ಜಿಲ್ಲೆಯಲ್ಲಿ ಮಾನ್ಸೂನ್ ಮುಗಿಯುವ ತನಕ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರಳು ಗಣಿಗಾರಿಕೆಯನ್ನು ಜೂನ್ 6ರಿಂದ ಮಾನ್ಸೂನ್ ಮುಕ್ತಾಯವಾಗುವ ತನಕ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸ್ಟಾಕ್‍ಯಾರ್ಡ್‍ಗಳಲ್ಲಿರುವ ಮರಳನ್ನು ನಿಗದಿತ ಕಾಲಮಿತಿಯ ಒಳಗಾಗಿ ಸಾಗಾಣಿಕೆ ಮಾಡಲು ಅವಕಾಶ ನೀಡಲಾಗುವುದು. ಮಾನ್ಸೂನ್ ಅವಧಿಯಲ್ಲಿ ಮರಳುಗಾರಿಕೆಯನ್ನು ಯಾವುದೇ ಕಾರಣಕ್ಕೂ ನಡೆಯಲು ಅವಕಾಶ ನೀಡಬಾರದು. ತಾಲೂಕು ಮಟ್ಟದ ಸಮಿತಿಯು ಇದಕ್ಕೆ ಜವಾಬ್ದಾರಿಯಾಗಿರುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ತಪಾಸಣೆ ತೀವ್ರಗೊಳಿಸಿ: ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದ ವರೆಗೆ ಅಕ್ರಮ ಮರಳು ಸಾಗಾಣಿಕೆ ಸಂಬಂಧ 16ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1.48ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಮರಳು ಸಾಗಾಣಿಕೆಯಿಂದ 24.23ಲಕ್ಷ ರೂ. ರಾಜಧನ ಸಂಗ್ರಹಿಸಲಾಗಿದೆ. ಹೆಚ್ಚುವರಿ ನಿಯತಕಾಲಿಕ ಪಾವತಿ ಮೊತ್ತ ರೂ.2.61ಕೋಟಿ ರೂ. ಸಂಗ್ರಹಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ 8ಲಕ್ಷ ರೂ. ರಾಜಧನ ದಂಡ ಪಡೆಯಲಾಗಿದೆ. ಕಟ್ಟಡ ಕಲ್ಲುಗಣಿಗಾರಿಕೆಯಿಂದ 8.78 ಲಕ್ಷ ರೂ. ರಾಜಧನ ಪಡೆಯಲಾಗಿದ್ದು, ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ 3.96ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಮಾಹಿತಿ ನೀಡಿದರು.
ಅನಧಿಕೃತವಾಗಿ ಮರಳುಗಾರಿಕೆ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ತಪಾಸಣೆಯನ್ನು ತೀವ್ರಗೊಳಿಸಬೇಕು ಮತ್ತು ಸರ್ಕಾರಿ ಆಸ್ತಿ ಕಳ್ಳತನದ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಳ್ಳಕೊಳ್ಳದಿಂದ ಮರಳು ತೆಗೆಯಲು ಬ್ಲಾಕ್ ಗುರುತಿಸುವ ಕುರಿತು ತಾಲೂಕು ಮಟ್ಟದ ಸಮಿತಿಯಿಂದ ಶಿಫಾರಸು ಬಂದರೆ ಜಿಲ್ಲಾ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಪರಿಶೀಲಿಸಿ ಅಧಿಸೂಚನೆ ಹೊರಡಿಸಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಯೋಜನಾ ನಿರ್ದೇಶಕ ವೀರಾಪುರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.