ಶಿವಮೊಗ್ಗ, ಜನವರಿ 19 : ಎಲ್ಲ ಮಹಾಪುರುಷರ ಪ್ರತಿನಿಧಿ ಮಹಾಯೋಗಿ ವೇಮನ. ಇಂತಹ ಮಹಾಪುರುಷರು ದೇಶ, ಕಾಲ, ಜಾತಿ, ಭಾಷೆ ಮೀರಿದವರಾಗಿದ್ದು, ಇವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯಬೇಕೆಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಮಹಾಯೋಗಿ ಏರ್ಪಡಿಸಲಾಗಿದ್ದ ವೇಮನ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡದ ಸರ್ವಜ್ಞ, ತಮಿಳಿನ ತಿರುವಣ್ಣನ್, ತೆಲುಗಿನ ವೇಮನ, ಬುದ್ದ, ಬಸವಣ್ಣ ಅಂಬೇಡ್ಕರ್‍ರಂತಹ ಅನೇಕ ಮಹಾಪುರುಷರು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತರಲ್ಲ. ಇಡೀ ಸಮಾಜಕ್ಕೆ ದಾರಿದೀಪ ಇವರು. ವೇಮನರು ಕೂಡ ನಮ್ಮ ಸಮಾಜದ ಹೆಮ್ಮೆಯ ಮಹಾಪುರುಷರಾಗಿದ್ದು ಇಂತಹ ಮಹಾನ್ ಪುರುಷರನ್ನು ಮಕ್ಕಳಿಗೆ, ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಶಿಕ್ಷಣವನ್ನು ನೀಡಬೇಕೆಂದು ಆಶಿಸಿದರು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಡಾ.ವೇಣು ಗೋಪಾಲ ರೆಡ್ಡಿ ಕೆ.ಆರ್. ಉಪನ್ಯಾಸ ನೀಡಿ ಮಾತನಾಡಿ, ಮಹಾಯೋಗಿ ವೇಮನರು ಜನಸಾಮಾನ್ಯರ ಕವಿ. ಜಾತೀಯತೆ, ಅಂಧಶ್ರದ್ದೆ, ಮೇಲುಕೀಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಸಂತ ಜೀವನಕ್ಕೆ ಮಾದರಿಯಾಗಿರುವ ಇವರು ಉತ್ಕøಷ್ಟ ಸಾಹಿತಿ. ರಾಜನ ಮಗನಾದ ಇವರು ಬಾಲ್ಯದಲ್ಲಿ ದಡ್ಡನಾಗಿ, ಯೌವನದಲ್ಲಿ ವಿಲಾಸಿ ಜೀವನ ನಡೆಸಿದ್ದರೂ ಒಂದು ಹಂತದಲ್ಲಿ ತಮ್ಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮರ ಪ್ರಭಾವದಿಂದ ವಿಲಾಸಿ ಜೀವನ ತೊರೆದು ಲೋಕ ಸಂಚಾಯಾಗಿ, ಸಂತನಾಗಿ ತಮ್ಮ ಅನುಭವನಗಳನ್ನು ವಚನ, ಸಾಹಿತ್ಯದ ಮೂಲಕ ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬರೂ ತಮ್ಮ ತಪ್ಪನ್ನು ತಿದ್ದಿ ನಡೆಯುವ ಅವಶ್ಯಕತೆ ಇದೆ ಎಂದು ಸಾರಿದ್ದಾರೆ. ಸಮಾನತೆ, ಶಾಂತಿ, ಸೌಹಾರ್ಧತೆ, ಸಹಬಾಳ್ವೆ ಎಲ್ಲವನ್ನು ನಾವು ಇವರ ಸಾಹಿತ್ಯದಲ್ಲಿ ಕಾಣಬಹುದಾಗಿದ್ದು ಇವರ ಸುಮಾರು 15 ಸಾವಿರ ಪದ್ಯಗಳನ್ನು ಪ್ರಕಟಿಸಲಾಗಿದೆ. ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್ ಇವರನ್ನು ಪ್ರಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ್ದು, ಇವರ ಕಾವ್ಯಗಳು ಇಂಗ್ಲಿಷ್ ಮತ್ತು ಇತರೆ ಅನ್ಯ ದೇಶದ ಭಾಷೆಗಳಿಗೆ ಭಾಷಾಂತರಗೊಂಡಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿ, ಮಹಾಯೋಗಿ ವೇಮನರು ಓರ್ವ ಶ್ರೇಷ್ಟ ವಚನಕಾರರು. ವ್ಯಕ್ತಿತ್ವ ಬದಲಾವಣೆಗೊಂದು ನಿದರ್ಶನ. ಬುದ್ದನಂತೆ ಒಂದು ಹಂತದಲ್ಲಿ ಬದಲಾದ ಇವರು ನಮಗೆಲ್ಲ ಮಾದರಿಯಾಗಿದ್ದಾರೆ. ನಿಸರ್ಗ ಬದಲಾವಣೆಯನ್ನು ತರುತ್ತದೆ ಅದಕ್ಕೆ ಪೂರಕವಾಗಿ ಸ್ಪಂದಿಸಿ ಬದಲಾದಾಗ ದೊಡ್ಡ ಮಟ್ಟದಲ್ಲಿ ನಾವು ಬೆಳೆಯಬಹುದು. ವೇಮನರಂತಹ ಮಹಾನ್ ವ್ಯಕ್ತಿಗಳ ತತ್ವವನ್ನು ನಾವು ಅಳವಡಿಸಿಕೊಂಡು, ಮಕ್ಕಳಿಗೆ ಇವರ ಬಗ್ಗೆ ತಿಳಿಸಬೇಕು. ಹಾಗೂ ಯಾವುದೇ ಮಹಾಪುರುಷರ ಜಯಂತಿಯನ್ನು ಕೇವಲ ಆಯಾ ಸಮಾಜ, ಜನಾಂಗದವರು ಆಚರಿಸದೇ ಎಲ್ಲರೂ ಸೇರಿ ಆಚರಿಸಿದಾಗ ಮಾತ್ರ ಸರ್ಕಾರದ ಜಯಂತಿಗಳ ಆಚರಣಯ ಉದ್ದೇಶ ಸಾಕಾರವಾಗುತ್ತದೆ ಎಂದರು.
ಪಾಲಿಕೆ ಮಹಾಪೌರರಾದ ಎಸ್.ಶಿವಕುಮಾರ್, ಉಪ ಮಹಾಪೌರರಾದ ಲಕ್ಷ್ಮೀ, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಭೀಮಾ ರೆಡ್ಡೆ, ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ಉಪಸ್ಥಿತರಿದ್ದರು.