ಷಣಗಳು : ಸೈನಿಕ ಹುಳು – ಫಾಲ್ ಆರ್ಮಿ ವರ್ಮ್ ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿನ್ನುತ್ತದೆ ಮತ್ತು ಕೇವಲ ಎಲೆ ಮದ್ಯದ ದೇಟನ್ನು ಉಳಿಸುತ್ತದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹತೋಟಿ ಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಸಾಂಘಿಕವಾಗಿ ಶೀಘ್ರವಾಗಿ ಕ್ರಮಕೈಗೊಳ್ಳುವುದು ಅವಶ್ಯಕ.
ಹತೋಟಿ ಕ್ರಮಗಳು :
ಬೇಸಾಯ ಕ್ರಮಗಳು: ಆಳವಾದ ಉಳುಮೆ ಮಾಡುವುದು, ಸಕಾಲದಲ್ಲಿ ಬಿತ್ತನೆ ಮಾಡುವುದು(ಜೂನ್ ಮಾಹೆಯ ಅಂತ್ಯದೊಳಗಾಗಿ ಬಿತ್ತನೆ ಕಾರ್ಯ ಪೂರ್ಣಗೊಳಿಸುವುದು), ಮುಸುಕಿನ ಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ/ಹೆಸರು ಬಿತ್ತನೆ ಮಾಡುವುದು, ಬೆಳೆಯ ಸುತ್ತಲು 3-4ಸಾಲು ಆಕರ್ಷಕ ಬೆಳೆಗಳನ್ನು(ಉದಾ:ನೇಪಿಯಾರ್ ಹುಲ್ಲು) ಬೆಳೆಯುವುದು, ರಸಗೊಬ್ಬರಗಳ ಸಮತೋಲನ ಬಳಕೆ, ಕೀಟದ ಮೊಟ್ಟೆ ಮತ್ತು ಹುಳುಗಳನ್ನು ಆರಿಸಿ ನಾಶ ಮಾಡುವುದು.
ಬೀಜೋಪಚಾರ: 1 ಕೆಜಿ ಬಿತ್ತನೆ ಬೀಜಕ್ಕೆ 4ಗ್ರಾಂ ಸಯಂಟ್ರನಿಲಿಪ್ರೋಲ್ 19.8% + ಥಯೋಮೆಥಾಕ್ಸಾಮ್ 19.8 % ರಾಸಾಯನಿಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬಿತ್ತನೆ ಮಾಡಿದ 2-3 ವಾರಗಳ ವರೆಗೆ ಹುಳುವಿನಿಂದ ರಕ್ಷಣೆ ನೀಡುತ್ತದೆ.
ರಾಸಾಯನಿಕ ಕ್ರಮಗಳು: ಸೈನಿಕ ಹುಳುವಿನ ಹತೋಟಿಗಾಗಿ 0.4 ಗ್ರಾಂ ಎಮಮೆಕ್ಟಿನ್ ಬೆಂಜೋಯೇಟ್ 5 % SC ಅಥವಾ 0.4ಮಿಲಿ ಕ್ಲೋರಂತ್ರನಿಲಿಪ್ರೊಲ್ 18.5% SC ಅಥವಾ 0.5 ಮಿಲಿ ಥಯೋಮೆಥಾಕ್ಸಾಮ್ 12.6 %+ ಲ್ಯಾಂಬ್ಡಸೈಹಲೋತ್ರಿನ್ 9.5 %. ಪ್ರತಿ ಲೀಟರ್ ನೀರಿಗೆ ಬೆರಸಿ ಸಂಜೆಯ ಸಮಯದಲ್ಲಿ ಸಿಂಪಡಿಸಬೇಕು. ಎಕರೆಗೆ 200-250 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
ವಿಷ ಪಾಷಾಣವನ್ನು ಬಳಸಿ ಪರಿಣಾಮಕಾರಿ ಹತೋಟಿ ಸಾದ್ಯ: 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ ಮತ್ತು 2-3 ಲೀಟರ್ ನೀರು ಬೆರೆಸಿ 24 ಗಂಟೆ ನೆನೆಸುವುದು, ನಂತರ 100 ಗ್ರಾಂ ಥಯೋಡಿಕಾರ್ಬ್ ಕೀಟನಾಶಕವನ್ನು ಬೆರೆಸಿ ಅರ್ಧ ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಉದುರಿಸಬೇಕು
ಸೈನಿಕ ಹುಳು ನಿರ್ವಹಣೆಯಲ್ಲಿ ಎಚ್ಚರಿಕೆ ಕ್ರಮಗಳು:

  1. ದಿನನಿತ್ಯ ಜಮೀನಿನ ಪರಿವೀಕ್ಷಣೆ ಅತಿ ಮುಖ್ಯ.
  2. ಎಕರೆಗೆ 2ರಂತೆ ಮೊಹಕ ಬಲೆಗಳನ್ನು ಬಳಸುವುದು.
  3. ಗ್ರಾಮದ ರೈತರು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಕೋರಿದೆ
ದಿನಾಂಕ: 08.05.2019
(ಡಾ. ಎಂ. ಕಿರಣ್‍ಕುಮಾರ್)
ಜಂಟಿ ಕೃಷಿ ನಿರ್ದೇಶಕರು,
ಶಿವಮೊಗ್ಗ

error: Content is protected !!