ಶಿವಮೊಗ್ಗ. ಜುಲೈ.26 : ಮನೆಯ ಸುತ್ತಮುತ್ತಲಿನ ವಾತವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಕೀಟಜನ್ಯ ಕಾಯಿಲೆಗಳಾದ ಡೆಂಗ್ಯು, ಮಲೇರಿಯ, ಚಿಕುಂಗುನ್ಯಾ, ಮೆದುಳು ಜ್ವರ, ಆನೆಕಾಲುರೋಗ ಹಾಗೂ ಇನ್ನಿತರೆ ರೋಗಗಳಿಂದ ದೂರ ಉಳಿಯಬಹುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಹೇಳಿದರು.
ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಮಲೇರಿಯಾ ಮತ್ತು ಡೆಂಗ್ಯು ವಿರೋಧ ದಿನಾಚರಣೆ ಅಂಗವಾಗಿ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿಯಿಂದ ಸೀಗೇಹಟ್ಟಿ ನಗರ ಆರೋಗ್ಯ ಕೇಂದ್ರದವರೆಗೂ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೀಟಜನ್ಯ ಕಾಯಿಲೆಗಳಾದ ಡೆಂಗ್ಯು, ಚಿಕುಂಗುನ್ಯಾ ಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದರೆ ಸೂಕ್ತ ಸಮಯದಲ್ಲಿ ವೈದ್ಯರು ನೀಡುವ ಚಿಕಿತ್ಸೆಯಿಂದ ಮಾತ್ರವೆ ಪಾರಾಗಬಹುದಾಗಿದೆ. ಇದಕ್ಕೂ ಮುನ್ನ ನಾವು ಕಾಯಿಲೆಗಳು ಹರಡುವ ಸೊಳ್ಳೆ ಇನ್ನಿತರೆ ಕೀಟಗಳು ಹೆಚ್ಚದಂತೆ ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪಾದನೆಗೆ ಸಹಾಯವಾಗುವ ಕೊಳಚೆ ಪ್ರದೇಶಗಳು ನಿರ್ಮಾಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನೀರು ನಿಲ್ಲಲು ಅನುಕೂಲವಾಗುವಂತಹ ಪ್ಲಾಷ್ಟಿಕ್ ವಸ್ತುಗಳು, ಟೈರ್‍ಗಳು, ಮಡಕೆ, ಪಾತ್ರೆ, ತೆಂಗಿನ ಚಿಪ್ಪು ಮುಂತಾದ ವಸ್ತುಗಳು ಮನೆಯ ಸುತ್ತಮುತ್ತ ಇರದಂತೆ ಎಚ್ಚರಿಕೆ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿಮಾಡಬೇಕು ಎಂದು ಅವರು ಹೇಳಿದರು.
ಮನೆಯಲ್ಲಿ ವಾರಕ್ಕೊಮ್ಮೆ ಒಣ ದಿನವನ್ನಾಗಿ ಆಚರಿಸುವುದು, ನೀರಿನ ಟ್ಯಾಂಕ್‍ಗಳನ್ನು ಪ್ರತಿ ವಾರಕ್ಕೊಮ್ಮೆ ಶುಚಿಗೊಳಿಸಿ, ಒಣಗಿಸಿ ನೀರು ತುಂಬಿಸಿ ಭದ್ರವಾಗಿ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಹಾಗೂ ಇನ್ನಿತರೆ ಸೊಳ್ಳೆಗಳ ವಿಕರ್ಷಕ ವಸ್ತುಗಳನ್ನು ಬಳಸಿ ಕಾಯಿಲೆಗಳು ಹರಡದಂತೆ ತಡೆಯಬಹುದಾಗಿದೆ.
ಮಲೇರಿಯ ಮತ್ತು ಇತರೆ ಕೀಟಜನ್ಯ ರೋಗಗಳು ಕೇವಲ ರಕ್ತ ಪರೀಕ್ಷೆ ಮಾತ್ರದಿಂದ ಅರಿಯಲು ಸಾಧ್ಯವಾಗುವುದರಿಂದ ಜ್ವರ ಹಾಗೂ ಲಕ್ಷಣಗಳಾದ ಬಾಯಿ ಮೂಗೂ ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವುದು, ಜ್ಞಾನ ತಪ್ಪುವುದು, ಐದಾರು ದಿನಗಳಕಾಲ ಜ್ವರ ಮುಂದುವರೆಯುವುದು ಹಾಗೂ ಕಡಿಮೆಯಾಗಿ ಜ್ವರ ಹೆಚ್ಚುವುದು, ಕಪ್ಪು ಮಲ ವಿಸರ್ಜನೆ ಇನ್ನಿತರೆ ಲಕ್ಷಣಗಳು ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಬೇಟಿಯಾಗಿ ಸೂಚಿಸಿದ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದು ಅವರು ಹೇಳಿದರು.
ಜಾಥ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಡಾ. ರುದ್ರಪ್ಪ, ಡಾ. ಶಂಕರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಮಾಹಿತಿಗಳ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು.