ಶಿವಮೊಗ್ಗ, ಫೆ.6: ಮಳೆಗಾಲಕ್ಕಿಂತ ಪೂರ್ವದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೆಪ್ಟಂಬರ್ ಮಧ್ಯ ವಾರದಿಂದ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಿದರೆ ಮಂಗನ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು ಮಂಗನ ಕಾಯಿಲೆಯನ್ನು ತಡೆಯುವ ಬಗ್ಗೆ ರಚಿಸಲಾದ ವಿಚಾರಣಾ ಸಮಿತಿಯ ಸದಸ್ಯ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಅಭಿಪ್ರಾಯಪಟ್ಟರು.
ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾಗರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಗನ ಕಾಯಿಲೆಯ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯನ್ನು ಒದಗಿಸುವಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆಯನ್ನು ನಡೆಸಿ, ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ವಿಚಾರಣೆಯನ್ನು ಕೈಗೊಳ್ಳಲು ಹಾಗೂ ಮುಂದಿನ ದಿನಗಳಲ್ಲಿ ಈ ಕಾಯಿಲೆ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ಸರ್ಕಾರ ದ್ವಿಸದಸ್ಯ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸಿ: ಮಂಗನ ಕಾಯಿಲೆ ನಿಯಂತ್ರಣ ಕುರಿತಾಗಿ ಬಹಳ ಹಿಂದೆಯೇ ನಿರ್ದಿಷ್ಟ ಮಾರ್ಗಸೂಚಿ (ಎಸ್‍ಒಪಿ) ಯನ್ನು ರಚಿಸಲಾಗಿದೆ. ಎಲ್ಲಾ ಇಲಾಖೆಗಳ ಜವಾಬ್ದಾರಿ ಹಾಗೂ ಕೈಗೊಳ್ಳಬೇಕಾದ ಏಕರೂಪದ ಕ್ರಮಗಳ ಬಗ್ಗೆ ಇದರಲ್ಲಿ ಸ್ಪಷ್ಟಪಡಿಸಲಾಗಿದೆ. ಮಳೆಗಾಲಕ್ಕಿಂತ ಪೂರ್ವದಲ್ಲೇ ಮಂಗನ ಕಾಯಿಲೆ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳಿಗೆ ಚಾಲನೆ ನೀಡಿ, ಡಿಎಂಪಿ ತೈಲ ಹಾಗೂ ಲಸಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಬೇಕು. ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಂಗನ ಕಾಯಿಲೆಯಿಂದ ಸಾವು ನೋವಾಗುವುದನ್ನು ತಪ್ಪಿಸಬಹುದಾಗಿದೆ. ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಏಳೆಂಟು ಸಾವು ಸಂಭವಿಸಿದೆ ಎಂದರೆ ನಿರ್ವಹಣೆಯಲ್ಲಿ ಎಲ್ಲೋ ಲೋಪವಾಗಿದೆ ಎಂದರ್ಥ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಾಗರದಲ್ಲಿ ಈ ಹಿಂದೆ ಆರಂಭಿಸಲಾಗಿದ್ದ ಕೆಎಫ್‍ಡಿ ಘಟಕದಲ್ಲಿ ವೈದ್ಯಾಧಿಕಾರಿ ಹಾಗೂ ತಜ್ಞ ಸಿಬ್ಬಂದಿಗಳು ಇಲ್ಲದ ಕಾರಣ ಹಿನ್ನಡೆ ಉಂಟಾಗಿರುವುದನ್ನು ಗಮನಿಸಲಾಗಿದೆ. ಈ ಘಟಕದಲ್ಲಿ ಅಗತ್ಯ ವೈದ್ಯಾಧಿಕಾರಿ, ಎಂಟಮಾಲಜಿಸ್ಟ್ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ನೆರೆಯ ಜಿಲ್ಲೆಗಳಿಂದ ಮಂಗಗಳನ್ನು ರಾತ್ರಿ ವೇಳೆ ಜಿಲ್ಲೆಯ ಕಾಡುಗಳ ಬಳಿ ಬಿಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದರಿಂದ ಜಿಲ್ಲೆಯಲ್ಲಿ ಮಂಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ನೋಡಲ್ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಸಮಿತಿಯ ಸದಸ್ಯ ಡಾ.ಶಿವಕುಮಾರ್ ವೀರಯ್ಯ ಮಾಜಿ ನಿರ್ದೇಶಕರು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅಪರ ಜಿಲ್ಲಾಧಿಕಾರಿ ಅನುರಾಧ, ಡಿಎಚ್‍ಒ ರಾಜೇಶ್ ಸುರಗಿಹಳ್ಳಿ, ಡಾ.ಕಿರಣ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!