Hegalatti Visit KSEಮಳೆಯಿಂದ ಹಾನಿಗೊಳಗಾದ ಭೂಸಂತ್ರಸ್ಥರಿಗೆ ಅಗತ್ಯ ನೆರವು : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಆಗಸ್ಟ್ 08 : ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಗುಡ್ಡಕುಸಿದು, ಫಸಲು ನೀಡುತ್ತಿದ್ದ ತೋಟ ಹಾಗೂ ಜಮೀನು ಕಳೆದುಕೊಂಡ ಭೂಸಂತ್ರಸ್ಥರಿಗೆ ಸರ್ಕಾರದ ವಿವಿಧ ಇಲಾಖೆಗಳ ಹಲವು ಯೋಜನೆಗಳಡಿಯಲ್ಲಿ ಅಗತ್ಯ ಸೌಲಭ್ಯ ಒದಗಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡಕುಸಿದ ಪ್ರದೇಶಕ್ಕೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗಜ್ಞಾನೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿಗಳನ್ನು ಗಮನಿಸಿ, 09ಜನ ಭೂಸಂತ್ರಸ್ಥರಿಗೆ ಅಗತ್ಯ ನೆರವನ್ನು ಒದಗಿಸಲಾಗುವುದು. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದವರು ತಿಳಿಸಿದರು.
ಪ್ರಸ್ತುತ ಗುಡ್ಡಕುಸಿತದಿಂದಾಗಿ ಮಣ್ಣಿನಿಂದ ಆವೃತವಾಗಿರುವ ಜಮೀನಿನಲ್ಲಿನ ಮಣ್ಣನ್ನು ತೆರವುಗೊಳಿಸಿ, ನರೇಗಾ ಯೋಜನೆಯಡಿ ಹೊಂಡಹೊಡೆದು, ಗಿಡ ನೆಟ್ಟು ತೋಟ ಮಾಡಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದ ಅವರು, ಕಳೆದ ಸಾಲಿನಲ್ಲಿ ಅಲ್ಪಪ್ರಮಾಣದ ಆರ್ಥಿಕ ನೆರವನ್ನು ಒದಗಿಸಲಾಗಿದೆ ಆದರೂ ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಭೂಸಂತ್ರಸ್ಥರಿಗೆ ನೆರವು ಒದಗಿಸುವುದಾಗಿ ತಿಳಿಸಿದರು.
ಭೂಕುಸಿತಗೊಂಡ ಪ್ರದೇಶದಲ್ಲಿ ರೈತರ ಜಮೀನಿನಲ್ಲಿ ಹರಿವ ಮಳೆಯ ನೀರನ್ನು ಪರಿವರ್ತಿಸಲು ಚಾನಲ್‍ನ್ನು ನಿರ್ಮಿಸಲು ಕೂಡ ಉದ್ದೇಶಿಸಲಾಗಿದೆ. ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯನ್ನು ರೆಡ್‍ಅಲರ್ಟ್ ಆಗಿ ಘೋಷಿಸಲಾಗಿದ್ದು, ಸಂತ್ರಸ್ಥರಿಗೆ ಅಗತ್ಯ ನೆರವನ್ನು ಒದಗಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಳೆಯಿಂದ ಮನೆ ನಾಶಗೊಂಡಿರುವ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ ರೂ.10,000/-ಗಳನ್ನು ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೆ ಪೂರ್ಣ ಹಾನಿಗೊಂಡ ಮನೆಗಳ ಮಾಲೀಕರಿಗೆ 5ಲಕ್ಷ ರೂ. ನೀಡಲಾಗುವುದು. ಅದರ ಮೊದಲ ಕಂತಿನ ಹಣ ಒಂದು ಲಕ್ಷ ರೂ.ಗಳನ್ನು ಕೂಡಲೆ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮತ್ತು ಸೊರಬ ತಾಲೂಕುಗಳಲ್ಲಿ ಮಳೆಯಿಂದ ಆಗಿರುವ ಹಾನಿಯ ಕುರಿತು ವರದಿಗಳನ್ನು ಪಡೆದುಕೊಳ್ಳಲಾಗಿದೆ. ನಾಳೆ ಸಾಗರ ತಾಲೂಕಿನ ನಾಂದೋಡಿಯಲ್ಲಿ ಭೂಕುಸಿತಗೊಂಡ ಸ್ಥಳಕ್ಕೂ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ಥರಿಗೆ ಅಗತ್ಯ ನೆರವು ಒದಗಿಸುವುದಲ್ಲದೆ ಜೋಗ-ಜಲಪಾತ, ಸಿರಿವಂತೆ ಮುಂತಾದ ಸ್ಥಳಗಳಿಗೂ ಭೇಟಿ ನೀಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಆರಗಜ್ಞಾನೇಂದ್ರ ಅವರು ಮಾತನಾಡಿ, ಕೋರಿಕೆಯ ಮೇರೆಗೆ ನೊಂದ ರೈತರ ನೆರವಿಗೆ ಧಾವಿಸಿರುವ ಸಚಿವರ ಕಾಳಜಿಗೆ ರೈತರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ ಅವರು, ಈವರೆಗೆ ನೊಂದ ರೈತರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸಲು ಸಚಿವರು ಸಮ್ಮತಿಸಿರುವುದು ಸಮಾಧಾನ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

error: Content is protected !!