ಶಿವಮೊಗ್ಗ. ಮೇ 13 : ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯದೆ ನಡೆಸುತ್ತಿರುವ ಖಾಸಗಿ ಪ್ರಾಥಮಿಕ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಇಂದು ಶಾಲಾ ದಾಖಲಾತಿ ಹಾಗೂ ವ್ಯವಸ್ಥಿತ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಇಲಾಖೆಯ ನಿಯಮ ಮೀರಿ ಪೋಷಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಾಗೂ ಆರ್.ಟಿ.ಇ.ಯೋಜನೆಯಡಿ ದಾಖಲಾದ ಮಕ್ಕಳ ಪೋಷಕರಿಂದಲೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಿಂದ ಭಾರೀ ಪ್ರಮಾಣದ ದೂರುಗಳು ಕೇಳಿ ಬರುತ್ತಿದ್ದು ಇವುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪೂಷಕರಿಂದ ಹೆಚ್ಚಿನ ಹಣ ವಸೂಲಿ ಮಾಡಿರುವುದನ್ನು ಹಾಗೂ ಆರ್.ಟಿ.ಇ.ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಿರುವುದನ್ನು ಶಾಲಾ ಆಡಳಿತ ಮಂಡಳಿಯವರು ಹಿಂದಿರುಗಿಸಿ, ಸಂಬಂಧಿಸಿ ಇಲಾಖಾ ಮುಖ್ಯಸ್ಥರಿಗೆ ವರದಿ ನೀಡಬೇಕು. ಇವೆಲ್ಲವನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ಸಮಗ್ರ ವರದಿಯನ್ನು ಒಂದು ವಾರದೊಳಗಾಗಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಶಾಲೆಗಳ ಸೂಚನಾ ಫಲಕದಲ್ಲಿ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರ ನೀಡಬೇಕಾದ ಶುಲ್ಕಗಳ ವಿವರಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅನೇಕ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ, ದಾಖಲಾತಿಯಲ್ಲಿನ ಸಮಸ್ಯೆ, ವಾಹನ ವ್ಯವಸ್ಥೆ ಮುಂತಾದ ಲೋಪಗಳ ಕುರಿತು ನೋಟೀಸ್ ಜಾರಿಗೊಳಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಶಾಲೆಗಳ ಪರವಾನಿಗೆಯನ್ನು ಅಮಾನತ್ತುಗೊಳಿಸುವುದು ಅನಿವಾರ್ಯವಾಗಲಿದೆ. ಪೋಷಕರು ಪರವಾನಿಗೆ ನವೀಕರಿಸದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದಂತೆ ಅವರು ಸೂಚಿಸಿದರು.
ಶಾಲಾ ಮಕ್ಕಳನ್ನು ಕರೆದೊಯ್ಯಲು ಇರುವ ವಾಹನಗಳ ಸ್ಥಿತಿ-ಗತಿ, ವಾಹನ ಚಾಲಕನ ಅನುಭವ, ಮಾರ್ಗ, ವಾಹನ ಸಂಖ್ಯೆ, ವಾಹನ ವಿಮೆ ಮುಂತಾದವುಗಳನ್ನು ಶಾಲಾ ಆಡಳಿತ ಮಂಡಳಿಯವರು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸೂಚಿಸಿದ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರವಾನಿಗೆ ಪಡೆಯದೇ ನಡೆಸುತ್ತಿರುವ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ತಮ್ಮ ಸೂಚನೆಯ ನಂತರವೂ ಸುಧಾರಣೆ ಕಾಣದ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕು. ತಪ್ಪಿದಲ್ಲಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದವರು ನುಡಿದರು.
ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಂದಿರುವ ಫಲಿತಾಂಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ವಿಷಯ ಪರೀವೀಕ್ಷಕರು ಹಾಗೂ ವಿಷಯವಾರು ಶಿಕ್ಷಕರು ಫಲಿತಾಂಶದ ಹಿನ್ನೆಡೆಗೆ ಆತ್ಮಾವಲೋಕನ ಮಾಡಿಕೊಂಡು ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು. ತಪ್ಪಿದಲ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಅನಿವಾರ್ಯವಾಗಲಿದೆ ಎಂದವರು ನುಡಿದರು.
ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದ ಪ್ರೌಢಶಾಲೆಯ ಈ ಬಾರಿಯ ಫಲಿತಾಂಶ ಅತ್ಯಂತ ಕಳಪೆಯಾಗಿದ್ದು, ಆ ಶಾಲೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ಅಲ್ಲಿ ಈಗಾಗಲೇ ದಾಖಲಾಗಿರುವ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ದಾಖಲಿಸುವಂತೆಯೂ ಅವರು ಶಿಕಾರಿಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ, ಫಲಿತಾಂಶ ಸುಧಾರಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವರ್ತನೆಯನ್ನು ಕ್ಷಮಿಸಲಾಗುವುದಿಲ್ಲ ಎಂದ ಅವರು, ಭದ್ರಾವತಿ ತಾಲೂಕಿನಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿನಿಗೆ ಶಾಲಾ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಆದ ಆಕಸ್ಮಿಕ ಅಪಘಾತದಿಂದಾಗಿ ವಿದ್ಯಾರ್ಥಿನಿಯ ಭವಿಷ್ಯ ಪ್ರಶ್ನಾರ್ಹವಾಗಿದೆ. ಆ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿಯವರಿಂದ ಪರಿಹಾರ ಕ್ರಮಕೈಗೊಳ್ಳಲು ಸೂಚನೆ ನೀಡಬೇಕು. ಅಲ್ಲದೇ ಆ ಶಾಲೆಯ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ.ಆನಂದ್ ಅವರಿಗೆ ಸೂಚಿಸಿದರಲ್ಲದೇ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲು ಬಿ.ಇ.ಒ.ವಿರುದ್ಧ ನೋಟೀಸ್ ಜಾರಿಮಾಡುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಖಾಸಗಿ ಶಾಲೆಗಳಲ್ಲಿ ನೋಟ್ಪುಸ್ತಕ, ಸಮವಸ್ತ್ರಗಳನ್ನು ಕಡ್ಡಾಯವಾಗಿ ಕೊಳ್ಳುವಂತೆ ಒತ್ತಾಯ ಮಾಡುತ್ತಿರುವುದರ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಶಾಲಾ ಆವರಣದ ವ್ಯಾಪ್ತಿಯಲ್ಲಿ ಮಾರಾಟ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದರೂ ಆದೇಶವನ್ನು ನಿರ್ಲಕ್ಷ್ಯ ಮಾಡಿ, ಮಾರಾಟ ಮಾಡುವವರ ವಿರುದ್ಧವೂ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಸುಮಂಗಳಾ ಪಿ.ಕುಚಿನಾಡ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಇಮ್ತಿಯಾಜ್ ಅಹ್ಮದ್ ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.