ಶಿವಮೊಗ್ಗ, ಸೆ.09 : ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಈಗಾಗಲೇ ಕೌಶಲ್ಯ ತರಬೇತಿ ಪಡೆದಿರುವವರು ಅದೇ ಕ್ಷೇತ್ರದಲ್ಲಿ ಮುಂದುವರೆಯಲು ಬ್ಯಾಂಕ್ ಸಾಲ ಸೇರಿದಂತೆ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲ್ಯ ಮಿಷನ್ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.
ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿಯನ್ನು ಪಡೆದಿರುವ ಫಲಾನುಭವಿಗಳು ತರಬೇತಿ ಬಳಿಕ ಸದರಿ ಉದ್ಯೋಗವನ್ನು ಮುಂದುವರೆಸಿದ್ದಾರೆಯೆ ಎಂಬುವುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಬೇಕು. ಕೌಶಲ್ಯ ತರಬೇತಿ ನೀಡಿದ ಬಳಿಕ ಅವರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುವಂತೆ ನೆರವು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ 16-35ವರ್ಷ ಒಳಗಿನ ಯುವಕ ಯುವತಿಯರು ಯೋಗ್ಯ ಉದ್ಯೋಗ ಹೊಂದಲು ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಪುನರಾವರ್ತನೆಯನ್ನು ತಪ್ಪಿಸಬೇಕು. ಒಬ್ಬರಿಗೆ ಒಂದು ಬಾರಿ ಮಾತ್ರ ಅವರು ಬಯಸುವ ವೃತ್ತಿಯಲ್ಲಿ ತರಬೇತಿಯನ್ನು ನೀಡಬೇಕು. ಎಲ್ಲಾ ಇಲಾಖೆಗಳ ತರಬೇತಿ ಕಾರ್ಯಕ್ರಮಗಳನ್ನು ಕ್ರೋಢೀಕರಿಸಿ, ರಾಷ್ಟ್ರೀಯ ಮಾನದಂಡದ ಪ್ರಕಾರ ಏಕರೂಪದ ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಕೌಶಲ್ಯ ಕರ್ನಾಟಕ ಯೋಜನೆಯಡಿ ಕೌಶಲ್ಯ ತರಬೇತಿ ಪಡೆಯಲು ಒಟ್ಟು 21725ಮಂದಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ಇವರಲ್ಲಿ ಕಳೆದ ಸಾಲಿನಲ್ಲಿ 430ಮಂದಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗಿದೆ. ಪ್ರಸ್ತುತ ವರ್ಷ ಯೋಜನೆಯಡಿ 840 ಫಲಾನುಭವಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, 1.13ಕೋಟಿ ರೂ. ಅನುದಾನವಿದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗಣಪತಿ ಸಿ.ನಾಯ್ಕ ಅವರು ಸಭೆಗೆ ಮಾಹಿತಿ ನೀಡಿದರು.
ಎನ್‍ಆರ್‍ಎಲ್‍ಎಂ ಯೋಜನೆಯಡಿ ಬ್ಯಾಂಕ್ ಸಾಲ ಫಲಾನುಭವಿಗಳಿಗೆ ನೀಡಿರುವ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಬೇಕು. ಈ ಯೋಜನೆ ಅನುಷ್ಟಾನಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಕ್ಕೂಟಗಳ ರಚನೆಯ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಹೇಳಿದರು.