ಶಿವಮೊಗ್ಗ, ಮಾರ್ಚ್ 27 : ಪ್ರಜಾಪ್ರಭುತ್ವದ ಬೇರುಗಳು ಸಮಾಜದಲ್ಲಿ ಬಲಗೊಳ್ಳಲು ಹೊಸ ಯುವ ಮತದಾರರು ಮತದಾನದ ಪಾವಿತ್ರ್ಯತೆ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನರಿತು ಮತದಾನಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ನಗರದ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಯುವ ಮತದಾರರ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನೇಕ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಪ್ರಥಮಸ್ಥಾನದಲ್ಲಿ ಗುರುತಿಸಲ್ಪಡುವ ಶಿವಮೊಗ್ಗ ಜಿಲ್ಲೆ ಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚು ಮತದಾನ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂಬ ಆಶಯ ಹೊಂದಿದ್ದು, ಅರ್ಹರಾದ ಎಲ್ಲಾ ನೋಂದಾಯಿತ ಮತದಾರರು ತಾವು ಮತ ಚಲಾಯಿಸುವುದಲ್ಲದೇ ಇತರರಿಗೆ ಪ್ರೇರೇಪಿಸುವಂತೆ ಅವರು ವಿನಂತಿಸಿದರು.
ಸತ್ಚಿಂತನೆ, ಸದಾಚಾರಗಳು ವ್ಯಕ್ತಿಯ ವಿಕಾಸಕ್ಕೆ ಕಾರಣವಾಗಿರುವಂತೆ ಉನ್ನತಿಗೆ ಮಾರ್ಗದರ್ಶಿಯಾಗಿವೆ. ಮತದಾನದಿಂದ ಏನು ಲಾಭ ಎಂದುಕೊಂಡು ಮತದಾನದಿಂದ ದೂರ ಉಳಿಯುವುದಕ್ಕಿಂತ ಮತದಾನಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳುವ ಬದಲು ಸಡಿಲಗೊಂಡು ಅಲ್ಲಿ ಸರ್ವಾಧಿಕಾರಿ ಆಡಳಿತ ವ್ಯವಸ್ಥೆ ವಿಜೃಂಭಿಸುತ್ತದೆ ಎಂದರು.
ದೇಶದ ಪ್ರಜ್ಞಾವಂತ ನಾಗರೀಕರೆಲ್ಲರೂ ತಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮತದಾನದ ಮೂಲಕ ದೇಶವನ್ನು ಉನ್ನತಿಗೆ ಕೊಂಡೊಯ್ಯಲು ಸಹಕರಿಸಬೇಕು. ಪ್ರಜ್ಞಾವಂತರು, ಬುದ್ದಿಜೀವಿಗಳಿರುವಲ್ಲಿ ಉತ್ತಮ ಆಡಳಿತ ಕಂಡುಕೊಳ್ಳಬಹುದಾಗಿದೆ ಎಂಬ ಮಾತಿದೆ. ಆದರೆ, ಬುದ್ದಿವಂತರೇ ಮತದಾನದಿಂದ ದೂರು ಉಳಿಯುತ್ತಿರುವುದು ಬೇಸರದ ಸಂಗತಿ. ಪ್ರಜಾಪ್ರಭುತ್ವದ ಹಬ್ಬವೆಂದೇ ಭಾವಿಸಲಾಗಿರುವ ಚುನಾವಣೆ ಮತದಾರನನ್ನೆ ಅವಲಂಬಿಸಿವೆ ಮಾತ್ರವಲ್ಲ ಸಮರ್ಥ ಜನನಾಯಕನ ಆಯ್ಕೆ ಮತ್ತು ಆಡಳಿತ ವ್ಯವಸ್ಥೆಯ ಭಾಗವಾಗಿದೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ, ಮತಖಾತ್ರಿ ಕುರಿತಂತೆ ವಿವಿ ಪ್ಯಾಟ್ ಬಳಕೆ ಮಾಡುವ ಕುರಿತು ಚುನಾವಣಾ ಸಿಬ್ಬಂದಿಗಳು ಯುವ ಮತದಾರರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕೆ.ಟಿ.ಪಾರ್ವತಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಾಲಕೃಷ್ಣ ಹೆಗಡೆ ಮತ್ತು ಎ.ಪಿ.ಓಂಕಾರಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿ ವೃಂದ ಹಾಜರಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ಯುವ ಮತದಾರರು ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.