ಶಿವಮೊಗ್ಗ, ಎ.16 ಎಪ್ರಿಲ್ 23ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಒಟ್ಟು 1675975 ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಟ್ಟು 2021 ಮತಗಟ್ಟೆಗಳಿದ್ದು, ಒಟ್ಟು ಮತದಾರರಲ್ಲಿ 831185 ಪುರುಷರು ಹಾಗೂ 8447740 ಮಹಿಳಾ ಮತದಾರರು ಇದ್ದಾರೆ. ಇತರೆ ಮತದಾರರು 50ಮಂದಿ ಇದ್ದು, ಜನವರಿ ಬಳಿಕ ಹೊಸದಾಗಿ 28550ಮತದಾರರು ತಮ್ಮ ಹೆಸರು ನೊಂದಾಯಿಸಿದ್ದಾರೆ. 2021 ಪ್ರಥಮ ಮತಗಟ್ಟೆ ಅಧಿಕಾರಿ ಹಾಗೂ 2021 ದ್ವಿತೀಯ ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 4042 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಮತಗಟ್ಟೆಗಳಲ್ಲಿ ಕನಿಷ್ಟ ಸೌಲಭ್ಯ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿದಂತೆ ಕನಿಷ್ಟ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರಿಗೆ ಕನಿಷ್ಟ ಆರೋಗ್ಯ ಸೌಲಭ್ಯ ಒದಗಿಸಲು ಮೆಡಿಕಲ್ ಕಿಟ್ ಒದಗಿಸಲಾಗುತ್ತಿದೆ ಎಂದರು.
ಮತದಾನಕ್ಕಾಗಿ ಹಸುಗೂಸಿನೊಂದಿಗೆ ಮತಗಟ್ಟೆಗೆ ಆಗಮಿಸುವ ತಾಯಂದಿರಿಗೆ ಮಗುವನ್ನು ನೋಡಿಕೊಳ್ಳಲು ನೆರವಾಗುವಂತೆ ಪ್ರತಿ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಮತದಾನ ಕೇಂದ್ರವಿರುವ ಕಟ್ಟಡಗಳ ಆವರಣದಲ್ಲಿ ಮತದಾರರ ಸಹಾಯಕ್ಕಾಗಿ ಸಹಾಯ ಕೇಂದ್ರವನ್ನು ತೆರೆಯಲಾಗುತ್ತಿದೆ. ಮತದಾನದ ದಿನ ಮತಗಟ್ಟೆಗಳಲ್ಲಿ ಅಗತ್ಯ ನೆರವು ಒದಗಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಸ್ವಯಂಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಸಖೀ ಮತಗಟ್ಟೆ: ಮಹಿಳೆಯರು ಮತದಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಜಿಲ್ಲೆಯಲ್ಲಿ ಒಟ್ಟು 14ಸಖೀ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2ಸಖೀ ಮತಗಟ್ಟೆಗಳನ್ನು ತೆರೆಯಲಾಗುವುದು. ಇದೇ ರೀತಿ ಬುಡಕಟ್ಟು ಜನರನ್ನು ಮತದಾನಕ್ಕೆ ಆಕರ್ಷಿಸಲು 3 ಬುಡಕಟ್ಟು ಮತದಾನ ಕೇಂದ್ರಗಳನ್ನು ಆರಂಭಿಸಲಾಗುವುದು. ಅಂಗವಿಕಲ ಚುನಾವಣಾ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ 2ಅಂಗವಿಕಲ ಮತದಾನ ಕೇಂದ್ರ ತೆರೆಯಲಾಗುತ್ತಿದೆ ಎಂದು ಹೇಳಿದರು.
ಮತ ಚಲಾಯಿಸಲು ದಾಖಲೆಗಳು: ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದರೂ, ಈ ಕೆಳಕಂಡ ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ. ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ/ರಾಜ್ಯ/ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಅಂಚೆ ಕಚೇರಿ/ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆಯ ಕುರಿತು ನೀಡಿದ ಭಾವಚಿತ್ರವಿರುವ ಪಾಸ್‍ಪುಸ್ತಕ, ಪಾನ್‍ಕಾರ್ಡ್, ಆರ್.ಜಿ.ಐ.ಎನ್.ಪಿ.ಆರ್ ಸ್ಮಾರ್ಟ್ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ ಜಾಬ್ ಕಾರ್ಡ್, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಆಧಾರ ಕಾರ್ಡ್ ಪೈಕಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದರು.
ಮತದಾನದ ಕೊನೆಯ 48ಗಂಟೆಗಳ ಅವಧಿಯಲ್ಲಿ ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಧ್ವನಿವರ್ಧಕ ಬಳಸುವುದನ್ನು, ಬಹಿರಂಗ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.
ಮತದಾರರ ಸಹಾಯವಾಣಿ 1950ಸಂಖ್ಯೆಗೆ ಇದುವರೆಗೆ ಒಟ್ಟು 921ಕರೆಗಳು ಬಂದಿದ್ದು 916 ವಿಲೇವಾರಿ ಮಾಡಲಾಗಿದೆ. ಸಿವಿಜಿಲ್ ಮೂಲಕ 58 ದೂರುಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ ಎಂದರು.
ಮಕ್ಕಳಿಗಾಗಿ ಅಣಕು ಮತದಾನ: ಮಕ್ಕಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅವರ ಮೂಲಕ ಹಿರಿಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎಪ್ರಿಲ್ 19ರಂದು ಮಕ್ಕಳಿಗಾಗಿ ಅಣಕು ಮತದಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಣಕು ಮತದಾನ ಕೇಂದ್ರ ತೆರೆಯಲಾಗುತ್ತಿದ್ದು, 6ರಿಂದ 18ವರ್ಷದವರೆಗಿನ ಮಕ್ಕಳು ಇಲ್ಲಿ ಅಣಕು ಮತ ಚಲಾಯಿಸಬಹುದಾಗಿದೆ. ಮಕ್ಕಳು ತಮ್ಮ ಹೆಸರನ್ನು 9945387650 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಬಹುದಾಗಿದ್ದು, ಅಣಕು ಮತದಾನದ ಸಂದರ್ಭದಲ್ಲಿ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಬೇಕಾಗಿದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಸ್ವೀಪ್ ಜಿಲ್ಲಾ ಐಕಾನ್ ಸ್ಟಾನಿ ಜಾರ್ಜ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.