ಶಿವಮೊಗ್ಗ: ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಶಾಸಕ ಈಶ್ವರಪ್ಪ ಅವರಿಗೆ ಇಲ್ಲ. ಪದೇ ಪದೇ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಶಾಸಕ ಈಶ್ವರಪ್ಪ ಅವರು ಸಹನೆ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಸಿದ್ದರಾಮಯ್ಯ ಅವರನ್ನು ಹೀಯಾಳಿಸಲು ಹೊರಟಾಗಲೇ ಅವರ ಶಕ್ತಿ ಕುಂದಿ ಹೋಯಿತು. ಭ್ರಷ್ಟಚಾರ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡಾಗಲೇ ಮತಗಳು ಕಳೆದು ಹೋದವು.
ಬಿಜೆಪಿಯ ಪಾಲಿಗೆ ಶ್ರೀ ಕೃಷ್ಣನಂತೆ ಇದ್ದ ಯಡಿಯೂರಪ್ಪನವರ ವಿರುದ್ಧ ರಾಜಪಾಲರಿಗೆ ದೂರು ನೀಡಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣರಾದರೋ ಆವಾಗಲೇ ಅವರ ಮೇಲೆ ಭಕ್ತಿಯೂ ಹೊರಟು ಹೋಯಿತು.
ಶಾಸಕ ಈಶ್ವರಪ್ಪ ಈಗ ಏಕಾಂಗಿಯಾಗಿದ್ದಾರೆ. ಚುನಾವಣೆಯನ್ನು ಎದುರಿಸುವ ಯಾವ ಶಕ್ತಿಯು ಅವರಿಗೆ ಉಳಿದಿಲ್ಲ. ಚುನಾವಣೆಯನ್ನು ಗೆಲ್ಲಲು ಇದ್ದ ತಂತ್ರ ಮಂತ್ರಗಳು ಅವರಿಗೆ ಮರೆತು ಹೋಗಿವೆ. ಜನರ ಶಾಪದ ಪಾತ್ರೆ ತುಂಬಿ ತುಳುಕುತ್ತಿದೆ. ಸಿದ್ದರಾಮಯ್ಯ ಅವರನ್ನು ಹೀಯಾಳಿಸಿದ ಮರುಕ್ಷಣವೇ ಅವರ ಸೋಲಿನ ಮೂಟೆ ಹೆಗಲೇರಿದೆ.
ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ನೂರಾರು ಕ್ಷೇತ್ರಗಳಿವೆ ಆದರೆ ಈಶ್ವರಪ್ಪನವರಿಗೆ ಎಲ್ಲಿದೆ ಕ್ಷೇತ್ರ? ಶಿವಮೊಗ್ಗದಲ್ಲಿ ಈಗಾಗಲೇ ತನಗೆ ಸೀಟು ಸಿಗುವುದಿಲ್ಲ ಎಂದು ಮಗನನ್ನು ಕರೆತರಲು ಹೊರಟಿದ್ದಾರೆ ಎಂದು ವೈ ಎಚ್ ನಾಗರಾಜ್ ದೂರಿದರು.