News Next

ಶಿವಮೊಗ್ಗ. ಜೂನ್ 05 : ಮಾನವನ ಅಸ್ತಿತ್ವವು ಪ್ರಕೃತಿಯ ಮೇಲೆ ಅವಲಂಬಿತವಾಗಿದ್ದು, ಆರೋಗ್ಯಕರ ಮತ್ತು ಸುರಕ್ಷಿತ ಪರಿಸರವಿಲ್ಲದೆ ಮಾನವ ಸಮಾಜದ ಪರಿಕಲ್ಪನೆ ಅಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಪರಿಸರ ದಿನಾಚರಣೆ ನಿಮಿತ್ತ ಶಿವಮೊಗ್ಗ ಸಮೀಪದ ವಾಜಪೇಯಿ ಬಡಾವಣೆಯಲ್ಲಿ ನಮ್ಮ ಶಿವಮೊಗ್ಗದ ಪರಿಸರಾಸಕ್ತರು ಸಂಘಟನೆಯು ಸ್ಥಳೀಯ ಸಂಘ-ಸಂಸ್ಥೆಗಳು, ಸಾರ್ವಜನಿಕರ ದೇಣಿಗೆಯಿಂದ ಅಭಿವೃದ್ಧಿಪಡಿಸಿದ ಕೆರೆಯನ್ನು ವೀಕ್ಷಿಸಿ, ಕೆರೆಯ ಆವರಣದಲ್ಲಿ ರುದ್ರಾಕ್ಷಿ ಗಿಡನೆಟ್ಟು ನೀರೆರೆದ ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಪ್ರತಿಯೊಂದು ಜೀವಿಗೂ ಪರಿಸರ ಅತ್ಯಂತ ಅಮೂಲ್ಯ ಕೊಡುಗೆ ನೀಡಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರ-ಕಾಡುಗಳು ಮುಂತಾದವು ಎಂದೆಂದಿಗೂ ಇರುವಂತೆ ಉಳಿಸುವುದು ಅತ್ಯಂತ ಮಹತ್ವ ವಿಷಯವಾಗಿದೆ ಎಂದರು.
ಪ್ರಸ್ತುತ ಈ ಭಾಗದಲ್ಲಿನ ಅರಣ್ಯದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಲೇ ಇದೆ. ತಡೆಯಿಲ್ಲದೆ ಅರಣ್ಯ ಸಂಪತ್ತನ್ನು ಬರಿದಾಗುತ್ತಿದೆ. ಅರಣ್ಯ ನಾಶ, ಗಣಿಗಾರಿಕೆ ಮುಂತಾದ ಮಾನವ ಚಟುವಟಿಕೆಗಳಿಂದ ಪರಿಸರ ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪವನ್ನು ನಿಯಂತ್ರಿಸುವ, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು ನುಡಿದರು.
ಪರಿಸರದ ಉಳಿವು, ರಕ್ಷಣೆಯಲ್ಲಿ ಎದುರಾಗಬಹುದಾದ ಸವಾಲುಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಪರಿಸರಾಸಕ್ತರೆಲ್ಲರೂ ಒಂದಾಗಬೇಕಾದ ಅಗತ್ಯವಿದೆ. ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಬೇಕಾದ ತುರ್ತು ಸಂದರ್ಭ ಇದಾಗಿದೆ ಎಂದರು,
ಸಾಧ್ಯವಿರುವ ಎಲ್ಲಾ ಸ್ಥಳಗಳಲ್ಲಿ ಗಿಡನೆಟ್ಟು ಪೋಷಿಸಬೇಕು. ಶಿವಮೊಗ್ಗದ ಪರಿಸರಾಸಕ್ತರು ಒಂದೆಡೆ ಸೇರಿ ಮಾಡುವ ಪರಿಸರ ಉಳಿಸುವ ಕೆಲಸ ರಾಜ್ಯದೆಲ್ಲೆಡೆ ನಡೆಯುವಂತಾಗಬೇಕು. ಶಿವಮೊಗ್ಗ ಹಸಿರೀಕರಣದ ತವರೂರಾಗಿ ಮಾರ್ಪಾಡಾಗಬೇಕೆಂದ ಅವರು, ಶಿವಮೊಗ್ಗದ ಪರಿಸರಾಸಕ್ತರು ನಿರ್ಮಿಸಿರುವ ಕೆರೆ ರಾಜ್ಯಕ್ಕೆ ಮಾದರಿಯಾದದ್ದಾಗಿದೆ. ಸಾರ್ವಜನಿಕರ ದೇಣಿಗೆಯಿಂದ ನಿರ್ಮಾಣವಾಗುತ್ತಿರುವ ಈ ವನ ಅತ್ಯಲ್ಪ ಅವಧಿಯಲ್ಲಿ ಬೃಹತ್ ವನವಾಗಿ ರೂಪುಗೊಳ್ಳುವ ಆಶಯ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪರಿಸರಾಸಕ್ತ ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರು ಮಾತನಾಡಿ, ಸರ್ಕಾರ, ಸಾರ್ವಜನಿಕರು ಹಾಗೂ ಪರಿಸರಾಸಕ್ತರ ಸಹಕಾರ ಪಡೆದು ಮಾದರಿ ವನ ನಿರ್ಮಾಣಕ್ಕೆ ಅನೇಕ ಜನ ದಾನಿಗಳ ಆರ್ಥಿಕ ನೆರವು ಕಾರಣವಾಗಿದೆ. ಇಲ್ಲಿನ ಗಿಡಗಳು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಳೆಯುತ್ತ ಸಾಂಪ್ರದಾಯಿಕ ಗಿಡಗಳಾಗಿವೆ. ಇಲ್ಲಿನ ಕಲ್ಯಾಣಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ. ಇಲ್ಲಿ ಸಲ್ಲಿಸುವ ಅಲ್ಪ ಸೇವೆಯಿಂದಾಗಿ ಸಾರ್ಥಕ ಭಾವ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ಆಹ್ವಾನಿತ ಗಣ್ಯರು ಗಿಡನೆಟ್ಟರು. ಕಾರ್ಯಕ್ರಮದಲ್ಲಿ ಮೇಯರ್ ಶ್ರೀಮತಿ ಸುನೀತ ಅಣ್ಣಪ್ಪ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಸೂಡಾ ಆಯುಕ್ತ ಮೂಕಪ್ಪ ಕರಭೀಮಣ್ಣನವರ್, ರಮೇಶ್‍ಹೆಗ್ಡೆ, ಪ್ರೊ,ಚಂದ್ರಶೇಖರ್, ನಾಗರಾಜ್, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!