ಮಾರ್ಚ್- 18 : ಶಿವಮೊಗ್ಗದ ಹಳೇ ತಾಲೂಕು ಕಚೇರಿ ರಸ್ತೆಯ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಮಾ.19 ರಿಂದ 23 ರವರೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.
ಕೆ.ಎಸ್.ಐ.ಸಿ.ಯ ನಿರ್ದೇಶಕ ವಿಜಯಕುಮಾರ್ ಮಾ.19ರಂದು ಬೆಳಿಗ್ಗೆ 10 ಗಂಟೆಗೆ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸುವರು. ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ, ಕೆ.ಎಸ್.ಐ.ಸಿ ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ ಸೀರೆಗಳನ್ನು ಹಾಗೂ ಜಾರ್ಜೆಟ್ ಹಾಗೂ ಸಾದಾ ಮುದ್ರಿತ ಸೀರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಲ್ಲದೆ ನವನವೀನ ವಿವಾಹ ಸಂಗ್ರಹ ಸೀರೆಗಳು ಸಹ ಪ್ರದರ್ಶನದಲ್ಲಿ ಲಭ್ಯವಿದ್ದು ಶೇ.25ರಷ್ಟು ರಿಯಾಯಿತಿಯನ್ನು ಸಹ ನೀಡಲಿದೆ.
ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ (ಜಿಐ) ಪಡೆದುಕೊಂಡಿದೆ. ಈ ನೋಂದಣಿಯ ಪ್ರಕಾರ ಕೆ.ಎಸ್.ಐ.ಸಿ ಮೈಸೂರು ಸಿಲ್ಕ್ನ ಏಕೈಕ ಮಾಲಿಕತ್ವ ಹೊಂದಿದೆ. ಕೆ.ಎಸ್.ಐ.ಸಿ ನಿಗಮಕ್ಕೆ 2016-17 ರಿಂದ 2020-21ನೇ ಸಾಲಿನವರೆಗೆ ಸತತವಾಗಿ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುವ `ಮುಖ್ಯಮಂತ್ರಿಗಳ ವಾರ್ಷಿಕ ರತ್ನ’ ಪ್ರಶಸ್ತಿ ಲಭಿಸಿದೆ. ಕೆ.ಎಸ್.ಐ.ಸಿ 2012ರಲ್ಲಿ ಶತಮಾನೋತ್ಸವ ಪೂರೈಸಿದ ಕರ್ನಾಟಕ ಸರ್ಕಾರದ ಮೊದಲ ಸರ್ಕಾರಿ ಉದ್ಯಮವಾಗಿರುತ್ತದೆ.