ಭತ್ತದ ಬೆಳೆ ಹಲವು ಬಗೆಯ ಪೀಡೆಗಳಿಗೆ ತುತ್ತಾಗುತ್ತದೆ. ವಿವಿಧ ರೀತಿಯ ಕೀಟಗಳು, ರೋಗಗಳು ಹಾಗೂ ಕಳೆಗಳು ಬೆಳೆಗೆ ತೊಂದರೆ ಕೊಟ್ಟು ಇಳುವರಿಯನ್ನು ಕುಗ್ಗಿಸುತ್ತದೆ. ಇವುಗಳ ಬಾಧೆಯಿಂದ ಬೆಳೆಯನ್ನು ಸಂರಕ್ಷಿಸಿ ಉತ್ಪಾದನೆಯಲ್ಲಿ ಆಗುವ ನಷ್ಟಗಳನ್ನು ತಗ್ಗಿಸಿದಲ್ಲಿ ರೈತನ ಆದಾಯ ಹೆಚ್ಚುವುದು. ಭತ್ತದ ಸಾಗುವಳಿ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಪೀಡೆ ಬಾಧಿಸುತ್ತಲೇ ಬಂದಿದೆ. ಈ ಪೀಡೆಗಳನ್ನು ನಿವಾರಿಸಲು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿದ್ದಲ್ಲಿ ರೈತರು ಇವುಗಳಿಂದ ಆಗುವ ತೊಂದರೆಗಳನ್ನು ನಿರ್ವಹಿಸಬಹುದು. ಆದರೂ ಸಹ ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ, ರೈತರು ವಿವೇಚನ ರಹಿತವಾಗಿ ಮತ್ತು ಅಸಮತೋಲನ ಪ್ರಮಾಣದಲ್ಲಿ ಬಳಸುತ್ತಿರುವ ರಸಗೊಬ್ಬರಗಳು ಹಾಗೂ ಸರಿಯಾದ ಸಮಯಕ್ಕೆ ಕೀಟ ಮತ್ತು ರೋಗಗಳ ಲಕ್ಷಣಗಳನ್ನು ಗುರುತಿಸದೆ ಬಳಸುತ್ತಿರುವ ಪೀಡೆನಾಶಕಗಳಿಂದ ಕೆಲವೊಂದು ಕೀಟ ಮತ್ತು ರೋಗಗಳ ತೀವ್ರತೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಂದುಜಿಗಿ ಹುಳುವಿನ ಬಾಧೆಯು ತೀವ್ರವಾಗಿದ್ದು, ಇದರಿಂದ ಭತ್ತದ ಬೆಳೆಯ ಇಳುವರಿ ಕಡಿಮೆಯಾಗಿ ಬೆಳೆ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ. ಇದನ್ನರಿತು ಈ ಲೇಖನದಲ್ಲಿ ಭತ್ತಕ್ಕೆ ತಗಲುವ ಕಂದುಜಿಗಿ ಹುಳುವಿನ ಬಾಧೆಯ ಲಕ್ಷಣಗಳು ಮತ್ತು ಅವುಗಳ ನಿರ್ವಹಣಾ ಕ್ರಮಗಳನ್ನು ವಿವರಿಸಲಾಗಿದೆ.
ಬಿಳಿ ಮಿಶ್ರಿತ ಕಂದು ಬಣ್ಣದ ಜಿಗಿ ಹುಳುವಿನ ಹೆಣ್ಣು ಮತ್ತು ಗಂಡು ಹುಳುಗಳಲ್ಲಿ ಉದ್ದ ರೆಕ್ಕೆಗಳಿರುವ ಮತ್ತು ಗಿಡ್ಡ ರೆಕ್ಕೆಗಳಿರುವ ಎರಡು ಬಗೆಯ ಹುಳುಗಳನ್ನು ಕಾಣಬಹುದು. ಗಿಡ್ಡ ರೆಕ್ಕೆ ಹುಳುಗಳು ಹಾರಲಾರವು. ಅವು ಸಸ್ಯಗಳ ಬುಡದಲ್ಲಿಯೇ ವಾಸಿಸಿ ರಸವನ್ನು ಹಿರುತ್ತವೆ. ಹೀಗಾಗಿ ಹಾನಿಯ ಸ್ಥಳಗಳು ಸಣ್ಣ ಸಣ್ಣ ವೃತ್ತಾಕಾರದಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಪ್ರತಿ ಹೆಣ್ಣು ಹುಳು 100 ರಿಂದ 300 ಮೊಟ್ಟೆಗಳನ್ನು ಇಡಬಲ್ಲದು. ಮೊಟ್ಟೆಗಳನ್ನು ನೀರಿನ ಮಟ್ಟದಲ್ಲಿ ಸಸ್ಯದ ಕಾಂಡದೊಳಗೆ ಇಡುತ್ತವೆ.


ಕೀಟ ಬಾಧೆಯ ಚಿಹ್ನೆಗಳು

ಕಂದುಜಿಗಿ ಹುಳುಗಳ ಆಕ್ರಮಣಕ್ಕೊಳಗಾದ ಭತ್ತದ ಬುಡದ ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ತೆಂಡೆಗಳು ಸುಟ್ಟಂತೆ ಕಾಣುತ್ತವೆ. ಇದನ್ನು ಕಂದುಜಿಗಿ ಹುಳುವಿನ ಸುಡು ಎಂದು ಕರೆಯುತ್ತೇವೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ, ಸಸ್ಯಗಳ ಬುಡಭಾಗದಲ್ಲಿ ಕಾಂಡಗಳ ಮೇಲೆ ಈ ಕೀಟಗಳು, ಬಹುದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಬಾಧೆಗೊಳಗಾದ ಕಾಂಡಗಳ ಮೇಲೆ ಲೋಳೆಯಂತಿರುವ ಜಿಗುಟಾದ ಕಪ್ಪು ವಸ್ತು ಕಂಡುಬರುತ್ತದೆ. ಸಸ್ಯಗಳನ್ನು ಅಲುಗಾಡಿಸಿದರೆ, ಬಿಳಿ ಮಿಶ್ರಿತ ಕಂದು ಬಣ್ಣದ ಜಿಗಿ ಹುಳುಗಳು ನೀರಿಗೆ ಧುಮುಕುವುದನ್ನು ಕಾಣಬಹುದು. ಮರಿ ಹುಳುಗಳು ಮತ್ತು ಬೆಳೆದ ಹುಳುಗಳೆರಡೂ ಸಸ್ಯದ ರಸವನ್ನು ಹೀರುತ್ತವೆ.
ನಿರ್ವಹಣೆ
• ಭತ್ತದಲ್ಲಿ ಸಾಲು ನಾಟಿ ಪದ್ಧತಿ ಅನುಸರಿಸುವುದು ಮತ್ತು ಪ್ರತಿ 8 ರಿಂದ 10 ಅಡಿಗಳ ಅಂತರದಲ್ಲಿ ಒಂದು ಸಾಲು ನಾಟಿ ತಪ್ಪಿಸುವುದು, ಯಾಂತ್ರೀಕೃತ ನಾಟಿ ಮಾಡುವುದು ಮತ್ತು ರೈತರ ನಾಟಿ ಪದ್ಧತಿಯಲ್ಲಿ 8 ರಿಂದ 10 ಅಡಿಗಳ ಅಂತರದಲ್ಲಿ ಒಂದು ಅಡಿ ಖಾಲಿ ಜಾಗ ಬಿಟ್ಟು ಪಟಗಳನ್ನು ಮಾಡುವುದರಿಂದ ಗದ್ದೆಯಲ್ಲಿ ಗಾಳಿ ಯಾಡಲು ಅನುಕೂಲವಾಗಿ ಹುಳುಗಳ ಬಾಧೆ ಕಡಿಮೆಯಾಗುವುದು ಹಾಗೂ ಕೀಟನಾಶಕಗಳ ಸಿಂಪರಣೆಯನ್ನು ಸಮರ್ಪಕವಾಗಿ ಕಡಿಮೆ ಮಾಡಬಹುದು.
• ಭತ್ತದ ಗದ್ದೆಯ ಬದುಗಳು ಮತ್ತು ಹೊಲಗಾಲುವೆಗಳಲ್ಲಿ ಬೆಳೆಯುವ ಹುಲ್ಲನ್ನು ಕಾಲ ಕಾಲಕ್ಕೆ ಕೊಯ್ದು ಮಾಡಿ ಬಸ್ವಚ್ಛ ಮಾಡುವುದು.
• ಸಾರಜನಕಯುಕ್ತ ರಸಗೊಬ್ಬರಗಳನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬಳಸಬೇಕು
• ಗದ್ದೆಯಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಹಾಗೂ ಪ್ರತಿ 5 ರಿಂದ 6 ದಿನಗಳಿಗೊಮ್ಮೆ ಗದ್ದೆಯಿಂದ ನೀರನ್ನು ಸಂಪೂರ್ಣವಾಗಿ ಹೊರಹಾಕಬೇಕು.
• ಕೀಟನಾಶಕ ಸಿಂಪಡಿಸಲು ಕಷ್ಟವಾದಲ್ಲಿ ಹರಳು ರೂಪದ ಕೀಟನಾಶಕಗಳಾದ ಫೆÇೀರೇಟೆ – 10ಜಿ (ಎಕರೆಗೆ 5 ಕೆಜಿ) ಅಥವಾ ಕಾರ್ಬೋಫ್ಯೂರಾನ್-3ಜಿ (ಎಕರೆಗೆ 8 ಕೆಜಿ) ಹರಳನ್ನು ಮರಳಿನೊಂದಿಗೆ ಬೆರೆಸಿ ಎರಚುವುದು.
• ಕೀಟಬಾಧೆ ತೀವ್ರಗೊಂಡಾಗ ಅಥವಾ ಆರ್ಥಿಕ ನಷ್ಟ ಉಂಟು ಮಾಡುವಂತಹ ಹಂತ ಮೀರುವ ಸಮಯದಲ್ಲಿ ಸಿಂಪರಣಾ ದ್ರಾವಣದ ಹನಿಗಳು ಬೆಳೆಯ ಬುಡ ಭಾಗಕ್ಕೂ ತಲುಪುವ ಹಾಗೆ ನಾಜಲ್ ಹಿಡಿದು ಕ್ಲೋರೋಪೈರಿಪಾಸ್ 20 ಇ. ಸಿ. 2 ಮಿ. ಲೀ. ಅಥವಾ ಇಮಿಡಾಕ್ಲೋಪ್ರ್ರಿಡ್ 200 ಎಸ್. ಎಲ್. 0.5 ಮಿ. ಲೀ. ಅಥವಾ ಅಸಿಫೇಟ್ 75% ಎಸ್. ಪಿ. 1 ಗ್ರಾಂ ಅಥವಾ ಬುಪ್ರಫೇಜಿನ್ ಶೇ. 25 ಎಸ್. ಸಿ. 1.5 ಮಿ. ಲೀ. ಅಥವಾ ಥಯೋಮೆಥಾಕ್ಯಾಮ್ 25 ಡಬ್ಲ್ಯೂ. ಜಿ. 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪಡಿಸಬೇಕು. ಒಂದು ಎಕರೆಗೆ 250-300 ಲೀ. ಸಿಂಪರಣಾ ದ್ರಾವಣ ಬೇಕಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Dr. B.C.HANUMANTHASWAMY

Senior Scientist and Head

ICAR-Krishi Vigyan Kendra

Savalanga Road, Navule,

Shivamogga – 577 204, Karnataka

Mobile : 94808 38976

error: Content is protected !!