ಭದ್ರಾವತಿ: ಕಲಿಕೆ ನಿರಂತರ, ಸರ್ಕಾರಿ ಸೇವೆಗೆ ಸೇರಿದ ನಂತರ ನಿವೃತ್ತಿ ಆಗುವವರೆಗೂ ಕಾಲ ಕಾಲಕ್ಕೆ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಹೊಸ ಹೊಸ ನಾವಿನ್ಯತೆಯನ್ನು ಅಳವಡಿಸಿಕೊಂಡು ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಕೆ ನಾಗೇಂದ್ರಪ್ಪ ಅಭಿಪ್ರಾಯ ಪಟ್ಟರು.
ಕ್ಷೇತ್ರ ಸಂಪನ್ಮೂಲ ಕೇಂದ್ರ, ಭದ್ರಾವತಿ ಇಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಉಪ ಪ್ರಾಂಶುಪಾಲರು, ಹಿರಿಯ ಸಹ ಶಿಕ್ಷಕರು ಹಾಗೂ ಇಲಾಖೆಯ ಎಲ್ಲಾ ಹಂತದ ಬೋಧಕೇತರ ನೌಕರರುಗಳಿಗೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ, ಖಜಾನೆ-2, ಆದಾಯ ತೆರಿಗೆ, ಜಿಎಸ್‍ಟಿ-ಸಿಎಸ್‍ಟಿ, ಎನ್‍ಪಿಎಸ್ ಯೋಜನೆಗಳ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಗಂಗಾಧರ ಗಡಗಲಿ ಮತ್ತು ಶ್ರೀ ಅಶೋಕ್ ರವರು ಭಾಗವಹಿಸಿ ಮೇಲ್ಕಂಡ ಇಲಾಖಾ ಯೋಜನೆಗಳ ಕುರಿತು ಅಧಿಕಾರಿಗಳು ಮತ್ತು ನೌಕರರಿಗೆ ತರಬೇತಿ ಮಾಹಿತಿ ನೀಡಿದರು. ಈ ತರಬೇತಿ ಕಾರ್ಯಾಗಾರದಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜಪ್ಪ ಆರ್, ಪತ್ರಾಂಕಿತ ವ್ಯವಸ್ಥಾಪಕರಾದ ಕೆ ಸುಮತಿ, ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಅಧ್ಯಕ್ಷರಾದ ಎಸ್ ಕೆ ಕಿರಣ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ಎಸ್ ತಿಪ್ಪೇಸ್ವಾಮಿ ಇವರು ಹಾಜರಿದ್ದರು.