ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ತುಂಗಾ ಮೇಲ್ದಂಡೆ ಯೋಜನೆ (ಯು.ಟಿ.ಪಿ) ಹಾಗೂ ಭದ್ರಾ ಕಾಡ ಪ್ರಾಧಿಕಾರಕ್ಕೆ ಸಂಬಂಧ ಪಟ್ಟ ಮುಖ್ಯ ಕಾರ್ಯಪಾಲಕ ಅಭಿಯಂತರರು, ಅಧೀಕ್ಷಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾಡ ಆಡಳಿತಾಧಿಕಾರಿ ಮತ್ತು ಉಪ ಆಡಳಿತಾಧಿಕಾರಿ ಗಳೊಂದಿಗೆ ಸಭೆ ನಡೆಸಿದರು.ಸಭೆಯಲ್ಲಿ ಪ್ರಮುಖವಾಗಿ ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಕುರಿತು ಮಾಹಿತಿ ಪಡೆದು, ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ, ಮುಂದಿನ ಹಂತದ ಯೋಜನೆಗಳ ಬಗ್ಗೆ, ಅನುದಾನ ಕೊರತೆ ಉಂಟಾಗಿ ಅರ್ಧಕ್ಕೆ ನಿಂತ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಮುಂದುವರೆದು ಅಧ್ಯಕ್ಷರು ಅಧಿಕಾರಿಗಳನ್ನು ಕುರಿತು..ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಕಂಡು ಬಂದರೆ, ಭ್ರಷ್ಟಾಚಾರ ನಡೆದದ್ದು ನನ್ನ ಗಮನಕ್ಕೆ ಬಂದರೆ, ರೈತರಿಗೆ ಅಗೌರವ ತೋರಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು ಜೊತೆಗೆ ಕಾಮಗಾರಿಗಳು ಸೂಕ್ತ ಅವಧಿಯಲ್ಲಿ ಮುಗಿಸಬೇಕು, ನಿಧಾನಗತಿಯ ಕೆಲಸ ನಾನು ಎಂದಿಗೂ ಸಹಿಸುವುದಿಲ್ಲ, ರೈತರ ಪರ ನಿರಂತರ ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದು ಕುತಿದ್ದೇನೆ, ಸನ್ಮಾನ್ಯ ಮುಖ್ಯಮಂತ್ರಿಗಳು ಈ ಹೋರಾಟವನ್ನು ಗುರುತಿಸಿ ಈ ಸ್ಥಾನ ನೀಡಿದ್ದಾರೆ.ನಿಮ್ಮ ಯಾವುದೇ ವಿಳಂಬ ನೀತಿಯನ್ನು ನಾನು ಖಂಡಿತ ಒಪ್ಪುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.ಮುಂದುವರೆದು… ಯಾವುದೇ ಕಾರಣಕ್ಕೂ ರೈತರಿಗೆ ಅಧಿಕಾರಿಗಳು ಅಗೌರವ ತೋರದೆ ಸೂಕ್ತ ಗೌರವ ನೀಡಬೇಕು, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು, ರೈತರ ಬಗ್ಗೆ ತಾತ್ಸಾರ ಮನೋಭಾವ ಬೆಳಸಿಕೊಳ್ಳದೆ ಅವರಿಗೆ ಸೂಕ್ತವಾಗಿ ಸ್ಪಂದಿಸಬೇಕು, ಇದನ್ನು ಮೀರಿ ನೀವು ನಡೆದುಕೊಂಡರೆ ನಾನು ಸಹಿಸುವುದಿಲ್ಲ ಎಂದು ಹೇಳಿದರು.ರೈತರಿಗೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸ ಅಧಿಕಾರಿಗಳಿಂದ ಆಗಬೇಕು.ಅವರಿಗೆ ಅರ್ಥವಾಗುವ ರೀತಿಯಲ್ಲಿ ಮುಟ್ಟಿಸಬೇಕು ಎಂದು ಸೂಚನೆ ನೀಡಿದರು. ಈ ಸಭೆಯಲ್ಲಿ ಭದ್ರಾ ಕಾಡ ನಿರ್ದೇಶಕರಾದ ಷಡಾಕ್ಷರಿ ಅವರು, ರುದ್ರಮೂರ್ತಿ ಅವರು, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಯತೀಶ್ ಚಂದ್ರ ಅವರು, ಆಡಳಿತಾಧಿಕಾರಿ ಕೃಷ್ಣ ಮೂರ್ತಿ ಅವರು ಹಾಗೂ ಇನ್ನಿತರ ಹಲವಾರು ಪ್ರಮುಖರು ಉಪಸ್ಥಿತರಿದ್ದರು.