ಜಿಲ್ಲೆಯಲ್ಲಿ 4-5ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಸಹಸ್ರಾರು ಹೆಕ್ಟೇರ್ ಭೂಪ್ರದೇಶ ಜಲಾವೃತಗೊಂಡಿದೆ. ಅಸಂಖ್ಯಾತ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ನಗರದ ಹಲವು ತಗ್ಗು ಪ್ರದೇಶಗಳ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿರುವುದನ್ನು ಗಮನಿಸಿದ ಜಿಲ್ಲಾಡಳಿತ ಸಂತ್ರಸ್ಥರ ನೆರವಿಗೆ ಧಾವಿಸಿದೆ.
ಸಂತ್ರಸ್ಥರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದ ವತಿಯಿಂದ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್, ಇಮಾಮ್ಬಾಡದ ಶಾದಿಮಹಲ್, ಬಾಪೂಜಿನಗರದ ಸರ್ಕಾರಿ ಶಾಲೆ ಹಾಗೂ ವಿದ್ಯಾನಗರದ ರಾಜೀವ್ಗಾಂಧಿ ಬಡಾವಣೆಯಲ್ಲಿ ನೆರೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂತ್ರಸ್ಥರು ಇಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದೆ.
ಅಲ್ಲದೇ ಜಲಾವೃತಗೊಂಡ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಅಗತ್ಯ ನೆರವು ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದು, ಸ್ಥಳೀಯವಾಗಿ ಲಭ್ಯವಿದ್ದು, ಸಂತ್ರಸ್ಥರಿಗೆ ಅಗತ್ಯ ನೆರವನ್ನು ಒದಗಿಸಲು ಸೂಚಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತಗೊಂಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣದಲ್ಲಿ ದುರಸ್ತಿ ಕ್ರಮ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಮೆಸ್ಕಾಂ ಅಭಿಯಂತರರಿಗೆ ಸೂಚಿಸಿದ್ದಾರೆ. ಅಲ್ಲದೇ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ ಮರಗಳು ಉರುಳಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಉರುಳಿದ ಮರಗಳನ್ನು ತಕ್ಷಣದಲ್ಲಿ ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತೆರವು ಕಾರ್ಯಾಚರಣೆ ಮುಕ್ತಾಯಗೊಂಡಿದೆ.
ನಗರದ ಕೆಲವು ಪ್ರದೇಶಗಳಲ್ಲಿ ಜನವಸತಿಗೆ ತೀವ್ರಪ್ರಮಾಣದ ಅಡಚಣೆಯಾಗಿದ್ದು, ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಬಾಧಿತ ಪ್ರದೇಶಗಳ ನಿವಾಸಿಗಳಿಗಾಗಿ ಆರಂಭಿಸಲಾಗಿರುವ ನೆರೆ ಪರಿಹಾರ ಕೇಂದ್ರಕ್ಕೆ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಅಲ್ಲದೇ ನಿನ್ನೆ ತಡರಾತ್ರಿಯವರೆಗೆ ತಾತ್ಕಾಲಿಕ ಶಿಬಿರದಲ್ಲಿ ಅಧಿಕಾರಿಗಳೊಂದಿಗಿದ್ದು, ವ್ಯವಸ್ಥೆ ಕಲ್ಪಿಸುವಲ್ಲಿ ಶ್ರಮಿಸಿದ ಅವರು, ನೆರೆ ಪರಿಹಾರ ಕೇಂದ್ರಕ್ಕೆ ಬರುವ ಸಂತ್ರಸ್ಥರಿಗೆ ಅಗತ್ಯ ವಸತಿ ಹಾಗೂ ಗುಣಮಟ್ಟದ ಆಹಾರ ದೊರೆಯುವಂತೆ ಅವರ ಆರೋಗ್ಯ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತೆ ಚಾರುಲತಾ ಸೋಮಲ್ ಅವರು ಸೂಚಿಸಿದರು.
ಶಿವಮೊಗ್ಗ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೊಳಪಡುವ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಶೇಷವಾಗಿ ತೀರ್ಥಹಳ್ಳಿ ಪಟ್ಟಣದಲ್ಲಿ ಸಂತ್ರಸ್ಥರ ನೆರವಿಗಾಗಿ ನೆರೆ ಪರಿಹಾರ ಕೇಂದ್ರವನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಸಾಗರ ಉಪವಿಭಾಗಾಧಿಕಾರಿಗಳ ಪ್ರದೇಶದ ವ್ಯಾಪ್ತಿಗೊಳಪಡುವ ಜೋಗ ಜಲಪಾತದ ಸಮೀಪ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಆಗಿದ್ದ ತೀವ್ರತರಹದ ಅಡಚಣೆಯನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಸುರಕ್ಷತೆಯ ದೃಷ್ಠಿಯಿಂದ ಜೋಗದ ಗುಂಡಿಯೊಳಗೆ ಇಳಿಯದಂತೆ ಉಪವಿಭಾಗಾಧಿಕಾರಿ ದರ್ಶನ್ ಹೆಚ್. ಅವರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಹಾಗೂ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜಲಾವೃತಗೊಂಡ ಗ್ರಾಮಗಳಿಗೆ ತಲಾ ಒಂದು ದೋಣಿಯನ್ನು ಒದಗಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.