ಶಿವಮೊಗ್ಗ, ಸೆಪ್ಟೆಂಬರ್ 27 : ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ದೇಶದ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಅರ್ಹರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಕರೆ ನೀಡಿದರು.
ಅವರು ಇಂದು ಜಿಲ್ಲಾ ಚುನಾವಣಾ ಶಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಚುನಾವಣಾ ರಾಯಭಾರಿಗಳ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತ ಸಂವಿಧಾನವು ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ನಾಗರಿಕರಿಗೆ ಯಾವುದೇ ತಾರತಾಮ್ಯವಿಲ್ಲದೇ ಸಮಾಂತರವಾದ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಮತದಾನ ಮಾಡಲು ನಾಗರಿಕರು ಹಿಂಜರಿಕೆ ಮನೋಭಾವನೆಯನ್ನು ತೊಡೆದು ಹಾಕುವಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಪಾತ್ರ ನಿರ್ವಹಿಸಬೇಕು ಎಂದವರು ನುಡಿದರು.
ವಿದ್ಯಾರ್ಥಿಗಳು ಮೊದಲು ಚುನಾವಣೆ ಬಗ್ಗೆ ತಮ್ಮ ಕುಟುಂಬದ ಸದಸ್ಯರಿಗೆ ಮತ್ತು ತಮ್ಮ ಕಾಲೇಜು ತರಗತಿಯ ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಜಾಗೃತಿ, ಅರಿವು ಮೂಡಿಸಬೇಕು. ಮತದಾನ ಮಾಡುವ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ನಾವೆಲ್ಲರೂ ಒಟ್ಟಾಗಿ ಗಟ್ಟಿಗೊಳಿಸಲು ಸಂಕಲ್ಪ ಮಾಡುವುದರ ಜೊತೆಗೆ, ಕಾಲೇಜು ರಾಯಭಾರಿಗಳು ಮತದಾನ ಮಾಡುವ ಪ್ರಕ್ರಿಯೆಯಲ್ಲಿ ಹಾಗೂ ಹೆಸರುಗಳನ್ನು ನೊಂದಾಯಿಸುವ ಪ್ರಕ್ರಿಯೆಯಲ್ಲಿ ಕಾರ್ಯೋನ್ಮುಖರಾಗಿ ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಮತದಾನ ಮಾಡಿರುವ ದೇಶದ ನಂಬರ್ ಒನ್ ಜಿಲ್ಲಾಯನ್ನಾಗಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಮಾತನಾಡಿ ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ನಾಗರಿಕರು ನಿಷ್ಠೆಯಿಂದ ಮತದಾನ ಮಾಡಿದ್ದರಿಂದ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಈ ಭಾರಿಯೂ ಕೂಡ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಮಂಜುನಾಥ, ನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತಿತರರು ಪಾಲ್ಗೊಂಡಿದ್ದರು.