ಶಿವಮೊಗ್ಗ,ಡಿಸೆಂಬರ್-2: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಲಾಭವನ್ನು ಎಲ್ಲಾ ಗರ್ಭಿಣಿಯರು ಹಾಗೂ ಬಾಣಂತಿಯರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.
ಅವರು ಸೋಮವಾರ ಶರಾವತಿ ನಗರದ ಅಂಗನವಾಡಿಯಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಮಗುವಿನ ಜನನ ಪೂರ್ವ ಹಾಗೂ ನಂತರದ ಆರೈಕೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಗರ್ಭಿಣಿ/ಬಾಣಂತಿ ಮಹಿಳೆಯರಿಗೆ 5ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು. ಈ ಯೋಜನೆ ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿದೆ. ಗರ್ಭಿಣಿ ಎಂದು 150ದಿನಗಳ ಒಳಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದಾಗ ಪ್ರಥಮ ಕಂತು ರೂ.1ಸಾವಿರ, ಗರ್ಭಿಣಿಯಾಗಿ ಆರು ತಿಂಗಳ ಬಳಿಕ ರೂ.2ಸಾವಿರ ಹಾಗೂ ಮಗು ಜನನ ನೋಂದಣಿ ಬಳಿಕ ಮೊದಲ ಹಂತದ ಚುಚ್ಚುಮದ್ದು ಪಡೆದ ಬಳಿಕ ಮೂರನೇ ಕಂತು ರೂ.2ಸಾವಿರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
ಯೋಜನೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಮನೆಗೆ ತೆರಳಿ ಅರ್ಜಿಯನ್ನು ವಿತರಿಸಬೇಕು. ಬ್ಯಾಂಕ್ ಅಕೌಂಟ್, ಆಧಾರ್ ನೋಂದಣಿ ಇತ್ಯಾದಿ ಕಾರ್ಯಗಳಲ್ಲಿ ನೆರವು ಒದಗಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಪೌಷ್ಟಿಕ ಆಹಾರ ಪಡೆದುಕೊಳ್ಳುವ ಬಗ್ಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಸಪ್ತಾಹದ ಅಂಗವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯವನ್ನು ಸಿಇಒ ಅವರು ನೆರವೇರಿಸಿದರು. ಸ್ಥಳೀಯವಾಗಿ ಲಭ್ಯವಿರುವ ಹಾಗೂ ಅಂಗನವಾಡಿಗಳಲ್ಲಿ ನೀಡುವ ಆಹಾರ ಸಾಮಾಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಕೆ ಕುರಿತು ಪ್ರಾತ್ಯಕ್ಷಿತೆ ನೀಡಲಾಯಿತು.
ಮಹಾನಗರ ಪಾಲಿಕೆ ಸದಸ್ಯೆ ಸುವರ್ಣ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಚಂದ್ರಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
