ಶಿವಮೊಗ್ಗ, ಮಾರ್ಚ್ 03 : ಮಾವಿನ ಮರಗಳಲ್ಲಿ ಹೂವು ಕಚ್ಚುವುದು ತಡವಾಗಿರುವುದರಿಂದ ಇಳುವರಿಯೂ ಈ ಬಾರಿ ಕಡಿಮೆಯಾಗಲಿದೆ. ಇನ್ನು ಕೀಟ ಸಮಸ್ಯೆ ನಿವಾರಣೆಗೆ ಸಮಗ್ರ ಹತೋಟಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಇರುವ ಫಸಲನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಆ ಹಿನ್ನಲೆಯಲ್ಲಿ ರೈತರು ಮೋಹಕ ಬಲೆಗಳನ್ನು ಬಳಸುವುದು ಅತ್ಯವಶ್ಯಕ ಎಂದು ಮಾವು ಬೆಳಗಾರರಿಗೆ ತೋಟಗಾರಿಕೆ ಇಲಾಖೆಯು ಸೂಚಿಸಿದೆ.
ಹವಮಾನ ಏರುಪೇರಿನಿಂದ ಪ್ರಸಕ್ತ ಸಾಲಿನಲ್ಲಿ ಮಾವಿನ ಫಸಲು ಶೇ.50 ರಷ್ಟು ಕಡಿಮೆಯಾಗುವ ಸಂಭವವಿದ್ದು, ಉಳಿದ ಮಾವನ್ನು ಕೀಟಗಳಿಂದ ರಕ್ಷಿಸಿಕೊಂಡರೆ ರೈತರಿಗೆ ಉತ್ತಮ ಬೆಲೆ ದೊರೆಯುತ್ತದೆ. ಮಾವಿನಲ್ಲಿ ಕಂಡುಬರುವ ಪ್ರೂಟ್ ಪ್ಲೈ ( ಹಣ್ಣಿನ ನೊಣ) ಬಾಧೆಯಿಂದ ಪ್ರತಿ ವರ್ಷ ಸರಾಸರಿ ಶೇ. 25 ರಷ್ಟು ಇಳುವರಿ ನಷ್ಟವಾಗುತ್ತಿರುವ ಜೊತೆಗೆ ಗುಣಮಟ್ಟ ಕಳೆದುಕೊಂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ, ಹೀಗಾಗಿ ಕೀಟ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮೋಹಕ ಬಲೆ ಹೆಚ್ಚು ಸಹಕಾರಿಯಾಗಿದೆ.
ವಿದೇಶಗಳಿಗೆ ರಫ್ತು ಮಾಡುವ ಮಾವಿನ ಕಾಯಿ ಮತ್ತು ಹಣ್ಣುಗಳು ಫ್ರೂಟ್ ಪ್ಲೈ ಕೀಟಗಳಿಂದ ಮುಕ್ತವಾಗಿದೆಯೇ ಎಂಬುವುದನ್ನು ಪರಿಶೀಲಿಸಿದ ಬಳಿಕವೇ ರಫ್ತು ಮಾಡಲಾಗುತ್ತದೆ. ಒಂದೊಮ್ಮೆ ಈ ಕೀಟದ ಮರಿಗಳಿರುವುದು ಕಡುಬಂದರೆ ಅಂತಹ ಹಣ್ಣುಗಳನ್ನು ರಫ್ತಿಗೆ ತೆಗೆದುಕೊಳ್ಳುವುದಿಲ್ಲ. ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಬಂಗೆನಪಲ್ಲಿ ಮಾವು ಬೆಳೆಯುವವರು ಕೀಟಗಳ ಬಗ್ಗೆ ಎಚ್ಚರ ವಹಿಸಬೇಕು.
ಬಲಿತ ಕಾಯಿಗಳ ಮೇಲೆ ಹಣ್ಣು ನೊಣಗಳು ಚುಚ್ಚಿ ಸಿಪ್ಪೆಯ ಒಳಭಾಗದ ತಿರುಳಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ತಿರುಳಿನ ಒಳಗೆ ಮೊಟ್ಟೆಯಿಂದ ಹೊರಬರುವ ಮರಿಹುಳುಗಳು ತಿರುಳುನ್ನು ತಿನ್ನುತ್ತಾ ಬೆಳೆಯುತ್ತದೆ ಇದರಿಂದ ಹಣ್ಣಿನ ತಿರುಳು ಕೊಳೆಯುತ್ತಾ ಹೋಗಿ ಕೀಟ ಬಾಧೆಯಿರುವ ಹಣ್ಣು/ಕಾಯಿ ಮೇಲೆ ರಂಧ್ರಗಳು ಕಂಡುಬಂದು ನಿರೀಕ್ಷೆಗಿಂತ ಮೊದಲೇ ಹಣ್ಣಾಗಿ ಅಥವಾ ಕೊಳೆತು ಉದುರುತ್ತವೆ. ಹೀಗಾಗಿ ನಿಯಮಿಯವಾಗಿ ಕೀಟನಾಶಕ ಸಿಂಪಡಣೆ ಜೊತೆಗೆ ಮೋಹಕ ಬಲೆಗಳ ಬಳಕೆಯಿಂದ ರೈತರು ಉತ್ತಮ ಗುಣಮಟ್ಟದ ಫಸಲನ್ನು ಪಡೆಯಬಹುದಾಗಿದೆ.
ಮೋಹಕ ಬಲೆಯನ್ನು ಮನೆಯಲ್ಲೇ ತಯಾರಿಸುವ ವಿಧಾನ
ಒಂದು ಲೀಟರ್ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಸ್ವಚ್ಛಗೊಳಿಸಿಕೊಂಡು, ಬಾಟಲಿನ ಬಾಯಿಯಿಂದ 3-4 ಇಂಚುಗಳ ಕೆಳಗೆ ಎರಡು ದಿಕ್ಕುಗಳಲ್ಲಿ ಎದುರು ಬದುರಾಗಿ ಭ್ಲೇಡ್ನಿಂದ 2 ಸೆ.ಮೀ. ಅಳತೆಯ ರಂಧ್ರಗಳನ್ನು ಮಾಡಬೇಕು. ಒಂದು ಪ್ಲೈವುಡ್ ತುಂಡನ್ನು 2ಸೆ.ಮಿ. ಅಗಲ 5 ಸೆ.ಮೀ. ಉದ್ದ ಅಳತೆಯಲ್ಲಿ ಕತ್ತರಿಸಬೇಕು. ಬಳಿಕ ಮಿಥೈಲ್ ಯುಜಿನಾಲ್ ಹಾಗೂ ಡೈಕ್ಲೊರೊವಾಸ್ ತಲಾ 1 ಮಿ.ಲೀ. ಪ್ಲೈವುಡ್ ತುಂಡುಗಳಿಗೆ ಲೇಪಿಸಬೇಕು. ಪ್ಲೈವುಡ್ ತುಂಡನ್ನು ದಾರ ಅಥವಾ ತಂತಿಯ ಸಹಾಯದಿಂದ ಬಾಟಲಿಯ ಒಳಗೆ ಸೇರಿಸಿ ಮರಗಳಿಗೆ ಕಟ್ಟಬೇಕು. ಕೊಯ್ಲಿನವರೆಗೆ ಪ್ರತಿ 10 ದಿನಗಳಿಗೊಮ್ಮೆ ಔಷದಿ ಲೇಪಿಸಬೇಕು.
ಮಾವಿನಲ್ಲಿ ಹಣ್ಣಿನ ನೊಣದ ನಿಯಂತ್ರಣಕ್ಕೆ ಪ್ರತಿ ಹೆಕ್ಟೆರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗು ಹಾಕಬೇಕು. ಈ ಬಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಮಿ.ಲೀ ಮಿಥೈಲ್ ಯುಜಿನಾಲ್ ಮತ್ತು 1 ಮಿ.ಲೀ. ಮೆಲಥಿಯಾನ್ 50 ಇ.ಸಿ. ಅಥವಾ ಡೈಕ್ಲೊರೋವಾಸ್ ಬೆರೆಸಿದ ದ್ರಾವಣವನ್ನು ಉಪಯೋಗಿಸಬೇಕು. ಪ್ರತಿ ಮೋಹಕ ಬಲೆಯಲ್ಲಿ 100 ಮಿ.ಲೀ ದ್ರಾವಣವನ್ನು ಹಾಕಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.