ವಮೊಗ್ಗ, ನ.16 : ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಸಂದರ್ಭದಲ್ಲಿ ಅರ್ಹ ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಒತ್ತು ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಬದಲಾವಣೆ ಇತ್ಯಾದಿಗಳ ಕುರಿತಾಗಿ ಸ್ವೀಕರಿಸಲಾಗಿರುವ 1.08 ಲಕ್ಷ ಅರ್ಜಿಗಳ ಪೈಕಿ 88193 ಅರ್ಜಿಗಳನ್ನು ಇದುವರೆಗೆ ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ನಿಗದಿತ ಕಾಲಾವಧಿಯ ಒಳಗಾಗಿ ವಿಲೇವಾರಿ ಮಾಡಬೇಕು. ಪ್ರಸ್ತುತ ಎಲ್ಲಾ ಬಿಎಲ್ಒಗಳ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಬಿಎಲ್ಒಗಳು ಪ್ರತಿಯೊಂದು ಮನೆಗೆ ಕಡ್ಡಾಯವಾಗಿ ಭೇಟಿ ನೀಡಿ ಮಾಹಿತಿಯನ್ನು ಪಡೆಯಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ನವೆಂಬರ್ 20, ಡಿಸೆಂಬರ್ 3 ಮತ್ತು 4ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಡಿಸೆಂಬರ್ 8ರವರೆಗೆ ಕಾಲಾವಕಾಶವಿದೆ. ಮತದಾರರ ಅಂತಿಮ ಪಟ್ಟಿಯನ್ನು ಜನವರಿ 5ರಂದು ಪ್ರಕಟಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತ ಒಟ್ಟಾರೆಯಾಗಿ 1014ಇದ್ದು, ಸೊರಬ ತಾಲೂಕಿನಲ್ಲಿ 975 ಹಾಗೂ ಸಾಗರ ತಾಲೂಕಿನಲ್ಲಿ 982 ಇವೆ. ಈ ಎರಡು ತಾಲೂಕುಗಳಲ್ಲಿ ಅರ್ಹ ಮಹಿಳಾ ಮತದಾರರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಬೇಕು. ಇದೇ ರೀತಿ ಜನಸಂಖ್ಯೆ ಹಾಗೂ ಮತದಾರರ ಅನುಪಾತ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 78.46 ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ 76.89 ಇದ್ದು, ರಾಜ್ಯದ ಸರಾಸರಿ ಅನುಪಾತಕ್ಕಿಂತ ಹೆಚ್ಚಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈ ಕುರಿತು ಬಿಎಲ್ಒಗಳು ಪರಿಶೀಲನೆ ನಡೆಸಬೇಕು ಎಂದು ಸೆಲ್ವಕುಮಾರ್ ಅವರು ಸೂಚನೆ ನೀಡಿದರು.
ಈಗಾಗಲೇ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 14,341,38 ಮತದಾರರು ಇದ್ದು, ಈ ಪೈಕಿ 712088 ಪುರುಷ ಹಾಗೂ 722050 ಮಹಿಳಾ ಮತದಾರರು ಇದ್ದಾರೆ. ಎಲ್ಲಾ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಲು ಆಂದೋಲನದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಆಧಾರ್ ಲಿಂಕಿಂಗ್ ಕಾರ್ಯವನ್ನು ಚುರುಕುಗೊಳಿಸಬೇಕು. ಈ ಕುರಿತು ಮತದಾರರನ್ನು ಮನವೊಲಿಸುವ ಕಾರ್ಯವನ್ನು ಮನೆ ಮನೆ ಭೇಟಿ ಸಂದರ್ಭದಲ್ಲಿ ಬಿಎಲ್ಒಗಳು ಮಾಡಬೇಕು. ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಏಜೆಂಟರು ಸಹ ಈ ಕಾರ್ಯದಲ್ಲಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಲ್ಲಾ ತಾಲೂಕು ತಹಶೀಲ್ದಾರ್ಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.