ಶಿವಮೊಗ್ಗ, ಜನವರಿ 25 : 60ರ ದಶಕದಲ್ಲಿ ವಿದೇಶದಿಂದ ಆಮದಾಗುತ್ತಿದ್ದ ಅಡಿಕೆ ಇಂದು ದೇಶದ 2.35ಲಕ್ಷ ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 4.36ಲಕ್ಷ ಟನ್ ಇಳುವರಿ ಬರುತ್ತಿದೆ. ಇಂದು ಅಡಿಕೆ ಬೆಳೆ ಒಂದರಿಂದಲೇ ದೇಶದ ಆರ್ಥಿಕ ವ್ಯವಸ್ಥೆಗೆ ಸು.15,000ಕೋಟಿ ರೂ.ಗಳ ವಾರ್ಷಿಕ ವರಮಾನ ಸಂದಾಯವಾಗುತ್ತಿದೆ ಎಂದು ನವಿಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಅಡಿವಪ್ಪರ್ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೃಷಿಗೋಷ್ಟಿಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ವಿಷಯ ಮಂಡಿಸಿ ಮಾತನಾಡುತ್ತಿದ್ದರು. ದೇಶದ 30ಕೋಟಿ ಜನ ಅಡಿಕೆಯನ್ನೇ ಆಧಾರವಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವೇಳೆ ಅಡಿಕೆ ನಿಷೇಧವಾದರೆ ಆಗಬಹುದಾದ ಪರಿಣಾಮಗಳು ಘೋರ ಎಂಬುದನ್ನು ಅರಿತು ನಿರ್ಣಯ ಕೈಗೊಳ್ಳಬೇಕು. ಇದರೊಂದಿಗೆ ಅಡಿಕೆಯನ್ನು ವಾಣಿಜ್ಯ ಬೆಳೆಯನ್ನಾಗಿಯೇ ಪರಿಗಣಿಸಬೇಕು. ಬದಲಾಗಿ, ಅಡಿಕೆ ಪೇಯ, ಮಾರ್ಜಕ, ಚಾಕಲೇಟು, ಚೂಯಿಂಗ್‍ಗಂ, ಚಹಾ, ನೈಸರ್ಗಿಕ ಬಣ್ಣ ಮುಂತಾದ ಮೌಲ್ಯವರ್ಧಿತ ಅಡಿಕೆ ಉಪ ಉತ್ಪನ್ನಗಳ ಬಗ್ಗೆ ಒತ್ತು ನೀಡಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದವರು ನುಡಿದರು.
ಶಿವಮೊಗ್ಗ ಜಿಲ್ಲೆಯ ಶೇ.60ರಷ್ಟು ಆರ್ಥಿಕ ಸ್ಥಿತಿ ಅಡಿಕೆ ಬೆಳೆಯನ್ನಾಧರಿಸಿದೆ. ಅಡಿಕೆ ಬೆಳೆಯ ವೈಜ್ಞಾನಿಕ ವಿಧಾನ, ಪ್ರಾವೀಣ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಕೌಶಲ್ಯಯುಕ್ತ ಕೂಲಿಕಾರರ ಸಮಸ್ಯೆ, ಸಣ್ಣ ಹಿಡುವಳಿದಾರರು ಆಧುನಿಕ ಯಾಂತ್ರೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಇರುವ ಆರ್ಥಿಕ ಸಮಸ್ಯೆ ರೈತರನ್ನು ಹೈರಾಣಾಗಿಸಿದೆ ಎಂದವರು ನುಡಿದರು.
ರಾಜ್ಯದ ಸುಮಾರು 28ಜಿಲ್ಲೆಗಳ 140ತಾಲೂಕುಗಳಲ್ಲಿ ಅಡಿಕೆ ಕೃಷಿ ಮಾಡುವವರಿದ್ದಾರೆ. ಕಡೂರು ತಾಲೂಕಿನಲ್ಲಿ ರಾಜ್ಯದ ಅತಿಹೆಚ್ಚು ಅಡಿಕೆ ಬೆಳೆಯಲಾಗುತ್ತಿದೆ ಆದರೂ ಅಡಿಕೆ ಮರಗಳ ಸಂರಕ್ಷಣೆ ಒಂದು ಸವಾಲಾಗಿ ಪರಿಣಮಿಸಿದೆ. ಅಡಿಕೆ ಲಾಭದಾಯಕ ಬೆಳೆ ಎಂಬ ಕಾರಣಕ್ಕೆ ಹೆಚ್ಚಿನ ರೈತರು ಆಹಾರ ಬೆಳೆ ತ್ಯಜಿಸಿ, ತೋಟಗಾರಿಕೆ ಬೆಳೆಯತ್ತ ಒಲವು ಹೊಂದಿದ್ದಾರೆ ಇದರಿಂದಾಗಿಯೂ ಸಮಸ್ಯೆಗಳ ಉಲ್ಬಣವಾಗಿದೆ. ಅಡಿಕೆ ಬೆಳೆಯಲಿಚ್ಚಿಸುವವರು ವಾತಾವರಣಕ್ಕೆ ಪೂರಕವಾದ ಉತ್ತಮ ತಳಿಯ ವೈಜ್ಞಾನಿಕ ವಿಧಾನದಲ್ಲಿ ಬೆಳೆದ ಎತ್ತರದ ಗಿಡಗಳನ್ನೇ ಸರಿಯಾದ ಕ್ರಮದಲ್ಲಿ ನೆಡಬೇಕು. ಆದರೆ ರೈತರು ಇದನ್ನು ಅನುಸರಿಸುತ್ತಿಲ್ಲ. ಅಲ್ಲದೆ ಮಣ್ಣಿನ ಸಾರ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದವರು ನುಡಿದರು.
ಶೇ.80ರಷ್ಟು ರೈತರು ಬಹುಬೆಳೆ ಪದ್ದತಿಯನ್ನು ಅನುಸರಿಸುತ್ತಿಲ್ಲ. ಅಡಿಕೆಯನ್ನು ಬೆಳೆಯುವ ರೈತರು ಒಂದೇ ಬೆಳೆಯನ್ನು ನಂಬದೇ ಬಹುಬೆಳೆ ಪದ್ದತಿ ಅನುಸರಿಸಲು ಮುಂದಾಗಬೇಕು. ಕೋ-ಕೋ, ಕಾಳುಮೆಣಸು, ಜಾಯಿಕಾಯಿ, ಲವಂಗ ಮುಂತಾದ ಆರ್ಥಿಕ ತೋಟಗಾರಿಕೆ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಇದರಿಂದ ಅಡಿಕೆ ಬೆಳೆ ಕೈಹಿಡಿಯದಿದ್ದಲ್ಲಿ ಪರ್ಯಾಯವಾದ ಇಂತಹ ಆರ್ಥಿಕ ಲಾಭದಾಯಕ ಬೆಳೆಯಲ್ಲಿ ಲಾಭ ಕಂಡುಕೊಳ್ಳಬಹುದಾಗಿದೆ. ಕೋ-ಕೋ ಮತ್ತು ಕಾಳುಮೆಣಸು ದೇಶದಲ್ಲಿನ ಅಗತ್ಯಕ್ಕೆ ತಕ್ಕಷ್ಟು ಬೆಳೆ ಬೆಳೆಯಲಾಗದೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ದೇಶದಲ್ಲಿ ಬೆಳೆದ ಇಂತಹ ಬೆಳೆಗೆ ಬೇಡಿಕೆ ನಿರಂತರವಾಗಿರುತ್ತದೆ ಎಂದವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹವಾಮಾನ ಸಂವೇದಿ ಕೃಷಿ’ ಎಂಬ ವಿಷಯ ಕುರಿತು ಡಾ|| ಬಿ.ಎಂ.ಸೌಮ್ಯ ಅವರು ಮಾತನಾಡಿ, ಪ್ರಾಕೃತಿಕ ಅಸಮತೋಲನ, ಆಧುನಿಕ ಜೀವನ ವಿಧಾನಗಳು ತೋಟಗಾರಿಕೆ ಬೆಳೆಗೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ವಾತಾವರಣದಲ್ಲಿನ ಬದಲಾವಣೆ, ಅತಿಯಾದ ಸಂಪನ್ಮೂಲಗಳ ಬಳಕೆ, ಇಂಧನಗಳಿಂದುಂಟಾಗುವ ಅನಿಲ, ಕೈಗಾರಿಕೆಗಳ ತ್ಯಾಜ್ಯ ಮತ್ತು ಅರಣ್ಯ ನಾಶದಂತಹ ಅನೇಕ ಕಾರಣಗಳೂ ಹವಾಮಾನಾಧಾರಿತ ಕೃಷಿಗೆ ಅಡಚಣೆ ಉಂಟು ಮಾಡುತ್ತಿವೆ ಎಂದವರು ನುಡಿದರು.
ಹವಾಮಾನದ ಬದಲಾವಣೆ, ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಬೀಳುತ್ತಿರುವ ಮಳೆಯ ಸಮಸ್ಯೆ ಒಂದೆಡೆಯಾದರೆ, ಕೀಟ-ರೋಗಗಳು ವಾತಾವರಣಕ್ಕೆ ಸರಿಹೊಂದುವಂತಹ ಸ್ಥಳಗಳನ್ನು ಅರಸಿ ಹೋಗಲಿವೆ. ಇದೂ ಕೂಡ ಅನಾನುಕೂಲವಾಗುತ್ತಿದೆ. ಆದ್ದರಿಂದ ಹವಾಮಾನ ಬದಲಾವಣೆ ಕುರಿತು ರೈತರಿಗೆ ಮಾಹಿತಿ ನೀಡಲು ಕಾಲಕಾಲಕ್ಕೆ ಜಾಲತಾಣಗಳಲ್ಲಿ ಮಾಹಿತಿ ಲಭ್ಯವಾಗುತ್ತಿದೆ ಎಂದರು.
ಜೀವ ವೈವಿದ್ಯತೆ, ಪಕ್ಷಿ ಸಂಕುಲಗಳ ವೈವಿದ್ಯತೆಯನ್ನು ಕಾಪಾಡಿಕೊಳ್ಳಬೇಕು. ನೈಸರ್ಗಿಕವಾಗಿ ದೊರಕುವ ನೀರನ್ನು ಮಿತವಾಗಿ ಬಳಸಬೇಕು ಅಲ್ಲದೆ ಮಣ್ಣಿನ ಸಾರವನ್ನು ಸಂರಕ್ಷಿಸಿಕೊಳ್ಳಬೇಕು. ಈ ವಿಷಯದಲ್ಲಿ ವೆತ್ಯಾಸಗಳಾದ ಏರು-ಪೇರುಗಳಾಗುವುದು ಸಹಜ. ಆದ್ದರಿಂದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸದ್ಭಳಕೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಪ್ರಗತಿಪರ ರೈತ ಮದನ ಅವರು ಪ್ರತಿಕ್ರಿಯಿಸಿ, ಅಡಿಕೆ ಬೆಳೆ ಬೆಳೆಯುವುದು ಸುಲಭ ಆದರೆ ಕೊಳೆ ರೋಗ, ಕೀಟಗಳಿಂದ ರಕ್ಷಣೆ, ಮಳೆ ಮುಂತಾದವರು ಕಷ್ಟಕರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಪಿ.ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.

error: Content is protected !!