ಜು.23 ರ ಮಧ್ಯರಾತ್ರಿಯಿಂದ ಬಲ-ಎಡದಂಡೆ ಕಾಲುವೆಗಳು ನೀರು
ಶಿವಮೊಗ್ಗ, ಜುಲೈ 15: ಭದ್ರಾ ಜಲಾಶಯದ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಹಾಗೂ ಶಾಖಾ ನಾಲೆಗಳಿಗೆ ಜು.23 ರ ಮಧ್ಯರಾತ್ರಿಯಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ತಿಳಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರೊಂದಿಗೆ ಚರ್ಚೆ ನಡೆಸಿ ಒಮ್ಮತದಿಂದ ಜುಲೈ 23 ರಿಂದ ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾನಾಲೆಗಳಲ್ಲಿ ನೀರು ಹರಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಜುಲೈ 14 ರಂದು ಜಲಾಶಯದಲ್ಲಿ 157 ಅಡಿ 4 ಇಂಚುಗಳಷ್ಟು ನೀರು ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆ 40.484 ಟಿಎಂಸಿ ಇದೆ. ಇದರಲ್ಲಿ 8.50 ಟಿ.ಎಂ.ಸಿ ಬಳಕೆಗೆ ಬಾರದ(ಡೆಡ್ ಸ್ಟೋರೇಜ್) ಪ್ರಮಾಣವಾಗಿದ್ದು, 26.652 ಟಿಎಂಸಿ ಬಳಕೆಗೆ ಬರುವ ನೀರಿನ ಪ್ರಮಾಣವಾಗಿದೆ. ಭದ್ರಾ ಬಲದಂಡೆ ಕಾಲುವೆಗೆ ಪ್ರತಿದಿನ ಸರಾಸರಿ 3050 ಕ್ಯೂಸೆಕ್ಸ್ ಮತ್ತು ಭದ್ರಾ ಎಡದಂಡೆ ಕಾಲುವೆಗೆ 490 ಒಟ್ಟು 3540 ಕ್ಯೂಸೆಕ್ಸ್ ಬೇಡಿಕೆ ಇದೆ.
ಮುಂಗಾರು ಹಂಗಾಮಿಗೆ ಅವಶ್ಯವಿರುವ ನೀರಿನ ವಿವರಣೆ : ಪ್ರಸ್ತುತ ಜಲಾಶಯದಲ್ಲಿ ಬಳಕೆಗೆ 26.652 ಟಿಎಂಸಿ ನೀರು ಲಭ್ಯವಿದ್ದು ಮುಂಗಾರು ಅವಧಿಗೆ 49.13 ಟಿಎಂಸಿ ನೀರು ಅವಶ್ಯಕತೆ ಇದೆ. ಜುಲೈ ರಂದು ಕೊರತೆಯಿರುವ ನೀರಿನ ಪ್ರಮಾಣ 22.478 ಟಿಎಂಸಿ, ಆಗಿದ್ದು ಈ ಪ್ರಮಾಣದ ಆಧಾರದಲ್ಲಿ ಸದಸ್ಯರೆಲ್ಲ ಚರ್ಚಿಸಿ ಜು.23 ರಿಂದ ನೀರು ಹರಿಸಲು ನಿರ್ಧರಿಸಿದ್ದೇವೆ ಎಂದರು.
ಸದಸ್ಯರಾದ ಷಡಾಕ್ಷರಪ್ಪ ಮಾತನಾಡಿ, ನೀರಾವರಿ ಸಲಹಾ ಸಮಿತಿಯ ಸಭೆ ಕರೆಯದೆ, ಚರ್ಚೆ ಮಾಡದೇ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಅಧಿಕಾರಿಗಳೇ ನೀರು ಬಿಡುವುದಾದರೆ ಸಮಿತಿಯು ಇದ್ದೂ ಉಪಯೋಗವೇನು? ಜುಲೈ 6 ರ ಸರ್ಕಾರಿ ಆದೇಶದ ಪ್ರಕಾರ ಜು.7 ರಿಂದ (ಅಕ್ಟೋಬರ್ 15 ರವರಗೆ) ಪ್ರತಿ ದಿನ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗುತ್ತಿದೆ. ಮಳೆಯ ಅಭಾವದಿಂದ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಕಡಿಮೆ ಇದ್ದು ನಮ್ಮ ರೈತರೇ ಕಷ್ಟಪಡುತ್ತಿದ್ದರೆ, ಹೀಗೆ ಏಕಾಏಕಿ ಅಧೀಕ್ಷಕ ಅಭಿಯಂತರರೇ ನೀರು ಹರಿಸುತ್ತಿರುವುದು ಸೂಕ್ತವಲ್ಲ ಎಂದು ದೂರಿದರು.
ಈ ಬಗ್ಗೆ ಇತರೆ ಸದಸ್ಯರೂ ಮಾತನಾಡಿ, ಸರ್ಕಾರಿ ಆದೇಶದಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹರಿಸಬೇಕು ಎಂದಿದೆ. ನೀರು ಕಡಿಮೆ ಇದ್ದರೆ ನೀರು ಕೊಡುವ ಅವಶ್ಯಕತೆ ಇಲ್ಲ. ನೀರು ಕೊಡಬೇಕೋ ಬೇಡವೋ ಎಂಬ ಬಗ್ಗೆ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ಕರೆಯದೇ ಅಧಿಕಾರಿಗಳೇ ನೀರು ಹರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ತ್ಯಾವಣಿಗಿ ಉಪವಿಭಾಗದ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಯಾವುದೇ ಯೋಜನೆಗಳಿಗೆ ನೀರು ಹರಿಸಲು ಸಮಿತಿ ತೀರ್ಮಾನವೇ ಅಂತಿಮ. ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಮುನ್ನ ಭದ್ರಾ ಅಚ್ಚುಕಟ್ಟು ಪ್ರದೇಶ ನಿರ್ವಹಣೆಗೆ ಬೇಕಾದ ನೀರಿನ ಪ್ರಮಾಣ ಎಷ್ಟು ಎಂಬ ಆಧಾರದಲ್ಲಿ ಚರ್ಚೆ ಆಗಬೇಕು. ನೀರು ಉಳಿದರೆ ಮೇಲ್ದಂಡೆ ಯೋಜನೆಗೆ ಹರಿಸಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷರು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಕುರಿತು ಆದ ಆದೇಶ ಹಾಗೂ ಜಲಾಶಯದಲ್ಲಿ ನೀರಿನ ಪ್ರಮಾಣದ ಬಗ್ಗೆ ಎಂ.ಪಿ, ಎಂಎಲ್ಎಯವರ ಗಮನಕ್ಕೆ ತಂದಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳಿಗೆ ರಾಜಕೀಯ ಒತ್ತಡ ತಂದು ಹೀಗೆ ಆದೇಶ ಮಾಡಿಸಲಾಗಿದೆ. ಆದಗ್ಯೂ ನಾನು ಪ್ರಸ್ತುತ ಜಲಾಶಯದ ನೀರಿನ ಪರಿಸ್ಥಿತಿ ಬಗ್ಗೆ ವಿವರಿಸಿ ಭದ್ರಾ ಮೇಲ್ದಂಡೆಗೆ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟುದಾರರಿಗೆ ನೀರಿನ ಕೊರತೆಯಾಗಲಿದ್ದು ಅವರು ಪ್ರತಿಭಟನೆ ಮಾಡುವ ಸಂಭವ ಇದೆ. ಆದ ಕಾರಣ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿರುವುದನ್ನು ತಕ್ಷಣದಿಂದ ನಿಲ್ಲಿಸಬೇಕೆಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ರವರಿಗೆ ಪತ್ರ ಬರೆದಿದ್ದೇನೆ.
ರೈತರ ಹಿತದೃಷ್ಟಿಯಿಂದ ನಾನು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ. ರೈತ ಸಂಘದ ಗಮನಕ್ಕೂ ತಂದಿದ್ದೇನೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸದಿರಲು ಸಭೆ ನಿರ್ಧಾರ : ರೈತ ಸಂಘದ ಮುಖಂಡರು ಹಾಗೂ ಸಮಿತಿ ಸದಸ್ಯರಾದ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಇನ್ನೂ 2.5 ಲಕ್ಷ ಎಕರೆ ಮುಂಗಾರು ಹಂಗಾಮಿನ ಬೆಳೆಗೆ ನಾವು ನೀರು ಹರಿಸಿಲ್ಲ. ಸರ್ಕಾರದ ಆದೇಶ ಬಂದ ನಂತರ ನೀರಾವರಿ ಸಲಹಾ ಸಮಿತಿ ಸಭೆಯನ್ನೂ ಕರೆಯದೇ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ತಮ್ಮ ಕೈಯಲ್ಲೇ ಬೀಗ ಇದೆ ಎಂದು ನೀರು ಹರಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ನೀರು ಕೊಡಬಾರದು ಎಂದಲ್ಲ. ಅದಕ್ಕೆ ಒಂದು ರೀತಿ-ನೀತಿ ಇದೆ. ಸೌಹಾರ್ಧಯುತವಾಗಿ ಚರ್ಚೆ ಮಾಡಿ ನೀರು ಬಿಡುವ ನಿರ್ಧಾರ ಆಗಬೇಕು. ಸರ್ವಾಧಿಕಾರಿ ಧೋರಣೆಯಿಂದ ನೀರು ಪಡೆಯುವಂತೆ ಆಗಬಾರದು.
ಜಲಾಶಯಕ್ಕೆ ತುಂಗಾ ಯೋಜನೆಯ ನೀರು ಬಿದ್ದ ಮೇಲೆ ಭದ್ರಾ ಮೇಲ್ದಂಡೆ ನೀರನ್ನು ಹರಿಸಬೇಕು. ನಮ್ಮ ರೈತರು ತೋಟ, ಬೆಳೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ ಆಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ತತ್ಕ್ಷಣದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಸಭೆ ನಿರ್ಧಾರ ಕೈಗೊಂಡು, ಸರ್ಕಾರಕ್ಕೆ ಕಳುಹಿಸಬೇಕು ಎಂದರು. ಸರ್ವ ಸದಸ್ಯರು ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.
ಭದ್ರಾ ಮೇಲ್ದಂಡೆಗೆ ತುಂಗಾ ಯೋಜನೆಯಿಂದ ನೀರು ನೀಡಲು ಒತ್ತಾಯ: 17 ಟಿಎಂಸಿ ತುಂಗಾದಿಂದ ಹಾಗೂ 12.5 ಟಿಎಂಸಿ ಭದ್ರಾದಿಂದ ಭದ್ರಾ ಮೇಲ್ದಂಡೆಗೆ ನೀರು ನೀಡಬೇಕೆಂದಿದೆ. ಆದರೆ ನೀರಿನ ಅಭಾವದ ಹಿನ್ನೆಲೆ ಒಟ್ಟು 29.5 ಟಿಎಂಸಿ ನೀರನ್ನೂ ತುಂಗಾದಿಂದಲೇ ಲಿಫ್ಟ್ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ನೀಡುವಂತೆ ಸರ್ಕಾರ ಹೊಸ ಡಿಪಿಆರ್ ರಚಿಸಲು ಒತ್ತಾಯಿಸಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ರುದ್ರಮೂರ್ತಿ, ಸದಾಶಿವಪ್ಪಗೌಡ, ರಾಜಪ್ಪ, ಹನುಮಂತಪ್ಪ, ದ್ಯಾಮಪ್ಪ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಇಂಜಿನಿಯರ್ ಯತೀಶ್ಚಂದ್ರ, ಮುಖ್ಯ ಆಡಳಿತಾಧಿಕಾರಿ ಕೃಷ್ಣಮೂರ್ತಿ.ಬಿ.ಕುಲಕರ್ಣಿ, ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ್, ಇತರೆ ಸದಸ್ಯರು, ರೈತರು, ಅಧಿಕಾರಿಗಳು ಇದ್ದರು