ಶಿವಮೊಗ್ಗ, ಏಪ್ರಿಲ್ 18 : ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹಾಗೂ ಮತದಾನದ ಮಹತ್ವವನ್ನು ತಿಳಿಸಲು ವಸ್ತುಪ್ರದರ್ಶನ ವಿಶಿಷ್ಟ ಪಾತ್ರ ವಹಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್‍ನಿಲ್ದಾಣದಲ್ಲಿ ಮತದಾರರ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಬಸ್‍ನಿಲ್ದಾಣದಲ್ಲಿ ವಸ್ತುಪ್ರದರ್ಶನ ಮಳಿಗೆ ಆರಂಭಿಸಿರುವುದರಿಂದ ಪ್ರಯಾಣಕ್ಕೆ ಹೊರಟಿರುವ ಮತದಾರರನ್ನು ಕ್ಷಣ ಕಾಲ ನಿಲ್ಲಿಸಿ ಮತದಾನದ ದಿನಾಂಕ ನೆನಪಿಸಲು ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಲು ಪ್ರೇರೇಪಣೆ ನೀಡಲಿದೆ ಎಂದವರು ನುಡಿದರು.
ವಿಕಲಚೇತನ ಮತದಾರರು ಮತಗಟ್ಟೆಗೆ ತೆರಳಲು ನೋಂದಾಯಿಸಿದ ಅಭ್ಯರ್ಥಿಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಯಾರೊಬ್ಬರೂ ಮತದಾನದಿಂದ ಹಿಂದುಳಿಯಬಾರದು. ಹಲವು ವಿಷಯ ಸಾಧನೆಗಳಲ್ಲಿ ಮೊದಲ ಸ್ಥಾನ ಹೊಂದಿರುವ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ಮೊದಲ ಪಂಕ್ತಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದವರು ನುಡಿದರು.
ಮತದಾನ ಈ ದೇಶದ ಪ್ರತಿಯೊಬ್ಬ ನಾಗರೀಕರ ಹಕ್ಕು ಮತ್ತು ಕರ್ತವ್ಯವೂ ಆಗಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ತಪ್ಪಿದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲಗೊಂಡು ಅರಾಜಕತೆ ಸೃಷ್ಟಿಗೆ ಕಾರಣವಾಗಲಿದೆ. ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆ ಮತ್ತು ಮತದಾನದ ಮೇಲೆ ಅವಲಂಬಿಸಿದೆ ಎಂದವರು ನುಡಿದರು.
ಚುನಾವಣಾ ಅಕ್ರಮ ತಡೆಯಲು ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಈ ವಸ್ತುಪ್ರದರ್ಶನ ಮಾಹಿತಿ ನೀಡಲಿದೆ. ಸಾರ್ವಜನಿಕವಾಗಿ ನಡೆಯುವ ಚುನಾವಣಾ ಅಕ್ರಮಗಳನ್ನು ಚಿತ್ರಿಸಿ ಸಿ-ವಿಜಲ್ ಮೂಲಕ ದೂರು ದಾಖಲಿಸಿದಲ್ಲಿ ತಕ್ಷಣ ಕ್ರಮಕ್ಕೆ ಜಿಲ್ಲಾಡಳಿತ ಸೂಚನೆ ನೀಡಿ, ಕ್ರಮ ಕೈಗೊಳ್ಳಲಿದೆ. ಮಾಹಿತಿ ನೀಡಿದ ವ್ಯಕ್ತಿಗಳ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದವರು ನುಡಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್, ಕೆ.ಎಸ್.ಆರ್.ಟಿ.ಸಿ.ಯ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಹಾಗೂ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.