ಶಿವಮೊಗ್ಗ, ಡಿಸೆಂಬರ್ 11 : ಪ್ರತಿಯೊಬ್ಬ ಮಕ್ಕಳೂ ಲಸಿಕೆಯನ್ನು ಪಡೆಯಬೇಕು, ಮಕ್ಕಳ ಉಜ್ಜಲವಾದ ಭವಿಷ್ಯಕ್ಕಾಗಿ ಆರೋಗ್ಯಕರ ದೇಹ ಮುಖ್ಯ. ಈ ಬಗ್ಗೆ ಪೋಷಕರು ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಅವರು ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಕಛೇರಿ ಮತ್ತು ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ, ಜಿಲ್ಲಾ ಮಟ್ಟದ ವಿಶೇಷ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು, ಐದು ಮತ್ತು ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೆ ಅವರವರ ಶಾಲೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. 5, 6ನೇ ವಯಸ್ಸಿನ ಮಕ್ಕಳಿಗೆ ಡಿಪಿಟಿ ವರ್ಧಕ ಲಸಿಕೆ ಹಾಗೂ 10ನೇ ವಯಸ್ಸಿನ ಮಕ್ಕಳಿಗೆ ಟಿ.ಡಿ. ಲಸಿಕೆಯನ್ನು ನೀಡಲಾಗುವುದು. ಜೊತೆಗೆ ಲಸಿಕಾಕರಣ ಕಾರ್ಡ್ ಸಹ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಮ್. ನಾಗರಾಜ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕೇಂದ್ರ ಹತ್ತಿರದ ಅಂಗನವಾಡಿಗಳಲ್ಲಿ ಲಸಿಕೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.
ಲಸಿಕೆಯನ್ನು ಮಕ್ಕಳಿಗೆ ನೀಡುವುದರಿಂದ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗಗಳಿಂದ ರಕ್ಷಿಸುತ್ತದೆ. ಈ ಲಸಿಕೆಯ ಕುರಿತು ಪೋಷಕರಿಗೆ ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಜೇಶ್, ಶಾಲೆಯ ಪ್ರಾಂಶುಪಾಲರು ಶ್ರೀಮತಿ ನವೀನ, ವೈದ್ಯಾಧಿಕಾರಿ ದಿನೇಶ್ ಶಾಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.