BY: LOKESH JAGANNATH

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನುಷ್ಯನಿಗೆ ಕುಡಿಯಲು ನೀರು, ಇರಲು ಒಂದು ಸೂರು ನೀಡುವ ಯೋಜನೆಗಳನ್ನು ರೂಪಿಸುತ್ತಲೇ ಬಂದಿವೆ. ಅದರಲ್ಲಿಯೂ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯ ‘ಜಲಜೀವನ್ ಮಿಷನ್’ ಯೋಜನೆಯಡಿ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡುವ ಯೋಜನೆಯನ್ನು ರೂಪಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅದು ಯಶಸ್ವಿಯಾಗಿ ಫಲವಂತಿಕೆಯನ್ನುಕಾಣುತ್ತಿದೆ.

2020-21ನೇ ಸಾಲಿನಲ್ಲಿ 626 ಕಾಮಗಾರಿಗಳು ಮತ್ತು 2021-22 ಸಾಲಿನಲ್ಲಿ 520 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಎಲ್ಲವೂ ಪ್ರಗತಿಯತ್ತ ಸಾಗಿದೆ. ಪಶ್ಚಿಮಘಟ್ಟದ ಶ್ರೇಣಿಯ ಶರಾವತಿ ಕಣಿವೆಯನ್ನು ಒಳಗೊಂಡಂತೆ ಗುಡ್ಡಗಾಡು ಪ್ರದೇಶದಲ್ಲಿಯೂ ಈ ಯೋಜನೆ ಯಶಸ್ಸಿನತ್ತ ಸಾಗಿದೆ. ಮುಂಚೆ ಸಾರ್ವಜನಿಕ ನಳ ಸಂಪರ್ಕದ ಮೂಲಕ ಜನ ಬೋರ್‍ವೆಲ್ ಪಂಪ್ ಹೊಡೆದು ನೀರೆತ್ತಬೇಕಾಗಿತ್ತು. ಈಗ ಆ ಸಮಸ್ಯೆ ಇಲ್ಲ. ಪ್ರತಿಯೊಬ್ಬರ ಮನೆಯಂಗಳದಲ್ಲಿ ನಳ ಸಂಪರ್ಕ ನೀಡಿ ದಿನದ 24 ಗಂಟೆಯೂ ನೀರುಣಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ‘ಮನೆ ಮನೆಗೆ ಗಂಗೆ’ ಎನ್ನುವ ಧ್ಯೇಯವಾಕ್ಯದಲ್ಲಿ ಮುನ್ನಡೆಸುತ್ತಿದೆ. ಚದುರಿದ ಗ್ರಾಮ ಅಥವಾ ಜನವಸತಿ ಇದ್ದರೂ ಅಂತಹ ಪ್ರದೇಶಗಳಿಗೆ ನೀರುಣಿಸಲಾಗಿದೆ. ಶರಾವತಿ ಕಣಿವೆಯ ಬರುವೆ, ಚುಟ್ಟಿಕೆರೆ ಮುಂತಾದ ಪ್ರದೇಶದಲ್ಲಿ ಈ ಯೋಜನೆ ಫಲವಂತಿಕೆಯನ್ನು ಕಂಡಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್ ವಿಶೇಷ ಆಸಕ್ತಿ ವಹಿಸಿ ಗ್ರಾಮಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನರ ಮನೆಬಾಗಿಲಿಗೆ ಶುದ್ಧ ಕುಡಿಯುವ ನೀರು ಕೊಡುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಿರುವ ಕುಡಿಯುವ ನೀರು ನೀಡಬೇಕು ಎನ್ನುವ ಹಠ ತೊಟ್ಟು ಅತ್ಯಂತ ಉಪಯುಕ್ತವಾದ ಯೋಜನೆಯನ್ನು ರೂಪಿಸಿದೆ. ಬೆಟ್ಟ, ಗುಡ್ಡ, ದಿನ್ನೆಗಳಿದ್ದರೂ ಆ ಪ್ರದೇಶದಲ್ಲಿ ಜನವಸತಿ ಇರುವ ಎಲ್ಲ ಕಡೆಗಳಲ್ಲಿಯೂ ಅತ್ಯಾಧುನಿಕವಾದ ಪೈಪ್‍ಗಳನ್ನು ಅಳವಡಿಸಿ ನೀರು ಸಮಾನವಾಗಿ ಅವರ ಮನೆಯಂಗಳಕ್ಕೆ ತಲುಪುವಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆಯಿಂದ ಆಂಗನವಾಡಿ, ಶಾಲೆ ಎಲ್ಲ ಕಡೆಯ ಕೇಂದ್ರಗಳಿಗೂ ನೀರು ತಲುಪಿಸುವ ಕಾರ್ಯ ಭರದಿಂದ ನಡೆದಿದೆ. ಅದರಲ್ಲಿಯೂ ಬಹುಗ್ರಾಮ ಯೋಜನೆಯ ಮೂಲಕ ನೂರಾರು ಹಳ್ಳಿಗಳಿಗೆ ನೀರುಣಿಸುವ ಯೋಜನೆಗಳು ಶಿವಮೊಗ್ಗ ಜಿಲ್ಲಾದ್ಯಂತ ಪ್ರಗತಿಯಲ್ಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಬಲದ ಅನುದಾನದ ಮೇಲೆ ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ ಎನ್ನುವ ಯೋಜನೆ ರೂಪಿಸಿ ಪ್ರತಿಯೊಂದು ಗ್ರಾಮೀಣ ಜನವಸತಿ ಪ್ರದೇಶಗಳಿಗೆ ನಳಸಂಪರ್ಕವನ್ನು ನೀಡಿ ಮೀಟರ್ ಅಳವಡಿಸಿ ಕುಡಿಯುವ ನೀರು ನೀಡುತ್ತಿದೆ. 2020-21ನೇ ಸಾಲಿನಲ್ಲಿ 150 ಕೋಟಿ, 21-22ನೇ ಸಾಲಿನಲ್ಲಿ 139 ಕೋಟಿ ಹಣವನ್ನು ಈ ಯೋಜನೆಗಾಗಿ ತೆಗೆದಿರಿಸಿ ಕಾರ್ಯವನ್ನು ಮುನ್ನಡೆಸಿದೆ.

ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ ಕಾರ್ಯಕ್ರಮ ರಾಜ್ಯದ ಮುಂಚೂಣಿಯ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗ ಕೂಡ ಪ್ರಮುಖ ಪಾತ್ರ ವಹಿಸಿದೆ. ಗ್ರಾಮೀಣಾಭಿವೃದ್ಧಿ ಮಗತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಹಾಗೂ ಜಿಲ್ಲಾಡಳಿತ, ತಾಲೂಕು ಪಂಚಾಯತ್ ವಿಶೇಷ ಆಸಕ್ತಿ ವಹಿಸಿ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸುತ್ತಿದೆ.

ಎಂ.ಎಲ್. ವೈಶಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ ಶಿವಮೊಗ್ಗ: ಗುಡ್ಡಗಾಡು ಪ್ರದೇಶದ ಜನರಿಗೆ ನೀರು ಮನೆಬಾಗಿಲಿಗೆ ಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು ಎಲ್ಲಾ ತಾಲ್ಲೂಕುಗಳಲ್ಲಿಯೂ ಈ ಯೋಜನೆ ಯಶಸ್ಸಿನತ್ತ ಸಾಗಿದ್ದು ದುರ್ಗಮ ಹಾದಿಯ ಜನವಸತಿ ಪ್ರದೇಶಗಳಿಗೂ ಶುದ್ಧ ಕುಡಿಯುವ ನೀರು ಉಣಿಸುತ್ತಿದ್ದೇವೆ. ಕಣಿವೆ ಪ್ರದೇಶಗಳನ್ನು ಒಳಗೊಂಡಂತೆ ಸಾಗರ ತಾಲ್ಲೂಕಿನಲ್ಲಿ 12ಲಕ್ಷಕ್ಕೂ ಅಧಿಕ ಹಣವನ್ನು ವಿನಿಯೋಗಿಸಲಾಗಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಲೂಕು ಆಡಳಿತ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದೆ. ಅತ್ಯಂತ ಕ್ಲಿಷ್ಟದಾಯಕವಾದಂತಹ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾರ್ಯಗತವಾಗಿದ್ದು, ಜನರು ಸಂತಸ ವ್ಯಕ್ತಪಡಿಸಿದ್ದಾರೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ.

ಬಲರಾಮ್ ದುಬೆ, ಸಹಾಯಕ ಕಾರ್ಯಪಾಲಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ನಮಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಸರ್ಕಾರದ ಜಲಜೀವನ ಮಿಷನ್ ಯೋಜನೆಯಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಿದೆ ಎಂದು ತಿಳಿಸಿದರು.

error: Content is protected !!