ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲದ ಟೀಕೆ ಮಾಡುತ್ತಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಗಳು ಬಾಲಿಶತನದ್ದಾಗಿದೆ.
ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆ ದಿಟ್ಟನಾಯಕತ್ವವನ್ನು ಸಹಿಸಿಕೊಳ್ಳದ ಹಾಗೂ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರ ಹಿಡಿಯುವ ಸುಳಿವಿನಿಂದ ಕಂಗಾಲಾಗಿರುವ ಕೆ.ಎಸ್ ಈಶ್ವರಪ್ಪ ಅವರು ಎಂದಿನಂತೆ ನಾಲಿಗೆ ಹರಿಬಿಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಈ ರಾಜ್ಯ ಕಂಡ ಸಮರ್ಥ ಜನನಾಯಕರು. ಅವರಿಗೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಜನಬೆಂಬಲವಿದೆ ಎಂಬುದೇ ಈಶ್ವರಪ್ಪನವರ ಅಸಹನೆ- ಅಸೂಯೆಗೆ ಕಾರಣವಾಗಿದೆ.
ಕಾಂಗ್ರೆಸ್ ಬಗ್ಗೆ ಮಾತನಾಡುವ ಮೊದಲು ತಮ್ಮದೇ ಪಕ್ಷದ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರು ಕಾರಣ?, ಯಾಕಾಗಿ ಅವರನ್ನು ಕೆಳಗಿಳಿಸಲಾಯಿತು?
ತಮ್ಮದೇ ಸರ್ಕಾರ ಇದ್ದರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿ ಯಡಿಯೂರಪ್ಪ ನವರಿಗೆ ಕಿರುಕುಳ ನೀಡಿದ್ದು ಯಾಕೆ?
ನಾನು ಕುರುಬ ಸಮುದಾಯದವನಲ್ಲ. ನಾನು ಹಿಂದೂ ಎಂದು ಸಮುದಾಯಕ್ಕೆ ದ್ರೋಹ ಬಗೆದು ಕೊನೆಗೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಹೋರಾಟಕ್ಕಿಳಿದು ಯಡಿಯೂರಪ್ಪ ಅವರ ಸರ್ಕಾರಕ್ಕೆ ಮುಜುಗರ ತಂದದ್ದು ನೀವಲ್ಲವೆ?
ಈ ಎಲ್ಲಾ ಪ್ರಶ್ನೆಗಳಿಗೂ ಕೆ.ಎಸ್ ಈಶ್ವರಪ್ಪ ನವರು ಮೊದಲು ಉತ್ತರಿಸಲಿ.
ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆಯನ್ನು ಟೀಕಿಸುವ ಈಶ್ವರಪ್ಪನವರು ಮೊದಲು ತಮಗೆ ಶಿವಮೊಗ್ಗ ವಿಧಾನಸಭಾಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲಿದೆಯಾ ಎಂಬುದರ ಬಗ್ಗೆ ಯೋಚಿಸಲಿ.
ಈ ರಾಜ್ಯದ ಮುಖ್ಯಮಂತ್ರಿ ಯಾಗಿ ದಕ್ಷ,ಜನಪರ,ಪ್ರಾಮಾಣಿಕ ಆಡಳಿತ ನೀಡಿದ ಸಿದ್ದರಾಮಯ್ಯ ಅವರನ್ನು ಟೀಕಿಸುವ ಕೆ.ಎಸ್ ಈಶ್ವರಪ್ಪ ನವರು ಮಂತ್ರಿಸ್ಥಾನ ತೊರೆದು ಕಳಂಕಿತರಾಗಿ ನಿರ್ಗಮಿಸಿದ್ದು ಯಾಕೆ? ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ಹೈಕೋರ್ಟಿನ ಮುಂದೆ ಪ್ರಶ್ನೆಯಾಗಿದೆ ಎಂಬುದನ್ನು ಮರೆಯಬಾರದು.
ಮಂತ್ರಿಸ್ಥಾನ ಕಳೆದುಕೊಂಡು,ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗದಿರುವ ಅಭದ್ರತೆಯಲ್ಲಿ ಹತಾಶರಾಗಿರುವ ಈಶ್ವರಪ್ಪ ನವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ತಮ್ಮ ವಯಸ್ಸು,ಘನತೆಯನ್ನೂ ಮೀರಿ ಟೀಕಿಸುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಭ್ರಷ್ಟ,ಜನವಿರೋಧಿ ಆಡಳಿತದಿಂದ ರೋಸಿಹೋಗಿರುವ ಜನ ಮುಂದಿನ ಚುನಾವಣೆ ಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ. ಸಿದ್ದರಾಮಯ್ಯನವರು,ಕಾಂಗ್ರೇಸ್ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ ಮೊದಲು ಈಶ್ವರಪ್ಪನವರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಲಿ.