ಭತ್ತ (ಒರೈಜಾ ಸಟೈವಾ) ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಪ್ರಧಾನ ಆಹಾರ ಬೆಳೆ. ಭಾರತವು ಪ್ರಪಂಚದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕರ್ನಾಟಕವು ಭಾರತದ ಹತ್ತನೇ ಪ್ರಮುಖ ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಭತ್ತವನ್ನು ವಿವಿಧ ಮಣ್ಣು, ವೈವಿಧ್ಯಮಯ ತಾಪಮಾನ ಮತ್ತು ಮಳೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಬೇರೆ ಬೇರೆ ಕೀಟಗಳು ಬೇರೆ ಪ್ರದೇಶದಲ್ಲಿ ಬಾಧಿಸುತ್ತವೆ.
ಭಾರತದಲ್ಲಿ 70ಕ್ಕೂ ಹೆಚ್ಚು ಪ್ರಬೇಧಗಳನ್ನು ಭತ್ತದ ಕೀಟ ಪೀಡೆಗಳಾಗಿ ದಾಖಲಿಸಲಾಗಿದೆ ಮತ್ತು ಸುಮಾರು 20 ಜಾತಿಯ ಕೀಟಗಳು ಪ್ರಾಮುಖ್ಯತೆಯನ್ನು ಪಡೆದಿವೆ ಮತ್ತು ಬಹಳಷ್ಟು ಪ್ರದೇಶಗಳಲ್ಲಿ ಹಾನಿ ಮಾಡುತ್ತವೆ. ಒಟ್ಟಿನಲ್ಲಿ ವಿವಿಧ ಕೀಟಗಳು ಭತ್ತದ ಎಲ್ಲಾಭಾಗಗಳನ್ನು ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಹಾನಿ ಮಾಡಿ ಶೇ. 20 ರಿಂದ ಶೇ. 50 ರಷ್ಟು ಇಳುವರಿ ಕಡಿತ ಮಾಡುತ್ತವೆ.
ಈ ಕೆಳಗೆ ಭತ್ತದ ಮುಖ್ಯ ಕೀಟಗಳು ಮತ್ತು ನುಸಿಪೀಡೆಗಳು, ಅವುಗಳ ವೈಜ್ಞಾನಿಕ ಹೆಸರು, ಅವುಗಳ ಹಾನಿಯ ಲಕ್ಷಣ, ಜೀವನ ಚರಿತ್ರೆ ಮತ್ತು ಹತೋಟಿ ಕ್ರಮಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಭತ್ತದ ಪ್ರಮುಖ ಕೀಟಗಳನ್ನು ರಸಹೀರುವ ಕೀಟಗಳು, ಕಾಂಡ ಕೊರೆಯುವ ಕೀಟಗಳು ಮತ್ತು ಎಲೆ ತಿನ್ನುವ ಕೀಟಗಳೆಂದು ವರ್ಗೀಕರಿಸಬಹುದಾಗಿದೆ. ಇವುಗಳ ಜೊತೆಗೆ ಪ್ರಮುಖ ನುಸಿಪೀಡೆಗಳ ಬಗ್ಗೆಯೂ ತಿಳಿಸಲಾಗಿದೆ.
I. ರಸ ಹೀರುವ ಕೀಟಗಳು:ಥ್ರಿಪ್ಸ್ :ಸ್ಟೆನ್‍ಕೀಟೋಥ್ರಿಪ್ಸ್ (=ಬೇಲಿಯೋ ಥ್ರಿಪ್ಸ್) ಬೈಫಾರ್ಮಿಸ್ (Sಣeಟಿಛಿhಚಿeಣoಣhಡಿiಠಿs (=ಃಚಿಟioಣhಡಿiಠಿs) biಜಿoಡಿmis) (ಥ್ರಿಪಿಡೆ, ಥೈಢಿಪಾನಾಪ್ಟೆರಾ)
ಹಾನಿಯ ಲಕ್ಷಣಗಳು: ಮರಿ ಮತ್ತು ಪ್ರೌಢ ಕೀಟಗಳು ಮೃದು ಎಲೆಗಳ ರಸವನ್ನು ಹೀರುತ್ತವೆ. ಪರಿಣಾಮವಾಗಿ ಎಲೆಗಳ ಮೇಲೆ ಬಿಳಿಯ ಬಣ್ಣದ ಗೆರೆಗಳು ಕಂಡುಬರುತ್ತವೆ. ನಂತರ ಎಲೆಗಳು ಉದ್ದದ ಸುರುಳಿಯಾಗಿ ತುದಿಯಿಂದ ಕೆಳಕ್ಕೆ ಒಣಗಲು ಪ್ರಾರಂಭವಾಗುತ್ತದೆ. ಬಾಧಿತ ಸಸಿಮಡಿಗಳು ಕಂದುಬಣ್ಣಕ್ಕೆ ತಿರುಗಿ ಮಸುಕಾದ ಹಳದಿ ಬಣ್ಣವನ್ನು ಪ್ರದರ್ಶಿಸುತ್ತವೆ. ತೀವ್ರತರವಾಗಿ ಹಾನಿಯಾದ ಸಸಿಮಡಿಯಲ್ಲಿ ಸಂಪೂರ್ಣವಾಗಿ ಸಸಿಗಳು ಒಣಗುವ ಸಾಧ್ಯತೆ ಇದೆ. ಎಲೆಗಳು ದೊಡ್ಡದಾದ ಸೂಜಿಗಳಂತೆ ಕಾಣುತ್ತವೆ. ಕೆಲವೊಮ್ಮೆ ನಾಟಿ ಮಾಡಿದ ನಂತರವೂ ಹಾನಿಯು ಮುಂದುವರೆಯುವ ಸಾಧ್ಯತೆ ಇದೆ. ಒದ್ದೆಯಾದ ಅಂಗೈಯಲ್ಲಿ ಸಸ್ಯಗಳ ಮೇಲೆ ಕೈಯಾಡಿಸಿದರೆ ಹೆಚ್ಚಿನ ಸಂಖ್ಯೆಯ ಹಳದಿ ಬಣ್ಣದ ಅಪ್ಸರೆ (ಮರಿ)ಕೀಟಗಳು ಮತ್ತು ಕಪ್ಪು ಬಣ್ಣದ ಪ್ರೌಢ ಕೀಟಗಳು ಅಂಗೈಗೆ ಅಂಟಿಕೊಳ್ಳುತ್ತವೆ. ತೀಕ್ಷ್ಮವಾದ ಮಳೆಬಿದ್ದಲ್ಲಿ, ಥ್ರಿಪ್ಸ್‍ಗಳ ಸಂಖ್ಯೆ ಕಡಿಮೆಯಾಗುತ್ತದೆ. ಮುಖ್ಯವಾಗಿ ಇದರ ಹಾನಿ ಸಸಿಮಡಿಗೆ ಸೀಮಿತವಾಗಿದ್ದು ಕೆಲವೊಮ್ಮೆ ನಾಟಿಮಾಡಿದ ನಂತರ ಗದ್ದೆಗಳಲ್ಲಿಯು ಕಂಡು ಬರುವ ಸಾಧ್ಯತೆ ಇರುತ್ತದೆ.
ಜೀವನ ಚರಿತ್ರೆ ಮತ್ತು ಕೀಟಗಳ ಗುರುತಿಸುವಿಕೆ: ಹೊಸ ಮೃದು ಎಲೆಗಳ ಅಂಗಾಂಶಗಳಲ್ಲಿ ಪ್ರೌಢಕೀಟಗಳು ಮೊಟ್ಟೆಗಳನ್ನು ಪ್ರತ್ಯೇಕವಾಗಿ ಒಂದೊಂದನ್ನೇ ಚುಚ್ಚಿ ಇಡುತ್ತವೆ. ಮೊಟ್ಟೆಗಳು ಬಿಳಿಯ ಬಣ್ಣದಾಗಿದ್ದು ಅವು ಬೆಳೆದಂತೆ ಕ್ರಮೇಣ ಮಸುಕಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಮೊಟ್ಟೆಯ ಅವಧಿ 3-5 ದಿನಗಳು. ಹೊಸದಾಗಿ ಮೊಟ್ಟೆಯಿಂದ ಬಂದ ಅಪ್ಸರೆ ಹುಳುಗಳು ಪಾರದರ್ಶಕವಾಗಿರುತ್ತವೆ. ಆದರೆ ಮೊದಲ ಮೌಲ್ಟ್ ನಂತರ ಹಳದಿ ಮಿಶ್ರಿತ ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕಪ್ಪಾದ ಕಾಲು, ತಲೆ ಮತ್ತು ಮೀಸೆ(ಅಂಟಿನಾ)ಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಹುಳುಗಳು ಸುರುಳಿಕೊಂಡ ಎಲೆಗಳ ಒಳಗೆ ಕೋಶಾವಸ್ಥೆಗೆ ಹೋಗುತ್ತವೆ. ಪ್ರೌಢ ಹುಳುಗಳು 1 ಮಿ.ಮೀ. ಉದ್ದವಾಗಿದ್ದು ಕಡಿ ಕಪ್ಪು ಬಣ್ಣದ ಉದ್ದವಾದ ರೆಕ್ಕೆಗಳನ್ನು ಹೊಂದಿರುತ್ತವೆ. ಈ ರೆಕ್ಕೆಗಳ ಮೇಲೆ ಕೂದಲು ಇರುವುದರಿಂದ ಪ್ರ್ರಿಂಜಡ್ ವಿಂಗ್ಸ್ ಎಂದು ಕರೆಯುತ್ತಾರೆ ಗಂಡು ಥ್ರಿಪ್ಸ್ ಹೆಣ್ಣಿಗಿಂತ ಚಿಕ್ಕದಾಗಿದ್ದು ಹೆಚ್ಚು ತೆಳ್ಳಗಿರುತ್ತದೆ. ಗಂಡು ಹುಳುಗಳು ವಿರಳವಾಗಿ ಕಂಡುಬರುವುದರಿಂದ ಈ ಕೀಟಗಳು ಪಾರ್ಥೆನೋಜೆನಿಟಿಕ್ (ಅಲೈಂಗಿಕ/ ಮಿಲನ ಹೊಂದದೆ) ಕ್ರಿಯೆಯಿಂದ ವಂಶಾಭಿವೃದ್ಧಿ ಮಾಡುತ್ತದೆ. ಅಂದರೆ ಲೈಂಗಿಕ ಕ್ರಿಯೆಯ ಅಗತ್ಯತೆ ಇರುವುದಿಲ್ಲ. ಒಟ್ಟು ಜೀವನಚಕ್ರ 13-19 ದಿನಗಳು.
ಹತೋಟಿ ಕ್ರಮಗಳು: ನೀರು ಮತ್ತು ಶಿಫಾರಸ್ಸು ಮಾಡಿದಂತೆ ಪೋಷಕಾಂಶಗಳನ್ನು ಸಸಿಮಡಿಯಲ್ಲಿ ಕೊಡುವುದರಿಂದ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಸರಿಯಾಗಿ ನಿರ್ವಹಣೆ ಮಾಡದ ಸಸಿಮಡಿಗಳು ಹಾನಿಗೆ ತುತ್ತಾಗಿ ಬಳಲುತ್ತವೆ. ಹಾನಿ ಹೆಚ್ಚಾದರೆ ಮಾತ್ರ ಪಿಫ್ರೋನಿಲ್ 5 ಎಸ್.ಸಿ. 1.5 ಮಿ.ಲೀ/ಲೀ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲೀ./ಲೀ. ನೀರಿನಲ್ಲಿ ಸಿಂಪಡಿಸಬೇಕು.

ಹಸಿರು ಜಿಗಿಹುಳು: ನೆಪೊಟೆಟಿಕ್ಸ್ ವೈರಸೆನ್ಸ್ (ಓeಠಿhoಣeಣಣix viಡಿesಟeಟಿs), ನೆಪೋಟೆಟಿಕ್ಸ್ ನಿಗ್ರೊಪಿಕ್ಟಸ್ (ಓeಠಿhoಣeಣಣix ಟಿigಡಿoಠಿhiಛಿhus) ಸಿಕಾಡೆಲ್ಲಿಡೆ : ಹೆಮಿಪ್ಟೆರಾ

ಹಾನಿಯ ಲಕ್ಷಣಗಳು: ಅಪ್ಸರೆ ಮತ್ತು ಪ್ರೌಢಹುಳುಗಳು, ಎಲೆಗಳನ್ನು ಚುಚ್ಚಿ, ಕೋಶಗಳಿಂದ ರಸವನ್ನು ಹೀರುತ್ತವೆ. ಜೊತೆಗೆ ಅಪ್ಸರೆ ಮತ್ತು ಪ್ರೌಢ ಹುಳುಗಳು ಜಿಗುಟಾದ ಅಂಟುದ್ರವ (ಊoಟಿeಥಿ ಜeತಿ) ವನ್ನು ಮಲದಂತೆ ಸ್ರವಿಸುತ್ತವೆ. ಇದು ಕಪ್ಪು ಶಿಲೀಂಧ್ರದ (ಸೂಟಿ ಮೋಲ್ಡ್) ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಸಸ್ಯಗಳ ದ್ಯುತಿಸಂಶ್ಲೇಷಣ ಕ್ರಿಯೆಯು ಕಡಿಮೆಯಾಗುತ್ತದೆ. ಈ ಕೀಟಗಳು ನಂಜು ರೋಗಗಳಾದ ಡ್ವಾರ್ಪ್ (ಆತಿಚಿಡಿಣ), ಟ್ರಾನ್ಸಿಟರಿ ಹಳದಿ (ಖಿಡಿಚಿಟಿsiಣoಡಿಥಿ ಥಿeಟಟoತಿiಟಿg), ಟ್ರುಂಗ್ರೋ ವೈರಸ್ (ಖಿuಟಿgಡಿo viಡಿus) ಅನ್ನು ಹರಡುತ್ತವೆ. ಈ ಕೀಟಗಳು ಹಲವು ಹುಲ್ಲುಜಾತಿಯ ಕಳೆಗಳ ಮೇಲೆ ಆಶ್ರಯ ಪಡೆದು ಸಂತಾನೋತ್ಪತ್ತಿ ಮಾಡುತ್ತವೆ.
ಬಾಧಿತ ಸಸ್ಯಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತವೆ. ಸಸ್ಯಗಳನ್ನು ಅಲ್ಲಾಡಿಸಿದರೆ ಹೆಚ್ಚಿನ ಸಂಖ್ಯೆಯ ಜಿಗಿಹುಳುಗಳು ನೀರಿಗೆ ಹಾರುವುದನ್ನು ಕಾಣಬಹುದು. ಕಡಿಮೆ ಸಂಖ್ಯೆಯಲ್ಲಿದ್ದು ಸ್ವಲ್ಪ ಪ್ರಮಾಣದಲ್ಲಿ ಹಾನಿ ಮಾಡಿದರೆ ಸಸ್ಯದ ಬೆಳವಣಿಗೆಯ ಚೈತನ್ಯವನ್ನು ಕಡಿಮೆ ಮಾಡುತ್ತವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು ಸಂತಾನೋತ್ಪತ್ತಿ ಹೊಂದಿ ಹಾನಿ ಮಾಡಿದರೆ ಸಂಪೂರ್ಣ ಒಣಗಲು ಆರಂಭಿಸುತ್ತವೆ.
ಜೀವನ ಚಕ್ರ: ಹಸಿರು ಮಿಶ್ರಿತ ಪಾರದರ್ಶಕ ಮೊಟ್ಟೆಗಳನ್ನು ಎಲೆಯ ಅಂಚಿನಲ್ಲಿ ಇಡುತ್ತವೆ. ಈ ಮೊಟ್ಟೆಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿದಂತೆ 10 ರಿಂದ 15 ಗುಂಪುಗಳಲ್ಲಿ ಇಡುತ್ತವೆ. ಪ್ರತಿ ಹೆಣ್ಣು ಜಿಗಿಹುಳುವು 200-300 ಮೊಟ್ಟೆಗಳನ್ನು ಇಡಬಹುದು. ಮೊಟ್ಟೆಯ ಅವಧಿ 6-7 ದಿನಗಳು. ಅಪ್ಸರೆಗಳು ಮೃದುವಾದ ದೇಹಹೊಂದಿದ್ದು ಬಿಳಿ ಹಳದಿ ಬಣ್ಣದಲ್ಲಿರುತ್ತವೆ. ಕ್ರಮೇಣ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಅಪ್ಸರೆಗಳ 5 ಇನ್ಸಾರ್ಸ್ (iಟಿsಣಚಿಡಿs-ಜರ)ಗಳನ್ನು ಹೊಂದಿದ್ದು, 25 ದಿನಗಳಲ್ಲಿ ಪ್ರೌಢ ಹಂತಕ್ಕೆ ಕಾಲಿಡುತ್ತವೆ. ಪ್ರೌಢ ಹುಳುಗಳು ಹಸಿರು ಬಣ್ಣದಿಂದ ಕೂಡಿದ್ದು ಮುಂದಿನ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆ ಅಥವಾ ಗೆರೆ ಇರುತ್ತದೆ. ಪ್ರೌಢ ಹಂತದಲ್ಲಿ ನೆಪೊಟಿಟಿಕ್ಸ್ ವೈರಸೆನ್ಸ್ ಮತ್ತು ನೆಪೊಟಿಟಿಕ್ಸ್ ನಿಗ್ರೊಪಿಕ್ಸ್‍ಸ್ ಗುರುತಿಸುವ ಬಗೆ ನೆಪೊಟಿಟಿಕ್ಸ್ ನಿಗ್ರೊಪಿಕ್ಟಸ್ ಗಂಡು ಕೀಟದ ರೆಕ್ಕೆಗಳ ಕಪ್ಪು ಕಲೆಗಳನ್ನು ಹೊಂದಿದ್ದು, ಕಪ್ಪು ಕಲೆಯು ರೆಕ್ಕೆಯ ಕೊನೆಯ ಭಾಗದವರೆಗೂ ವಿಸ್ತರಿಸುತ್ತದೆ. ಇವುಗಳ ಪ್ರೋನೋಟಮ್ (ಠಿಡಿoಟಿoಣem) ಮುಂಭಾಗದ ಅಂಚಿನಲ್ಲಿ ಕಪ್ಪು ಚುಕ್ಕೆ ಹೊಂದಿರುತ್ತದೆ ಮತ್ತು ಕಲೆಯ ಅಂಚಿನಲ್ಲಿ ಒಮದು ಕಪ್ಪು ಅಡ್ಡಗೆರೆಯುನ್ನು ಹೊಂದಿರುತ್ತವೆ.
ನೆಪೊಟಿಟಿಕ್ಸ್ ವೈರಸೆನ್ಸ್‍ನಲ್ಲಿ ಗಂಡು ಕೀಟದ ತಲೆಯ ಮೇಲೆ ಅಂಚಿನಲ್ಲಿ ಕಪ್ಪುಗೆರೆ ಇರುವುದಿಲ್ಲ ಮತ್ತು ರೆಕ್ಕೆಗಳ ಮೇಲೆ ಕಪ್ಪು ಗೆರೆಯ ರೆಕ್ಕೆ ಕೊನೆಯ ಭಾಗದವರೆಗೆ ವಿಸ್ತರಿಸುವುದಿಲ್ಲ. ಆದರೆ ಎರಡು ಪ್ರಬೇಧಗಳ ಹೆಣ್ಣು ಕೀಟಗಳು ಕಪ್ಪು ಕಲೆಗಳಿಲ್ಲದೆ ಹಸಿರು ಬಣ್ಣದಿಂದ ಕೂಡಿದ್ದು ಪ್ರಬೇಧಗಳನ್ನು ಗುರುತಿಸುವುದು ಕಷ್ಟಕರ.
ಹಸಿರು ಜಿಗಿಹುಳುವಿನ ಆರ್ಥಿಕ ಹಾನಿಯ ಸಂಖ್ಯೆ: ಪ್ರತಿ ತೆಂಡೆಗೆ 10-20 ಹುಳುಗಳು.
ನಿರ್ವಹಣೆ:
• ಪ್ರತಿ ವರ್ಷ ಹಸಿರು ಜಿಗಿಹುಳುವಿನ ಹಾನಿಗೆ ತುತ್ತಾಗುವ ಪ್ರದೇಶಗಳಲ್ಲಿ ಐ ಆರ್ 50, ವಿಕ್ರಮಾರ್ಯ, ಲಲತ್, ಖೈರಾ, ನಿಧಿ ಮುಂತಾದ ಕೀಟನಿರೋಧಕ ಪ್ರಬೇಧಗಳನ್ನು ಬೆಳೆಯಬಹುದು.
• ಸಸಿಮಡಿಗೆ 2.5 ಕೆ.ಜಿ/ 20 ಸೆಂಟ್ ಪ್ರದೇಶಕ್ಕೆ ಬೇವಿನ ಹಿಂಡಿ ಮೇಲುಗೊಬ್ಬರವಾಗಿ ಹಾಕುವುದರಿಂದ ಕೀಟನಿರೋಧಕ ಶಕ್ತಿ ಹೆಚ್ಚುತ್ತದೆ.
• ಹೆಕ್ಟೆರ್‍ಗೆ ಒಂದರಂತೆ ಬೆಳಕಿನ ಬಲೆಯನ್ನು ಬಳಸಬಹುದು.
• ಬದುಗಳ ಮೇಲೆ ಮತ್ತು ಸುತ್ತ ಮುತ್ತ ಕಳೆಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು.
• ಅಲಸಂದೆ, ಉದ್ದು, ಹೆಸರು ಅಥವಾ ಇನ್ನಿತರ ದ್ವಿದಳ ಧಾನ್ಯಗಳ ಬೆಳೆಗಳ ಜೊತೆ ಬೆಳೆಪರಿವರ್ತನೆ ಮಾಡುವುದು ಸೂಕ್ತ.
• ಸ್ವಾಭಾವಿಕ ಶತ್ರುಗಳಾದ ಜೇಡಹುಳು, ಮಳೆಚಿಟ್ಟೆ, ಮಿರಿಡ್‍ಬಗ್ಸ್ ಮುಂತಾದವುಗಳ ಸಂಖ್ಯೆಯು ಗದ್ದೆಗಳಲ್ಲಿ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಕೀಟನಾಶಕಗಳನ್ನು ಮಿತಿಮೀರಿ ಉಪಯೋಗಿಸುವುದು ಅನವಶ್ಯಕ.
• ಅವಶ್ಯವಿದ್ದಲ್ಲಿ ಅಂತರ್‍ವ್ಯಾಪಿ ಕೀಟನಾಶಕಗಳಾದ ಅಸಿಫೇಟ್ 1.5 ಗ್ರಾಂ./ಲೀ. ಅಥವಾ ಸಂಪರ್ಕ ಮತ್ತು ಅಂತರ್‍ವ್ಯಾಪಿ ಕೀಟನಾಶಕ ಗುಣಗಳಾಗಿರುವ ಕ್ಲೋರ್‍ಫೈರಿಫಾಸ್ 2 ಮಿ.ಲೀ./ಲೀ. ಅಥವಾ ಪಿಪ್ರೋನಿಲ್ 1.5 ಮಿ.ಲೀ./ಲೀ. ಸಿಂಪರಣೆಗೆ ಬಳಸಬಹುದು.ಕಂದು ಜಿಗಿಹುಳುಗಳು, ನೀಲಪರ್ವತ ಲುಜೆನ್ಸ್ (ಓiಟಚಿಠಿಚಿಡಿvಚಿಣಚಿ ಟugeಟಿs) (ಡೆಲ್ಫಾಸಿಡೆ: ಹೆಮಿಪ್ಟೆರಾ)
ಈ ಕೀಟವು ಕೆಲವೊಮ್ಮೆ ಬಹಳಷ್ಟು ಪ್ರದೇಶದಲ್ಲಿ ಕಾಣಿಸಿಕೊಂಡು ಭತ್ತಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡುತ್ತವೆ.
ಹಾನಿಯ ಲಕ್ಷಣಗಳು: ಈ ಕೀಟಗಳು ಸಸ್ಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿಯೂ ಭತ್ತದ ಬೆಳೆಗೆ ಹಾನಿ ಮಾಡುತ್ತವೆ. ಅಪ್ಸರೆ ಮತ್ತು ಪ್ರೌಢ ಜಿಗಿಹುಳುಗಳು ಕಾಂಡ ಭಾಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಸೇರಿ ರಸವನ್ನು ಹೀರುತ್ತವೆ. ಇದರಿಂದ ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗಿ ಬೇಗನೆ ಒಣಗಲಾರಂಭಿಸುತ್ತವೆ. ಸಸ್ಯಗಳ ಒಣಗುವಿಕೆ ವೃತ್ತಾಕಾರವಾಗಿ ಹರಡುತ್ತ ಹೋಗುತ್ತದೆ. ಇದನ್ನು ಸರ್ಕುಲಾರ್ ಹಾಪರ್‍ಬರ್ನ್ (ಛಿiಡಿಛಿuಟಚಿಡಿ hoಠಿಠಿeಡಿ buಡಿಟಿ) ಎಂದು ಕರೆಯುತ್ತಾರೆ. ಹಾಪರ್ ಬರ್ನ್‍ಗೆ ಒಳಗಾದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಸಸ್ಯಗಳ ಎತ್ತರ ಕುಸಿತಗೊಂಡು ಗದ್ದೆಗಳಲ್ಲಿ ಗಿಡಗಳು ತೊಟ್ಟಿಲಿನ ತರ ಕುಸಿಯುತ್ತವೆ. ಇದನ್ನು ಆಡು ಭಾಷೆಯಲ್ಲಿ ತೊಟ್ಟಿಲುರೋಗ ಎಂದು ಕರೆಯುವುದುಂಟು. ಹಾನಿಗೊಳಗಾದ ಗಿಡಗಳ ಮೇಲೆ ಕಪ್ಪು ಶಿಲೀಂಧ್ರ (sooಣಥಿ mouಟಜ) ಬೆಳೆಯುತ್ತದೆ. ಸಸ್ಯಗಳ ಬುಡದಲ್ಲಿ ಅಂಟಿಕೊಂಡ ಎಕ್ಸುವಿಯಾ (ಕೀಟಗಳ ಹೊರಚರ್ಮ) ಕಾಣುತ್ತವೆ ಮತ್ತು ಬಾಧಿತ ಕಾಂಡಗಳು ಮೃದುವಾಗುತ್ತದೆ. ಒಣಹುಲ್ಲನ್ನು ಜಾನುವಾರುಗಳಿಗೆ ಬಳಸುವುದಕ್ಕೆ ಯೋಗ್ಯವಾಗಿರುವುದಿಲ್ಲ.
ಕಂದುಜಿಗಿಹುಳುಗಳು ಗ್ರಾಸಿಸ್ಟಂಟ್ (ಉಡಿಚಿssಥಿ sಣuಟಿಣ), ರ್ಯಾಗಡ್ ಸ್ಟಂಟ್ (ಖಚಿggeಜ sಣuಟಿಣ) ಮತ್ತು ವಿಲ್ಟೆಡ್ ಸ್ಟಂಟ್ ಎಂಬ ನಂಜಾಣುಗಳ ವಾಹಕಗಳಾಗಿ ಕೆಲಸ ಮಾಡುತ್ತವೆ. ಕಂದುಜಿಗಿಹುಳುಗಳ ಹಾನಿಯಿಂದ ಶೇ. 10-70 ರಷ್ಟು ಹಾನಿಯಾಗಿರುವ ವರದಿಗಳಿವೆ.


ಜೀವನ ಚಕ್ರ: ಈ ಕೀಟಗಳಲ್ಲಿ ಉದ್ದನೆಯ ರೆಕ್ಕೆ ಮತ್ತು ಸಣ್ಣ ರೆಕ್ಕೆಗಳುಳ್ಳ ರೂಪದ ಹುಳುಗಳನ್ನು ಕಾಣಬಹುದು. ಹೊಸಗದ್ದೆಗಳನ್ನು ವಲಸೆ ಹೋಗಿ ಹಾನಿ ಮಾಡಲು ಉದ್ದನೆಯ ರೆಕ್ಕೆಗಳ ಕೀಟಗಳು ಕಾರಣವಾಗುತ್ತದೆ. ನಂತರ ಗದ್ದೆಗಳಲ್ಲಿ ಸಾಮಾನ್ಯವಾಗಿ ಅಪ್ಸರೆ ಕೀಟಗಳು ಮತ್ತು ಸಣ್ಣ ರೆಕ್ಕೆ ಕೀಟಗಳನ್ನು ನಾವು ಕಾಣಬಹುದು. ಹೆಣ್ಣು ಜಿಗಿಹುಳುಗಳು ಎಲೆಗಳ ನಡುದಿಂಡಿನ ಎರಡೂ ಬದಿಯಲ್ಲಿ ಎರಡು ಸಾಲುಗಳಲ್ಲಿ ಮೊಟ್ಟೆಗಳನ್ನು ಚುಚ್ಚಿ ಅಂಗಾಂಶದೊಳಗೆ ಇಡುತ್ತವೆ (usiಟಿg oviಠಿosiಣoಡಿ).
ಒಂದು ಹೆಣ್ಣು ಹುಳುವು 250-350 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯ ಅವಧಿ 6-9 ದಿನಗಳು ಮತ್ತು ಅಪ್ಸರೆ ಅವಧಿ 10-18 ದಿನಗಳು. ಪ್ರೌಢಹುಳುಗಳು 10-18 ದಿನ ಬದುಕುತ್ತವೆ. ಒಟ್ಟು ಜೀವನ ಚಕ್ರವು 16-27 ದಿನಗಳನ್ನು ತೆಗೆದುಕೊಳ್ಳುತ್ತದೆ. ಬೇರೆ ಬೇರೆ ಕಡೆ ಇರುವ ಭತ್ತದ ಕಂದು ಜಿಗಿಹುಳುವಿನಲ್ಲಿ ವೈವಿಧ್ಯತೆ ಇದ್ದು 4 ಬಯೋಟೈಪ್ (ಃioಣಥಿಠಿe)ಗಳನ್ನು ಗುರುತಿಸಿದ್ದಾರೆ. ಬಯೋಟೈಪ್ ಒಂದು ಮತ್ತು ಎರಡು, ಆಗ್ನೇಯ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಗುರುತಿಸಿದ್ದಾರೆ. ಬಯೋಟೈಪ್ ಮೂರನ್ನು ಪ್ರತಿರೋಧಕ ತಳಿ ಎಎಸ್‍ಡಿ 7ರಲ್ಲಿ ಕಂದು ಜಿಗಿಹುಳುಗಳನ್ನು ಪ್ರಯೋಗಶಾಲೆಯಲ್ಲಿ ಸಾಕಿ ಅಭಿವೃದ್ಧಿ ಪಡಿಸಿದ್ದಾರೆ. ಇದು ತಳಿ ಪ್ರತಿರೋಧಕವಾಗಿ ಬಿ.ಪಿ.ಎಚ್. 2 ವಂಶವಾಹಿನಿ (ಜೀನ್-geಟಿe) ಹೊಂದಿದೆ. ಭಾರತದ ಉಪಖಂಡದಲ್ಲಿ ಬಯೋಟೈಪ್ 4ನ್ನು ಗುರುತಿಸಿದ್ದು ಹೆಚ್ಚು ಹಾನಿ ಮಾಡುವ ಶಕ್ತಿಯನ್ನು ಹೊಂದಿದೆ. ಇದನ್ನು ದಕ್ಷಿಣ ಏಷ್ಯಾದ ಬಯೋಟೈಪ್ ಎಂದು ಕರೆಯುತ್ತಾರೆ.
ಕಂದುಜಿಗಿಹುಳುಗಳ ಸಂಖ್ಯೆ ಮತ್ತು ಹಾನಿ ಹೆಚ್ಚಾಗಲು ಕಾರಣಗಳು:
ಈ ಕೆಳಗಿನ ಕಾರಣಗಳಿಂದಾಗಿ ಕೀಟವು ತೀವ್ರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
• ಸಾರಜನಕ ಗೊಬ್ಬರಗಳ ಬಾರೀ ಪ್ರಮಾಣದ ಬಳಕೆ (ಶಿಫಾರಸ್ಸು ಮಾಡಿದ್ದಕ್ಕಿಂತ ಜಾಸ್ತಿ)
• ನಿರಂತರವಾಗಿ ನೀರನ್ನು ನಿಲ್ಲಿಸುವಿಕೆ
• ಪೈರಥ್ರಾಯಿಡ್ ಕೀಟನಾಶಕಗಳ ಅತಿಯಾದ ಬಳಕೆ
• ಎರಡು ಅಥವಾ ಮೂರು ಋತುಗಳಲ್ಲಿಯೂ ಭತ್ತವನ್ನು ಬೆಳೆಯುವುದು
• ನಾಟಿಯನ್ನು ಒತ್ತಾಗಿ ಮಾಡುವುದು ಇದರಿಂದ ಕಾಂಡದ ಮೇಲೆ ಬೆಳಕು ಬೀಳುವುದನ್ನು ತಡೆಯುವುದು
• ಕೀಟ ನಿರೋಧಕ ಇಲ್ಲದ ತಳಿಗಳ ಬಳಕೆ
• ತಗ್ಗುಪ್ರದೇಶದಲ್ಲಿ ಹುಳುಗಳ ತೀವ್ರತೆ ಹೆಚ್ಚು
• ಕಂದುಜಿಗಿಹುಳುಗಳು ಆರ್ಥಿಕ ಹಾನಿಯ ಸಂಖ್ಯೆ: ಪ್ರತಿ ತೆಂಡೆಗೆ 5-10 ಹುಳುಗಳು

ಕಂದು ಜಿಗಿಹುಳುಗಳ ಸಮಗ್ರ ನಿರ್ವಹಣೆ:
• ಪ್ರತಿವರ್ಷ ಹಾನಿಗೀಡಾಗುವ ಪ್ರದೇಶದಲ್ಲಿ ಕೀಟನಿರೋಧಕ ಸಾಕಷ್ಟು ತಳಿಗಳಾದ ಅರುಣಾ, ಭದ್ರಾ, ಜ್ಯೋತಿ, ನೀಲಾ, ಪ್ರತಿಭಾ, ಐಆರ್ 72 ಬೆಳೆಯುವುದು.
• ತಳಿಗನುಸಾರ ಮತ್ತು ಒಂದು ಪ್ರದೇಶದಲ್ಲಿ ಶಿಫಾರಸ್ಸು ಮಾಡಿದ ಹಾಗೆ ಒತ್ತಾಗೆ ನಾಟಿ ಮಾಡುವುದನ್ನು ತಪ್ಪಿಸುವುದು.
• ಪ್ರತಿ 3-4 ಮೀಟರ್ ಅಂತರದಲ್ಲಿ ಅಥವಾ ಪ್ರತಿ 8 ಸಾಲುಗಳ ನಂತರ ಒಂದು ಸಾಲು ನಾಟಿ ಮಾಡದಿರುವುದರಿಂದ ಗಾಳಿ ಮತ್ತು ಬೆಳಕು ಗಿಡಗಳ ಮೇಲೆ ಬೀಳುವುದರಿಂದ ಜಿಗಿಹುಳುಗಳ ವೃದ್ಧಿಗೆ ಅಡಚಣೆಯಾಗುತ್ತದೆ. ಈ ಕ್ರಮ ಗದ್ದೆಯ ಒಳಗೆ ಆದ್ರ್ರತೆ ಮತ್ತು ಶಾಖ ಹೆಚ್ಚಾಗುವುದನ್ನು ತಪ್ಪಿಸುತ್ತದೆ. ಈ ತಂತ್ರಜ್ಞಾನ ಇತರ ಕೀಟ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ.
• ಅತಿಯಾದ ಸಾರಜನಕ ಗೊಬ್ಬರಗಳ ಬಳಕೆಯನ್ನು ಮಾಡದಿರುವುದು
• ಹೆಚ್ಚು ಹಾನಿಯಾದ ಸಂದರ್ಭದಲ್ಲಿ 3-4 ದಿನಗಳವರೆಗೆ ಗದ್ದೆಗಳಲ್ಲಿ ನೀರನ್ನು ಬರಿದಾಗಿಸಿ ಒಣಗಿಸಬೇಕು.
• ಪ್ರತಿ ಹೆಕ್ಟೇರ್‍ಗೆ 4ರಂತೆ ಹಳದಿ ಅಂಟು ಬಲೆಗಳನ್ನು ನೇತು ಹಾಕಬಹುದು.
• ಪ್ರತಿ ಹೆಕ್ಟೇರ್‍ಗೆ ಒಂದರಂತೆ ಬೆಳಕಿನ ಬಲೆಗಳನ್ನು ಬಳಸಬಹುದು.
• ರೈತರ ಮಿತ್ರಗಳಾದ ಗುಲಗಂಜಿಹುಳು, ಮಿರೀಡ್ ತಿಗಣೆ, ಜೀರುಂಡೆಗಳು (ಉಡಿoಛಿeಟಿಜ beeಣಟes ಚಿಟಿಜ ಣigeಡಿ beeಣಟes) ಮತ್ತು ಅನೇಕ ಬಗೆಯ ಜೇಡಗಳನು ಸಂರಕ್ಷಿಸಬೇಕು. ವಿವೇಚನಾರಹಿತ ಪೀಡೆನಾಶಕಗಳನ್ನು ಬಳಸದಿದ್ದರೆ ಈ ಸ್ವಾಭಾವಿಕ ಶತ್ರುಗಳು ತಾವಾಗಿಯೇ ವೃದ್ಧಿಯಾಗಿ ಪೀಡೆಗಳ ಹತೋಟಿಯಲ್ಲಿಡುತ್ತವೆ.
• ಸಿಂಥೆಟಿಕ್ ಪೈರಥ್ರಾಯಿಡ್ಸ್, ಮಿಥೈಲ್ ಪ್ಯಾರಾಥಿಯಾನ್, ಕ್ವಿನಾಲ್‍ಫಾಸ್ ಕೀಟನಾಶಕಗಳು ಈ ಸ್ವಾಭಾವಿಕ ಶತ್ರುಗಳನ್ನು ಸಾಯಿಸುವುದರಿಂದ ಅಂತಹ ಕೀಟನಾಶಕಗಳನ್ನು ಬಳಸದೇ ಇರುವುದೇ ಉತ್ತಮ.
• ಕೀಟನಾಶಕಗಳು ಅವಶ್ಯವಿದ್ದಲ್ಲಿ ಬ್ರುಫ್ರೊಪೆಜಿನ್ 25 ಎಸ್.ಸಿ.ಎ.2 ಮಿ.ಲೀ./ಲೀ ಅಥವಾ ಥಯೋಮಿಥೊಕ್ಷಮ್ 25 ಮಿ. ಗ್ರಾಂ. ಎ ಗೆ 0.4 ಗ್ರಾಂ/ಲೀ. ಅಥವಾ ಪೈಮೆಟ್ರೊಜಿನ್ 50 ಡಬ್ಲ್ಯೂಜಿ 1.5 ಗ್ರಾಂ ಪ್ರತಿ ಲೀಟರ್‍ಗೆ (150 ಗ್ರಾಂ ಎಐ/ಹೆ) ಅಥವಾ ಪಿಫ್ರೋನಿಲ್ 0.3 ಜಿ ಎ 75 ಗ್ರಾಂ ಎ.ಐ (25 ಕೆ.ಜಿ. ಪ್ರತಿ ಹೆಕ್ಟೇರ್‍ಗೆ) ಹರಳಿನ ರೂಪದ ಕೀಟನಾಶಕಗಳನ್ನು ಬಳಸಬಹುದು. ಬುಫ್ರೋಪೆಜಿನ್ ಅಂತಹ ಕೀಟನಾಶಕಗಳು ಬೆಳವಣಿಗೆ ಹಂತದಲ್ಲಿ (ಅಪ್ಸರೆ) ಕೀಟಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಂತಹ ಕೀಟನಾಶಕಗಳನ್ನು ಗ್ರೋತ್ ರೆಗ್ಯುಲೇಟರ್ಸ್ ಎಂದು ಕರೆಯುತ್ತಾರೆ.

ಭತ್ತದ ಗಂಧಿ ತಿಗಣೆ: ಲೆಪ್ಪೊಕೋರಿಸಾ ಅಕ್ಯುಟಾ (ಐeಠಿಣoಛಿoಡಿisಚಿ oಛಿuಣಚಿ), ಲೆಪ್ಪೊಕೋರಿಸಾ ಓರಟೋರಿಯಾ (ಐeಠಿಣoಛಿoಡಿisಚಿ oಡಿಚಿಣoಡಿiಚಿ) ಅಲೈಡಿಡೆ, ಹೆಮಿಪ್ಟೆರಾ.


ಹಾನಿಯ ಲಕ್ಷಣಗಳು:
ಪ್ರೌಢ ತಿಗಣೆಗಳು ಮತ್ತು ಮರಿ ಕೀಟಗಳೆರಡು ಹಾನಿ ಮಾಡುತ್ತವೆ. ಮೊಟ್ಟೆಯೊಡೆದು ಹೊರಬಂದ 3 ರಿಂದ 4 ಗಂಟೆಗಳವರೆಗೆ ಅಪ್ಸರೆಗಳು ಎಲೆಗಳಿಂದ ರಸ ಹೀರಲು ಪ್ರಾರಂಭಿಸುತ್ತವೆ. ನಂತರ ಹಾನಿಗೊಳಗಾದ ಕಾಳುಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಾಣಿಸಿಕೊಳ್ಳುತ್ತದೆ. ಹಾಲಿನ ಹೀರುವಿಕೆಯಿಂದ ಕಾಳುಗಳು ಜಳ್ಳಾಗುತ್ತವೆ. ಬಹಳ ಸಂಖ್ಯೆಯಲ್ಲಿ ಹಾನಿಮಾಡಿ ಶೇ.50 ರಷ್ಟು ಇಳುವರಿ ಕಡಿತವಾಗಿರುವ ನಿದರ್ಶನಗಳಿವೆ. ಈ ಕೀಟಗಳು ತಮ್ಮ ಹೊಟ್ಟೆಯಿಂದ ಕೆಟ್ಟವಾಸನೆ ಬರುವ ರಾಸಾಯನಿಕವನ್ನು ಸ್ರವಿಸುತ್ತವೆ. ಗದ್ದೆಗಳಲ್ಲಿ ಇವುಗಳು ಇರುವಿಕೆಯನ್ನು ಅವು ಹೊರಸೂಸುವ ವಾಸನೆಯಿಂದ ಅರಿತುಕೊಳ್ಳಬಹುದು. ಒಣಹುಲ್ಲು ಸಹ ಕೆಟ್ಟ ವಾಸನೆ ಬರುವುದರಿಂದ ಜಾನುವಾರುಗಳಿಗೆ ಯೋಗ್ಯವಾಗಿರುವುದಿಲ್ಲ.
ಆರ್ಥಿಕ ಹಾನಿಯ ಸಂಖ್ಯೆ: 5 ಕೀಟಗಳು/ 100 ತೆನೆಗಳು – ಹೂಬಿಡುವ ಹಂತ
16 ಕೀಟಗಳು/ 100 ತೆನೆಗಳು – ಹಾಲ್ಗಾಳು ಹಂತ
ಜೀವನ ಚರಿತ್ರೆ: ಮೊಟ್ಟೆಗಳು ವೃತ್ತಾಕಾರದ ಕಂದುಬಣ್ಣದ ಬೀಜದಂತೆ 2 ಮಿ.ಮೀ. ಉದ್ದವಾಗಿದ್ದು ಗರಿಗಳ ಅಂಚಿನ ಮೇಲೆ ಮತ್ತು ನಡು ದಿಂಡಿನ ಮೇಲೆ ಉದ್ದಕ್ಕೂ ಎರಡು ಸಾಲುಗಳಲ್ಲಿ (10-25) ಜೋಡಿಸಿದಂತೆ ಇಡುತ್ತದೆ. ಪ್ರತಿ ಹೆಣ್ಣು ತಿಗಣೆಗಳು 200-300 ಮೊಟ್ಟೆಗಳನ್ನು ಇಡುತ್ತವೆ. ಅಪ್ಸರೆ ಕೀಟಗಳ ಮೊದಲ ಹಂತ ಚಿಕ್ಕದಾಗಿದ್ದು 2 ಮಿ.ಮೀ. ಉದ್ದ ಮಸುಕಾದ ಹಸಿರು ಬಣ್ಣದಲ್ಲಿರುತ್ತದೆ ಮತ್ತು ಹಂತ ಹಂತವಾಗಿ ಹಸಿರು ಬಣ್ಣವನ್ನು ಹೆಚ್ಚಿಸುತ್ತದೆ. ಪ್ರೌಢಹುಳುಗಳು ಹಸಿರು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು ತೆಳ್ಳಗೆ ಉದ್ದವಾಗಿರುತ್ತದೆ.
ನಿರ್ವಹಣಾ ಕ್ರಮಗಳು:
• ಮೊಟ್ಟೆಯ ಗುಂಪುಗಳು, ಅಪ್ಸರೆ ಮತ್ತು ಪ್ರೌಢ ಹುಳುಗಳನ್ನು ಕೈಯಿಂದ ಹಿಡಿದು ಅಥವಾ ಕೀಟ ಬಲೆಗಳನ್ನು (sತಿeeಠಿಟಿeಣ) ಬಳಸಿ ಹಿಡಿದು ನಾಶಪಡಿಸಬಹುದು.
• ಭತ್ತದ ಗದ್ದೆಗಳ ಬದುಗಳ ಮೇಲೆ ಮತ್ತು ಸುತ್ತ ಮುತ್ತ ಇತರ ಕಳೆಗಳನ್ನು ನಾಶಪಡಿಸಬಹುದು.
• ಮೆಲಾಥಿಯಾನ್ 5 ಡಿ ಎ 25 ಕೆ.ಜಿ. (ಹೆಕ್ಟೇರ್ ಗದ್ದೆಗಳ ಅಂಚುಗಳ ಮಧ್ಯಕ್ಕೆ ಪ್ರಾರಂಭಿಸಿ ವೃತ್ತಾಕಾರವಾಗಿ ಧೂಳೀಕರಿಸಿ, ತೀವ್ರವಾದ ಹಾನಿಯಿದ್ದರೆ ಕೀಟನಾಶಕವನ್ನು ಹತ್ತು ದಿನಗಳ ನಂತರ ಪುನರಾವರ್ತಿಸಿ.
ಈ ಮೇಲೆ ತಿಳಿಸಿದ ಕೀಟಗಳು ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಕಂಡುಬರುವ ಮುಖ್ಯ ಕೀಟಗಳು. ಇವುಗಳ ಜೊತೆಗೆ ಅಲ್ಲಲ್ಲಿ ಈ ಕೆಳಗೆ ತಿಳಿಸಿದ ಕೀಟಗಳು ಸಣ್ಣ ಪ್ರಮಾಣದಲ್ಲಿ ಹಾನಿ ಮಾಡಬಹುದು. ಇವುಗಳ ಹೆಸರನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ಬಿಳಿಬೆನ್ನಿನ ಜಿಗಿಹುಳು, ಸೊಗಾಟೆಲ್ಲಾ ಫರ್ಸಿಪೆರಾ (sogಚಿಣeಟಟಚಿ ಜಿuಡಿಛಿiಜಿeಡಿಚಿ), ಡೆಲ್ಸಾಸಿಡೆ, ಹೆಮಿಪ್ಟೆರಾ

ತೆನೆಸ್ಟಿಂಕ್ ಬಗ್/ ಕೆಂಪುಮಚ್ಚೆಯ ಹುಳು, ಮೆನಿಡಾ ಹಿಸ್ಟ್ರಿಯೋ, ಪೆಂಟಲೋಮಿಡೆ, ಹೆಮಿಪೈರಾ

ಬಿಳಿ ಜಿಗಿಹುಳು, ಕೋಫಾನಾ ಸ್ಟ್ರೆಕ್ಟ್ರಾ, ಸಿಕಾಡೆಲ್ಲಿಡೆ, ಹೆಮಿಪ್ಟೆರಾ

ಭತ್ತದ ಬಿಳಿ ಉಣ್ಣೆ: ಬೈವಿನಿಯೊರೆಹಿ, ಸೂಡೊಕಾಕ್ಸಿಡೆ, ಹೆಮಿಪ್ಟೆರಾ

II ಕಾಂಡಕೊರೆಯುವ ಹುಳುಗಳು:ಭತ್ತದ ಹಸಿರು ಕಾಂಡಕೊರೆಯುವ ಹುಳು, ಸಿರ್ಪೊಪ್ಯಾಗಾ ಇನ್ಸರ್ಟುಲಸ್ (Sಛಿiಡಿಠಿoಠಿhಚಿಠಿಚಿ iಟಿಛಿeಡಿಣuಟes), ಕ್ರಾಂಬಿಡೆ, ಲೆಪಿಡಾಪ್ಟೆರಾ:

ಹಾನಿಯ ಲಕ್ಷಣಗಳು: ಇದು ಭತ್ತವನ್ನು ಬಿಟ್ಟು ಬೇರೆ ಬೆಳೆಗಳಿಗೆ ಹಾನಿ ಮಾಡುವುದಿಲ್ಲ. ಮರಿಹುಳುಗಳು ಸಸಿಮಡಿಯಿಂದಲೇ ಹಾನಿ ಮಾಡಲು ಆರಂಭಿಸಬಹುದು. ಮಳೆಗಾಲದ ಬೆಳೆಯಲ್ಲಿ (ಜೂನ್‍ನಿಂದ ಸೆಪ್ಟೆಂಬರ್) ಇದರ ಹಾನಿಯು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಆದರೆ ಅಕ್ಟೋಬರ್‍ನಿಂದ ಜನವರಿ ಮತ್ತು ಫೆಬ್ರವರಿ (ಬೇಸಿಗೆ ಬೆಳೆ)ಯಲ್ಲಿ ತೀವ್ರಗೊಳ್ಳುತ್ತದೆ. ಮರಿಹುಳುಗಳು ಕಾಂಡವನ್ನೂ ಕೊರೆದು ಪ್ರವೇಶಿಸಿ ಒಳಗಿನ ಅಂಗಾಂಶವನ್ನು ತಿನ್ನುತ್ತವೆ. ತಿಂಡ ಕಾಂಡ ಭಾಗವು ಒಣಗಿ ಹಾನಿಯೊಳಗಾದ ಸುಳಿ ಸಾಯುತ್ತದೆ. ಇದನ್ನು ಡೆಡ್‍ಹಾರ್ಟ್ ಎಂದು ಕರೆಯುತ್ತಾರೆ. ತೆಂಡೆಗಳು ವಿವಿಧ ಹಂತಗಳಲ್ಲಿ ಹಾನಿಗೊಳಗಾಗಬಹುದು. ತೆನೆ ಹೊರಡುವ ಸಮಯದಲ್ಲಿ ಹಾನಿಗೊಳಗಾದರೆ, ತೆಂಡೆಗಳ ತೆನೆಗಳು ಜಳ್ಳಾಗುತ್ತವೆ ಮತ್ತು ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಇದನ್ನು ಬಿಳಿ ತೆನೆ ಎಂದು ಕರೆಯುತ್ತಾರೆ.
ದಾಳಿಯ ಲಕ್ಷಣಗಳು: ಗದ್ದೆಗಳಲ್ಲಿ ನೀರಿನ ಮೇಲೆ ಹಲವಾರು ಪತಂಗಗಳು ತೇಲುವುದು. ತೆಂಡೆಯ ಹಂತದಲ್ಲಿ ಸುಳಿಸಾಯುವುದು (ಡೆಡ್‍ಹಾರ್ಟ್) ಮತ್ತು ತೆನೆಯ ಹಂತದಲ್ಲಿ ಬಿಳಿತೆನೆಗಳನ್ನು (ವೈಟ್ ಇಯರ್ಸ್) ಕಾಣಬಹುದು. ಎಳೆದಾಗ ಡೆಡ್‍ಹಾರ್ಟ್ ಮತ್ತು ಬಿಳಿ ತೆನೆಗಳು ಸುಲಭವಾಗಿ ಹೊರಬರುತ್ತವೆ.
ಜೀವನಚರಿತ್ರೆ: ಮೊಟ್ಟೆಗಳು ಬಿಳಿಯಾಗಿದ್ದು ದುಂಡಾಕಾರವಾಗಿದ್ದು ಗುಂಪಿನಲ್ಲಿಡತ್ತವೆ. ಸಾಮಾನ್ಯವಾಗಿ ಹೆಣ್ಣು ಪತಂಗವು ಮೊಟ್ಟೆಗಳನ್ನು ಎಲೆಗಳ ತುದಿಯಲ್ಲಿ ಇಡುತ್ತವೆ. ಪ್ರತಿ ಮೊಟ್ಟೆಯ ಗುಂಪು 15-80 ಮೊಟ್ಟೆಗಳನ್ನು ಹೊಂದಿರುತ್ತದೆ ಮತ್ತು ಬೂದಿಬಣ್ಣದ ಕೂದಲಿನಿಂದ ಮುಚ್ಚಲಾಗುತ್ತದೆ. ಮೊಟ್ಟೆ ಹೊಡೆಯುವ ಮುನ್ನ ಕಪ್ಪುಬಣ್ಣಕ್ಕೆ ತಿರುಗಿ ಮರಿಹುಳುಗಳು ಹೊರಬರುತ್ತವೆ.
ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಎಲೆಗಳ ಕೆಳಕ್ಕೆ ಚಲಿಸುತ್ತವೆ. 1-2 ಗಂಟೆಗಳ ಕಾಲ ಗಿಡದಿಂದ ಗಿಡಕ್ಕೆ ಅಲಡದಾಡುತ್ತವೆ. ಕೆಲಮೊಮ್ಮೆ ಬಾಯಿಂದ ಹೊರಸೂಸುವ ರೇಷ್ಮೆಯಂತೆಯ ತಿಳಿ ಎಳೆಯ ದಾರದಿಂದ ಕೆಳಗೆ ನೇತಾಡುತ್ತ ಗಾಳಿಯ ಸಹಾಯದಿಂದ ಇತರ ಪಕ್ಕದ ಸಸ್ಯಗಳಿಗೆ ಹೋಗುತ್ತವೆ. ಕೆಲವೊಮ್ಮೆ ನೀರಿನ ಜೊತೆಗೆ ತೇಲುತ್ತ ಇತರ ಗಿಡಗಳನ್ನು ತಲುಪಬಹುದು. ಅವು ಎಲೆಕವಚ ಪ್ರವೇಶಿಸಿ ಕಾಂಡದ ಹಸಿರು ಅಂಗಾಂಶಗಳನ್ನು 2-3 ದಿನಗಳವರೆಗೆ ತಿನ್ನುತ್ತವೆ. ನಂತರ ಹುಳುಗಳು ಗಿಣ್ಣಿನ ಬಿಳಿ ಕಾಂಡವನ್ನು ಕೊರೆಯಲಾರಂಭಿಸುತ್ತವೆ. ಪೂರ್ಣ ಬೆಳೆದ ಮರಿಹುಳುವು ಸುಮಾರು 20 ಮಿ.ಮೀ (2 ಸೆಂ.ಮೀ) ಇದ್ದು ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿಬಣ್ಣವನ್ನು ಹೊಂದಿರುತ್ತವೆ. ಆ ಮರಿಹುಳುವಿನ ಅವಧಿಯು 6 ಇನ್‍ಸ್ಟಾರ್‍ಗಳೊಂದಿಗೆ 33-41 ದಿನಗಳು.
ಕೋಶಾವಸ್ಥೆ: ಬಿಳಿಯಾದ ರೇಷ್ಮೆ ಎಳೆಯೊಳಗೆ ಗೂಡುಮಾಡಿಕೊಂಡು ಬೆಳೆದ ಮರಿಹುಳುಗಳು ಹಾನಿಗೊಳಗಾದ ತೆಂಡೆಯೊಳಗೆ ಕೋಶಾವಸ್ಥೆಗೆ ಹೋಗುತ್ತವೆ. ಕೋಶದಿಂದ ಪತಂಗವು 6 ರಿಂದ 10 ದಿನಗಳಲ್ಲಿ ಅಥವಾ ಕೆಲವೊಮ್ಮೆ ಸುಮಾರು ಒಂದು ತಿಂಗಳಲ್ಲಿ ಹೊರಹೊಮ್ಮುತ್ತವೆ. (ಕಡಿಮೆ ಉಷ್ಣತೆಯಲ್ಲಿ ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತವೆ).
ಪ್ರೌಢಹುಳುಗಳು: ಇವು ಗಮನಾರ್ಹವಾದ ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತವೆ. ಹೆಣ್ಣು ಪತಂಗವು ಪ್ರಕಾಶಮಾನವಾದ ಹಳದಿ ಮಿಶ್ರಿತ ಕಂದು ಬಣ್ಣದಾಗಿದ್ದು, ರೆಕ್ಕೆಗಳ ಮಧ್ಯಭಾಗದಲ್ಲಿ ಕಪ್ಪು ಚುಕ್ಕೆ ಮತ್ತು ಗುದದ ಸುತ್ತ ಹಳದಿ ಕೂದಲಿನ ಗುಂಪು ಇರುತ್ತವೆ. ಗಂಡು ಪತಂಗವು ಗಾತ್ರದಲ್ಲಿ ಹೆಣ್ಣಿಗಿಂತ ಸಣ್ಣಗಿರುತ್ತದೆ. ಮುಂದಿನ ರೆಕ್ಕೆಗಳ ಮಧ್ಯಭಾಗದಲ್ಲಿ ಕಪ್ಪು ಚುಕ್ಕೆ ಇರುವುದಿಲ್ಲ. ಪತಂಗಗಳು ಬೆಳಕಕಿಗೆ ಆಕರ್ಷಿತವಾಗುತ್ತವೆ. ದಕ್ಷಿಣಭಾರತದಲ್ಲಿ ವರ್ಷದಲ್ಲಿ 3-5 ವಂಶಾಭಿವೃದ್ಧಿಗಳನ್ನು ಪೂರೈಸುತ್ತವೆ.
ಕಾಂಡ ಕೊರೆಯುವ ಹುಳುವಿನ ಸಮಗ್ರ ಕೀಟ ನಿರ್ವಹಣೆ:
ಸಾಗುವಳಿ ಪದ್ಧತಿಗಳು:
• ಪ್ರತಿ ವರ್ಷವೂ ಹೆಚ್ಚು ಹಾನಿಯಾಗುವ ಪ್ರದೇಶಗಳಲ್ಲಿ ಕೀಟ ಸಹಿಷ್ಣು ತಳಿಗಳಾದ ರತ್ನ, ಜಯ, ಟಿ.ಕೆ.ಎಂ.-6, ಐಆರ್-20, ಐಆರ್-26, ಸಸ್ಯಶ್ರೀ, ವಿಕಾಸ್, ಐಇಟಿ 7575, ಪಿಇಟಿ 8116 ಗಳನ್ನು ಬೆಳೆಯಬಹುದು.
• ಮೊಟ್ಟೆಗಳನ್ನು ಸಾಮಾನ್ಯವಾಗಿ ಎಲೆಯ ತುದಿಗಳಲ್ಲಿ ಇಡುವುದರಿಂದ, ಸಸಿಮಿಡಯಿಂದ ನಾಟಿ ಮಾಡುವ ಮೊದಲು ಸಸಿಗಳ ತುದಿಯನ್ನು ಕತ್ತರಿಸಿ ಸುಟ್ಟು ಹಾಕುವುದು.
• ಹೊತ್ತೊತ್ತಾಗಿ ನಾಟಿ ಮಾಡದಿರುವುದು ಮತ್ತು ಗದ್ದೆಗಳಲ್ಲಿ ಹೆಚ್ಚು ನೀರನ್ನು ನಿಲ್ಲಿಸುವುದನ್ನು ತಪ್ಪಿಸುವುದು.
• ಗದ್ದೆಗಳಲ್ಲಿ ಹಾಗಾಗ್ಗೆ ಮೊಟ್ಟೆಗಳ ಗುಂಪನ್ನು ಹುಡುಕಿ ನಾಶಮಾಡುವುದು.
• ಪೀಡಿತ ತೆಂಡೆಗಳನ್ನು (ಸತ್ತ ಸುಳಿಗಳು ಮತ್ತು ಬಿಳಿ ತೆನೆಗಳು) ಎಳೆದು/ ಕಿತ್ತು ನಾಶಮಾಡುವುದು.
• ಕೊಯ್ಲನ್ನು ಆದಷ್ಟು ನೆಲಮಟ್ಟದವರೆಗೆ ಮಾಡಿ ನಂತರ ತೆಂಡೆಯೊಳಗೆ ಅಡಗಿರುವ ಕೋಶಗಳನ್ನು ನಾಶಪಡಿಸಲು ನೇಗಿಲಿನಿಂದ ಬೇಸಾಯ ಮಾಡಬೇಕು.
ಯಾಂತ್ರಿಕ ನಿಯಂತ್ರಣ:
• ಪತಂಗಗಳನ್ನು ಆಕರ್ಷಿಸಿ ಕೊಲ್ಲಲು ಹೆಕ್ಟೇರ್‍ಗೆ ಒಂದರಂತೆ ಬೆಳಕಿನ ಬಲೆಗಳನ್ನು ಬಳಸಬೇಕು.
• ಕಾಂಡಕೊರಕ ಹುಳುಗಳ ಗಣತಿ ಮಾಡಲು ಹೆಕ್ಟೇರಿಗೆ 4 ಮೋಹಕ ಬಲೆಗಳನ್ನು ಬಳಸಬೇಕು.
ಜೈವಿಕ ನಿಯಂತ್ರಣ:
ಮೊಟ್ಟೆಗಳ ಪರತಂತ್ರ ಕೀಟವಾದ ಟ್ರೈಕೋಡ್ರಾಮಾ ಜಪಾನಿಕಮ್ (ಟ್ರೈಕೊಕಾರ್ಡ್)ಗಳನ್ನು ನಾಟಿ ಮಾಡಿದ 30 ಮತ್ತು 37 ದಿನಗಳ ನಂತರ ಎರಡು ಬಾರಿ ಬಿಡುಗಡೆ ಮಾಡಬೇಕು. (5 ಸಿ. ಸಿ. ಪ್ರತಿ ಹೆಕ್ಟೇರ್‍ಗೆ- ಒಂದು ಲಕ್ಷ ಮೊಟ್ಟೆಗಳು)
ಇತರ ಮೊಟ್ಟೆಯ ಪರತಂತ್ರ ಪ್ರಭೇದಗಳಾದ ಟಿಟ್ರಾಸಿಕಸ್, ಟೆಲೆನೋಮಸ್, ಮರಿಗಳ ಪರಾವಲಂಬಿಗಳಾದ ಗೋನಿಯೋಜಸ್, ಅಪಾಂಟೆಲೆಸ್, ಟ್ರೆಕಾನ್ ಕೋಶಗಳ ಪರಾವಲಂಬಿಗಳಾದ ಎಲಾಸ್ಮಸ್, ಟೆಟ್ರಾಸ್ಟಿಕಸ್, ಕ್ಸಾಂತೋವೆಂಪ್ಲಾ ಮುಂತಾದವುಗಳ ಸಂರಕ್ಷಣೆ ಮಡಬೇಕು.
ಇವುಗಳು ಸಂರಕ್ಷಣೆ ಮಾಡಲು ಗದ್ದೆಗಳ ಪಕ್ಕ ಹೂವಿನ ಗಿಡಗಳು, ಕೊತ್ತಂಬರಿ ಬೆಳೆಯುವುದರಿಂದ ಸಾಧ್ಯ. ಜೊತೆಗೆ ವಿವೇಚನೆಯಿಂದ ಕೀಟನಾಶಕಗಳನ್ನು ಬಳಸಬೇಕು. (ಇದರಿಂದ ಪರಭಕ್ಷಕ ಕೀಟಗಳಾದ ಕ್ಯಾರಬಿಡ್ ಬೀಟಲ್‍ಗಳು, ಟೈಗರ್ ಬೀಟಲ್‍ಗಳು ಮತ್ತು ಮೀರಿಡ್ ತಿಗಣೆಗಳು ಹೆಚ್ಚಾಗಿ ಕೀಟ ಹತೋಟಿ ಮಾಡುತ್ತದೆ.).
ರಾಸಾಯನಿಕ ನಿಯಂತ್ರಣ:
ಸಸಿಗಳ ಕೀಟನಾಶಕ ಉಪಚಾರ: ನಾಟಿ ಮಾಡುವ ಮೊದಲು 12ರಿಂದ 14ಗಂಟೆಯ ಕಾಲ ಕಿತ್ತ ಸಸಿಗಳನ್ನು ಕ್ಲೋರ್‍ಫೈರಿಫಾಸ್ ದ್ರಾವಣದಲ್ಲಿ ಅಡ್ಡಬೇಕು. ಸಸಿಮಡಿಯಲ್ಲಿ ಒಂದು ಸಣ್ಣ ಪಾತಿಮಾಡಿ (10 ಅಡಿ x 10ಅಡಿ). ಅದರಲ್ಲಿ 250 ಲೀ. ನೀರನ್ನು ಬಿಡಬೇಕು. ನಂತರ 250 ಮಿ.ಲೀ. ಕ್ಲೋರ್‍ಫೈರಿಫಾಸ್ ಕೀಟನಾಶಕವನ್ನು ನೀರಿಗೆ ಹಾಕಿ ಕಲಕಿ. ಸಸಿಗಳ ಕಟ್ಟನ್ನು 10-12 ಗಂಟೆಗಳ ಕಾಲ ಬಿಡಬೇಕು. ಅಷ್ಟು ಸಮಯದ ಅಭಾವವಿದ್ದರೆ, ಮಡಿಯ ಒಳಗೆ 3 ಕೆ.ಜಿ. ಯೂರಿಯಾ ಹಾಕಿದರೆ ಬೇರುಗಳು ಕೀಟನಾಶಕವನ್ನು ಬೇಗನೆ ಹೀರಿಕೊಳ್ಳುತ್ತವೆ.
ಹಾನಿ 10% ಗಿಂತ ಹೆಚ್ಚು ಕಂಡುಬಂದಲ್ಲಿ ಕ್ಲೋರಾಂಟ್ರನಿಪ್ರೋಲ್ 0.4 ಜಿ ಕೀಟನಾಶಕವನ್ನು ನಾಟಿ ಮಾಡಿದ 15-20 ದಿವಸದೊಳಗಾಗಿ 4 ಕೆ.ಜಿ. ಕೀಟನಾಶಕವನ್ನು 5 ಕೆ.ಜಿ. ಮರಳಿನೊಂದಿಗೆ ಮಿಶ್ರಣಮಾಡಿ 1 ಎಕರೆಗೆ ಎರಚಬೇಕು. 48 ಗಂಟೆಗಳವರೆಗೆ ಹಾಗೆ ಗದ್ದೆಯಲ್ಲಿ ನೀರನ್ನು ನಿಲ್ಲಿಸಿರಬೇಕು.
ಕ್ಲೋರ್‍ಫೈರಿಫಾಸ್ 2 ಮಿ.ಲೀ. ಅಥವಾ ಪಿಪ್ರೋನಿಲ್ 1.5 ಮಿ.ಲೀ./ಲೀ ಅಥವಾ ಹರಳುರೂಪದ ಕೀಟನಾಶಕಗಳಾದ ಕಾರ್ಟಾಪ್ ಹೈಡ್ರೋಕ್ಲೋರೈಡ್ 25 ಕೆ.ಜಿ. ಅಥವಾ ಪಿಪ್ರೋನಿಲ್ 0.3%ಜಿ 25 ಕೆ.ಜಿ. ಪ್ರತಿ ಹೆಕ್ಟೆರ್‍ಗೆ ಬಳಸಬಹುದು. ದ್ರವರೂಪದ ಕೀಟನಾಶಕಗಳನ್ನು ಕಾಂಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು ಮತ್ತು ಹರಳುರೂಪದ ಕೀಟನಾಶಕಗಳನ್ನು 25 ಕೆ.ಜಿ. ಮರಳಿನಲ್ಲಿ ಮಿಶ್ರಣಮಾಡಿ, ಗದ್ದೆಯ ಎಲ್ಲಾ ಭಾಗಕ್ಕೆ ಸಮನಾಗಿ ಬೀಳುವಂತೆ ಹಾಕಬೇಕು.

ಭತ್ತದ ಕಣೆ ನೊಣ (ಖiಛಿe gಚಿಟಟ miಜge), ಒರ್ಸಿಯೋಲಿಯಾ ಒರೈಜೆ, ಸೆಸಿಡೋಮೈಯಿಡೆ, ಡಿಪ್ಟೆರಾ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಕಂಡುಬರುವ ಒಂದು ಪ್ರಮುಖ ಕೀಟವಾಗಿದೆ.
ಹಾನಿಯ ಸ್ವರೂಪ ಮತ್ತು ಲಕ್ಷಣಗಳು:
ಮರಿಹುಳುವು ಸುಳಿಯ ಒಳಭಾಗದಲ್ಲಿ ಕೆರೆದು ತಿನ್ನವುದರಿಂದ ಎಲೆ ಕವಚದ ಕುಂಠಿತವಾಗುತ್ತದೆ. ಎಲೆ ಕವಚವು ಬಿಳಿ ಕೊಳವೆಯಾಕಾರಕ್ಕೆ ಮಾರ್ಪಾಡಾಗಿ ಮೊಂಡಾಗಿ ಕೊನೆಗೊಳ್ಳುತ್ತದೆ ಮತ್ತು ಯಾವುದೇ ತೆನೆಯನ್ನು ಬಿಡುವುದಿಲ್ಲ. ಈ ಕೊಳವೆಯು ತಿಳಿಹಸಿರು, ಗುಲಾಬಿ ಅಥವಾ ಕೆನ್ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಕಣೆ, ಸಿಲ್ವರ್‍ಶೂಟ್ ಅಥವಾ ಆನೆಕೊಂಬು ಎಂದು ಕರೆಯಲಾಗುತ್ತದೆ. ಸೆನೆಡೋಜನ್ ಎಂಬ ರಾಸಾಯನಿಕ ವಸ್ತುವನ್ನು ಮರಿಹುಳುಗಳು ಸ್ರವಿಸುವುದರಿಂದ ತೆಂಡೆಗಳ ಜೀವಕೋಶಗಳು ಹೆಚ್ಚು ಸಂಖ್ಯೆಯಲ್ಲಿ ವೃದ್ಧಿಯಾಗಿ ಕಾಂಡಭಾಗದಲ್ಲಿ ಗಂಟಾಗುತ್ತವೆ. ಆದ್ದರಿಂದ ಈ ಹುಳುಗಳನ್ನು ಗಾಲ್ ಮಿಡ್ಜ್ ಎಂದು ಕರೆಯುತ್ತಾರೆ.
ಹೆಚ್ಚು ಮಳೆ, ನೀರಾವರಿ ಮತ್ತು ಆದ್ರ್ರತೆ ಇದ್ದಾಗ ಇದರ ಹಾವಳಿ ಹೆಚ್ಚಾಗುತ್ತದೆ. 35ರಿಂದ 50 ದಿನಗಳ ಹಂತದ ಬೆಳೆಗಳಲ್ಲಿ ಬಹಳಷ್ಟು ತೆಂಡೆಗಳು ಹಾನಿಯಾಗುವ ಸಾಧ್ಯತೆ ಇದೆ. ಹಾನಿಗೊಳಗಾದ ತೆಂಡೆಗಳು ಯಾವುದೇ ತೆನೆಗಳನ್ನು ಬಿಡುವುದಿಲ್ಲ.
ಭಾರತದಲ್ಲಿ 6 ಗಾಲ್‍ಮಿಡ್ಜ್ ಬಯೋಟೈಪ್‍ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಬಯೋಟೈಪ್ಪ್ಗಳು ನಿರೋಧಕ ತಳಿಗಳ ಮೇಲೆ ಸಂತಾನೋತ್ಪತ್ತಿ ಮಾಡಲು ಸಮರ್ಥವಾಗಿವೆ.
ಜೀವನ ಚರಿತ್ರೆ: ಪ್ರೌಢ ಹೆಣ್ಣುನೊಣವು ಉದ್ದವಾದ ಹೊಳೆಯುವ ಬಿಳಿ ಅಥವಾ ಕೆಂಪು ಅಥವಾ ಗುಲಾಬಿ ಬಣ್ಣದ ಮೊಟ್ಟೆಗಳನ್ನು ಒಂಟಿಯಾಗಿ ಅಥವಾ ಎಲೆಗಳ ಬುಡದಲ್ಲಿ 2-6 ಗುಂಪಾಗಿ ಇಡುತ್ತವೆ. ಒಂದು ಹೆಣ್ಣು 100-300 ಮೊಟ್ಟೆಗಳನ್ನು ಇಡಬಲ್ಲದು. ಮೊಟ್ಟೆಯಿಂದ ಹೊರಬಂದ ಮರಿಹುಳು (mಚಿggoಣ) 1 ಮಿ.ಮೀ. ಇದ್ದುಮೊನಚಾದ ಮುಂಭಾಗದ ತುದಿಯೊಂದಿಗೆ ಎಲೆಕವಚದ ಮೇಲೆ ತೆವಳುತ್ತಾ ತೆಂಡೆಗೆ ಪ್ರವೇಶಿಸಿ ಕೊರೆದು ತಿನ್ನಲಾರಂಭಿಸುತ್ತದೆ. ತಿನ್ನುವ ಜಾಗದ ಸುತ್ತಲೂ ಅಂಡಾಕಾರದ ಕೋಣೆಯನ್ನು ರಚಿಸಿಕೊಂಡು ತಿನ್ನುತ್ತದೆ. ಆ ಜಾಗದಲ್ಲಿ ಜೀವಕೋಶಗಳು ವೃದ್ಧಿಯಾಗುವುದರಿಂದ ಗಾಲ್(ಗಂಟು) ಸ್ವರೂಪ ಪಡೆಯುತ್ತದೆ. ಅದೇ ಭಾಗದಲ್ಲಿ ಕೋಶಾವಸ್ಥೆಯನ್ನು ಮುಗಿಸುತ್ತದೆ. ಪ್ರೌಢ ನೊಣವು ಹಳದಿ ಮಿಶ್ರಿತ ಕಂದುಬಣ್ಣದಾಗಿದ್ದು ಸೊಳ್ಳೆಯಂತೆ ಕಾಣುತ್ತವೆ ಮತ್ತು ರಾತ್ರಿಯ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಪ್ರೌಢ ನೊಣಗಳು ಬೂದು ಬಣ್ಣದ್ದಾಗಿದ್ದು ಇಬ್ಬನಿ ಹನಿಗಳನ್ನು ತಿಂದು ಜೀವಿಸುತ್ತವೆ.
ಆರ್ಥಿಕ ಹಾನಿಯ ಸಂಖ್ಯೆ: 10% ಸಿಲ್ವರ್ ಶೂಟ್/ ಆನೆಕೊಂಬುಗಳು
ನಿರ್ವಹಣಾ ಕ್ರಮಗಳು:
ಕೀಟನಿರೋಧಕ ತಳಿಗಳಾದ ಎಂಡಿಯು – 3, ಪೋಥನಾ, ಕಾಕತೀಯ, ಶಕ್ತಿ, ಸುರೇಖಾ, ವಿಕ್ರಮ್, ಕುಂತಿ, ನಈಲಾ, ಲತಾ, ಎಂಓ 4, ಫಲ್ಲುನಾ, ಮಹಾವೀರ, ನೇತ್ರಾವತಿ, ಐ ಆರ್ 36ಗಳ್ನನು ಬೆಳೆಯಬಹುದು. ಹೆಚ್ಚು ಹಾನಿಯಾಗುವ ಪ್ರದೇಶವಾದ ಕರಾವಳಿಯಲ್ಲಿ ತಳಿಗಳನ್ನು ಬಳಸುವುದು ಸೂಕ್ತ.
ಬೀಜಗಳನ್ನು ಕ್ಲೋರ್ ಫೈರಿಫಾಸ್ 20 ಇ.ಸಿ. 2 ಮಿ.ಲೀ./ ಪ್ರತಿ ಕೆ.ಜಿ. (0.2%) ಬೀಜಕ್ಕೆ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲೀ./ ಪ್ರತಿ ಕೆ.ಜಿ. (0.5 ಕೆ.ಜಿ. /100 ಕೆ.ಜಿ.) ಬೀಜಕ್ಕೆ ಮಿಶ್ರಣ ಮಾಡಿ 3 ಗಂಟೆಯ ನಂತರ ಬಿತ್ತನೆಗೆ ಬಳಸಬೇಕು.
ಪ್ಲ್ಯಾಟಿಗೆಸ್ಟ್‍ರ್ ಓರೈಜಾ (ಪ್ಲ್ಯಾಟಿಗೆಸ್ಟರಿಡೆ: ಡಿಪ್ಟೆರಾ) ಪರಾವಲಂಬಿ ಕೀಟಗಳನ್ನು ಸಂರಕ್ಷಿಸುವುದು.

ಸಸಿಗಳ ಕೀಟನಾಶಕ ಉಪಚಾರ:
ಕೀಟನಾಶಕಗಳನ್ನು ಬಳಸಿ ಈ ಕೀಟಗಳ ಹತೋಟಿ ಒಂದು ಪ್ರದೇಶದಲ್ಲಿ ಹಾನಿಯ ಅನುಸಾರ ಹತ್ತಿರದ ಕೃಷಿ ವಿಶ್ವವಿದ್ಯಾಲಯ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭÉೀಟಿ ಮಾಡಿ ಸೂಕ್ತವಾದ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಬಳಸಬೇಕು.
III ಭತ್ತದ ಎಲೆ ತಿನ್ನುವ ಕೀಟಗಳು
ಂ. ಸೈನಿಕ ಹುಳುಗಳು:

  1. ಸ್ಪೊಡೋಪ್ಟೆರಾ ಮಾರಿಷಿಯಾ: ನಾರ್ಟುಯಿಡೆ, ಲೆಲಪಿಡಾಪ್ಟಿರಾ ಸ್ಪರ್ಮಿಂಗ್ ಕ್ಯಾಟರ್ ಪಿಲ್ಲರ್, (Sಠಿoಜoಠಿಣeಡಿಚಿ mಚಿuಡಿiಣiಚಿ)
    ಇದು ಸಾಮಾನ್ಯವಾಗಿ ಅಲ್ಪಪ್ರಮಾಣದಲ್ಲಿ ಹಾನಿಮಾಡುವ ಕೀಟವಾಗಿದ್ದು ಕೆಲವು ಋತುಗಳಲ್ಲಿ ಮತ್ತು ಕೆಲವು ವರ್ಷಗಳಲ್ಲಿ (ಕೆಲವು ವರ್ಷದ ಋತುಗಳಲ್ಲಿ) ಏಕಾಏಕಿ ಇವುಗಳ ಸಂಖ್ಯೆ ಜಾಸ್ತಿಯಾಗಿ ಸಸಿಮಡಿ ಮತ್ತು ಗದ್ದೆಗಳಲ್ಲಿ ಎಲೆಗಳ ನಡುದಿಂಡುಗಳನ್ನು ಮಾತ್ರ ಬಿಟ್ಟು ಸಂಪೂರ್ಣವಾಗಿ ತಿಂದುಹಾಕುತ್ತವೆ. ಇದರ ಹಾನಿಯು ಗದ್ದೆಗಳಲ್ಲಿ ದನಕರುಗಳು ಮೇಯ್ದಂತೆ ಭಾಸವಾಗುತ್ತದೆ. ಮರಿಹುಳುಗಳೂ ಬೆಳಗಿನ ಸಮಯದಲ್ಲಿ ಬದುಗಳ ಬಿರುಕುಗಳಲ್ಲಿ ಅಡಗಿಕೊಂಡು ರಾತ್ರಿಯ ಸಮಯದಲ್ಲಿ ದಾಳಿ ಇಡುತ್ತವೆ. ಮರಿಹುಳುಗಳೂ ಅನೇಕ ಹುಲ್ಲು ಜಾತಿಯ ಕಳೆಗಳನ್ನು ತಿಂದು ಜೀವಿಸುತ್ತವೆ.
    ಜೀವನ ಚರಿತ್ರೆ: ಮೊಟ್ಟೆಗಳು ಗೋಳಾಕಾರವಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ. ಮೊಟ್ಟೆಗಳನು ಗುಂಪಿನಲ್ಲಿಟ್ಟು ಬೂದುಬಣ್ಣದ ಕೂದಲಿನಿಂದ ಮುಚ್ಚುತ್ತವೆ. ಮರಿಹುಳುಗಳು ಆರಂಭಿಕ ಹಂತದಲ್ಲಿ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು ಮೇಲ್ಭಾಗದಲ್ಲಿ ತಿಳಿ ಹಸಿರುಗೆರೆಗಳಿರುತ್ತವೆ. ದೇಹದ ಪ್ರತಿ ಭಾಗಗಳ ಮೇಲ್ಬದಿಯಲ್ಲಿ ಅರ್ಧಚಂದ್ರಾಕಾರದ (ಅರೆ. ವೃತ್ತಾಕಾರದ) ಕಪ್ಪು ಚುಕ್ಕೆ ಹೊಂದಿರುತ್ತವೆ. ಬೆಳೆದ ಹುಳುಗಳು ಮಣ್ಣಿಗೆ ಹೋಗಿ ಕೋಶಗಳಾಗಿ ಪರಿವರ್ತಿತವಾಗುತ್ತವೆ. ಕೋಶಗಳು ಕಂದು ಬಣ್ಣದ್ದಾಗಿದ್ದು ಮತ್ತು 16-17 ಮಿ. ಮೀ. ಉದ್ದವನ್ನು ಹೊಂದಿರುತ್ತವೆ. ಪ್ರೌಢ ಚಿಟ್ಟೆಗಳು ಕಂದು ಬಣ್ಣ, ಮಧ್ಯಮ ಗಾತ್ರ ಮತ್ತು ದೃಢವಾದ ದೇಹ ಹೊಂದಿವೆ. ಮುಂಭಾಗದ ರೆಕ್ಕೆಗಳ ಮೇಲೆ ಎದ್ದು ಕಾಣುವ ತ್ರಿಕೋನ ಕಪ್ಪು ಚುಕ್ಕೆ ಮತ್ತು ಓರೆಯಾದ ಬಿಳಿಗೆರೆ ಇರುತ್ತದೆ. ಹಿಂದಿನ ರೆಕ್ಕೆಗಳು ತೆಳುವಾದ ಕಪ್ಪು ಅಂಚುಗಳೊಂದಿಗೆ ಬಿಳಿ ಬಣ್ಣದ್ದಾಗಿರುತ್ತವೆ. (ಚಿತ್ರ…)
    ನಿರ್ವಹಣೆ: ಹಾನಿಗೊಳಗಾದ ಪ್ರದೇಶದಲ್ಲಿ ನರ್ಸರಿ ಹಂತದಲ್ಲಿ ಹೆಚ್ಚು ನೀರು ಬಿಡುವುದರಿಂದ ಅಡಗಿರುವ ಮರಿಹುಳುಗಳನ್ನು ಮೇಲಕ್ಕೆ ಬರುವಂತೆ ಮಾಡುವುದರಿಂದ ಹಕ್ಕಿಗಳ ಬಾಯಿಗೆ ತುತ್ತಾಗುತ್ತವೆ ಅಥವಾ ಕೈಯಲ್ಲಿ ಆರಿಸಿ ನಾಶಪಡಿಸಬಹುದು. ಗದ್ದೆಗಳಲ್ಲಿ ಬಾತುಕೋಳಿಗಳನ್ನು ಬಿಡುವುದರಿಂದ ಮರಿಹುಳುಗಳನ್ನು ಆರಿಸಿ ತಿನ್ನುತ್ತವೆ. ಅವಶ್ಯವಿದ್ದರೆ ಮಾತ್ರ ಕ್ಲೋರ್‍ಫೈರಿಫಾಸ್ 20 ಇ.ಸಿ. 2 ಮಿ.ಮೀ./ಲೀ. ಅಥವಾ ಶಿಫಾರಸ್ಸು ಮಾಡಿದ ಇನ್ಯಾವುದೇ ಕೀಟನಾಶಕ ಸಿಂಪಡಿಸಿ.
  2. ಓರಿಯಂಟಲ್ ಆರ್ಮಿವರ್ಮ್, ಮೈಥಿಮ್ನಾ ಸೆಪರೇಟ, ಒಥಿಣಡಿimಟಿಚಿ Seಠಿಡಿeಣಚಿ, ನಾರ್ಪುಯಿಡೆ, ಲೆಪಿಡಾಪ್ಟೆರಾ:
    ಈ ಕೀಟು ಬಹುಮುಖ್ಯವಾಗಿ ಮೆಕ್ಕೆಜೋಳವನ್ನು ಹಾನಿ ಮಾಡುವುದರಿಂದ ಮೆಕ್ಕೆಜೋಳದ ಕೀಟಗಳು ಮತ್ತು ಅವುಗಳ ನಿರ್ವಹಣೆ ಪಠ್ಯದಲ್ಲಿ ಸವಿವರವಾಗಿ ತಿಳಿಸಲಾಗಿದೆ. ಈ ಕೀಟವು ಭತ್ತವನ್ನಷ್ಟೆ ಅಲ್ಲದೆ ಬಹಳಷ್ಟು ಏಕದಳ ಬೆಳೆಗಳ ಮೇಲೆ ಬಹುಪ್ರಾಮುಖ್ಯತೆ ಡಪೆದಿದೆ. ಭತ್ತದ ಎಲೆಗಳನ್ನು ಮತ್ತು ತೆನೆಗಳ ಕಾಳುಗಳನ್ನು ತಿನ್ನುವುದರಿಂದ ಸಸ್ಯಗಳು ಒಣಗಲಾರಂಭಿಸುತ್ತವೆ.
  3. ಭತ್ತದ ಕೊಳವೆಹುಳು, ನಿಂಪುಲಾ ಡಿಪ್ಟಂಕಾಲಿಸ್ (ಓಥಿmಠಿhuಟಚಿ ಜeಠಿuಟಿeಣಚಿಟis)/ ಪ್ಯಾರಾಪೋನಿಕ್ಸ್‍ಸ್ಟಾಗ್ನಾಲಿಸ್ (Pಚಿಡಿಚಿಠಿoಟಿಥಿx sಣಚಿgಟಿಚಿಟis), ಕ್ಯಾಂಬಿಡೆ, ಲೆಪಿಡಾಪ್ಟೆರಾ:
    ಹಾನಿಯ ಸ್ವರೂಪ ಮತ್ತು ದಾಳಿಯ ಲಕ್ಷಣ: ಮರಿಹುಳುಗಳು ಗರಿಗಳ ತುದಿಯನ್ನು ಕತ್ತರಿಸಿ ಅದನ್ನು ಉದ್ದವಾದ ಕೊಳವೆಗಲನ್ನು ಮಾಡಿಕೊಂಡು ಒಳಗೆ ಸೇರಿಕೊಂಡಿರುತ್ತವೆ. ಮರಿಹುಳುಗಳು ಕೊರವೆಗಳ ಹೊರಗೆ ತಲೆಮಾತ್ರ ಹಾಕಿ ತಲೆಯನ್ನು ಮೇಲೆ ಕೆಳಗೆ ಮಾಡುತ್ತ ಎಲೆಗಳ ಪತ್ರಹರಿತ್ತನ್ನು ಕೆರೆದು ತಿನ್ನುತ್ತವೆ.
    ಈ ಕೀಟಗಳ ಹಾನಿಯನ್ನು ಇತರ ಕೀಟಗಳಿಂದ ಉಂಟಾಗುವ ಹಾನಿಯ ಲಕ್ಷಣಗಳಿಗಿಂತ ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದಾಗಿ ಹಾನಿಗೊಳಗಾದ ಗರಿಗಳ ಅಂಗಾಂಶಗಳ ಕೆರೆಯುವಿಕೆಯಿಂದ ಏಣಿಯ ಆಕಾರದ ಲಕ್ಷಣಗಳನ್ನು ಕಾಣಬಹುದು. ಎರಡನೆಯದಾಗಿ ಹಾನಿಯು ಗದ್ದೆಯ ಒಳಗೆ ಒಂದೇ ಸಮನಾಗಿ ಹರಡಿರುವುದಿಲ್ಲ. ಮರಿಹುಳುಗಿರುವ ಕೊಳವೆಗಳು ಹೆಚ್ಚಾಗಿ ನೀರಿನಲ್ಲಿ ತಗ್ಗುಪ್ರದೇಶಗಳಿಗೆ ತೇಲಿಕೊಂಡು ಹೋಗಿ ಹಾನಿಯು ತಗ್ಗುಪ್ರದೇಶದಲ್ಲಿ ಕೇಂದ್ರೀಕೃತವಾಗಿರುತ್ತದೆ. ಕೊಳವೆಗಳು ಸಸ್ಯಗಳ ಎಲೆಗಳ ಅಂಚಿನಲ್ಲಿ ನೇತಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಎಲೆಗಳ ಮೇಲೆ ಏಣಿಯಾಕಾರದ ಬಿಳಿ ಮಚ್ಚೆಗಳು ಹಾನಿಯ ವಿಶಿಷ್ಟ ಲಕ್ಷಣವಾಗಿದೆ.
    ಜೀವನ ಚರಿತ್ರೆ:
    ಮೊಟ್ಟೆಗಳು ತಿಳಿ ಹಳದಿ ಬಣ್ಣದ್ದಾಗಿದ್ದು ಚಪ್ಪಟೆಯಾಗಿರುತ್ತವೆ. ಮೊಟ್ಟೆಗಳನ್ನು ನೀರಿನ ಮೇಲೆ ತೇಲುತ್ತಿರುವ ಎಲೆಗಳ ಕೆಳಭಾಗದಲ್ಲಿ ಇಡುತ್ತವೆ. ಮೊಟ್ಟೆಯ ಅವಧಿ 2-6 ದಿನಗಳು. ಮರಿಹುಳುಗಳ ಕಂದು ಬಣ್ಣದ ತಲೆಯೊಂದಿಗೆ ಹಸಿರುಮಿಶ್ರಿತ ಬಿಳಿ ಬಣ್ಣದ್ದಾಗಿದ್ದು, ಎಲೆಗಳ ಕೊಳವೆ ಮಾಡಿಕೊಂಡು ಅದರೊಳಗೆ ಇರುತ್ತವೆ. ಕೊಳವೆಗಳು ಒಂದು ತುದಿಯಲ್ಲಿ ತೆರೆದಿದ್ದು ಒಳಭಾಗವು ತೆಳುವಾದ ರೇಷ್ಮೆಯ ಪದರವನ್ನು ಹೊಂದಿದ್ದು ನೀರನ್ನು ಹಿಡಿದಿಟ್ಟುಕೊಂಡಿರುತ್ತವೆ. ಈ ಮರಿಹುಳುಗಳ ಶ್ವಾಸನಾಳದ ಕಿವಿರುಗಳನ್ನು (ಣಡಿಚಿಛಿheಚಿಟ giಟಟs) ದೇಹದ ಎರಡು ಬದಿಯಲ್ಲಿ ಉಸಿರಾಟಕ್ಕೆ ನೀರಿನಲ್ಲಿ ಸಹಕರಿಸುತ್ತವೆ. ಕೊಳವೆಗಳಲ್ಲಿ ನೀರಿಲ್ಲದಿದ್ದರೆ ಮರಿಹುಳುಗಳು ಸಾಯುತ್ತವೆ. (ಜಲವಾಸಿ) ಪ್ರತಿ ಇನ್ಸ್ಟಾರ್‍ಗಳಲ್ಲಿ (iಟಿsಣಚಿಡಿ) ಹೊಸ ಕೊಳವೆಗಳನ್ನೂ ಮಾಡಿಕೊಳ್ಳುತ್ತವೆ. ಈ ಮರಿಹುಳುಗಳು ಕೊಳವೆಯಿಂದ ತಲೆ ಹೊರ ಚಾಚಿ ಕಾಲುಗಳಿಂದ ಮೇಲಕ್ಕೆ ಕೆಳಕ್ಕೆ ಚಲಿಸುತ್ತ ಪತ್ರಹರಿತ್ತನ್ನು ಕೆರೆದು ತಿನ್ನುತ್ತವೆ.
    ನಿರ್ವಹಣಾ ಕ್ರಮಗಳು:
     ಹಾನಿಗೊಳಗಾದಲ್ಲಿ ಗದ್ದೆಗಳಿಂದ ನೀರನ್ನು ತೆಗೆದು ಒಣಗಿಸುವುದು
     ನೀರನ್ನು ಸಂಪೂರ್ಣ ತೆಗೆದ ಮೇಲೆ, ಒಂದು ಉದ್ದವಾದ ಹಗ್ಗವನ್ನು ಎರಡು ಕಡೆಯಿಂದ ಇಬ್ಬರು ಹಿಡಿದು ಗರಿಗಳ ಮೇಲೆ ಆಡಿಸಿದಾಗ (ಚಿತ್ರ 7) ಕೊಳವೆಗಳು ಕೆಳಗೆ ಬಿದ್ದು ನೀರಲ್ಲದೆ ಸಾಯುತ್ತವೆ.
     ಅವಶ್ಯವಿದ್ದಲ್ಲಿ ಕ್ಲೋರ್‍ಪೈರಿಫಾಸ್ 20 ಇಸಿ 2 ಮಿ.ಮೀ./ಲೀ. ಅಥವಾ ಪಿಫ್ರೋನಿಲ್ 5% ಎಸ್‍ಸಿ 1.5 ಮಿ.ಲೀ./ಲೀ. ಅಥವಾ ಕಾರ್ಟಾಪ್ ಹೈಡ್ರೋಕ್ಲೋರೈಡ್ 4 ಜಿ ಎ 20 ಕೆ.ಜಿ/ ಹೆಕ್ಟೇರ್‍ಗೆ ಉಪಯೋಗಿಸಬಹುದು.
  4. ಭತ್ತದ ಎಲೆ ಸುರುಳಿಹುಳು, ಕ್ನಾಫಾಲೋಕ್ರೊಸಿಸ್ ಮೆಡಿನಾಲಿಸ್ (ಛಿಟಿಚಿಠಿheಟoಛಿಡಿosis meಜiಟಿಚಿಟis) ಕ್ರಾಂಬಿಡಿ, ಲೆಪಿಡಾಪ್ಟೆರಾ
    ನಮ್ಮ ದೇಶದ ಎಲ್ಲಾ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕಂಡುಬರುವ ಒಂದು ಪ್ರಮುಖ ಕೀಟ. ಇದು ಅಕ್ಟೋಬರ್‍ನಿಂದ ಜನವರಿಯವರೆಗೆ ಸಕ್ರೀಯವಾಗಿರುತ್ತದೆ.
    ಹಾನಿಯ ಲಕ್ಷಣಗಳು: ಮರಿಹುಳುಗಳು ಗರಿಗಳ ಅಂಚುಗಳನ್ನು ಬಾಯಿಯಿಂದ ಹೊರಸೂಸುವ ರೇಷ್ಮೆ ತರಹದ ಎಳೆಗಳಿಂದ ಎಣೆದು ಸುರುಳಿ ಮಾಡಿಕೊಂಡು ಪತ್ರಹರಿತ್ತನ್ನು ಕೆರೆದು ತಿನ್ನುತ್ತವೆ. ಇದರಿಂದ ಸುರುಳಿಯನ್ನು ತೆಗೆದರೆ ಮರಿಹುಳುಗಳ ಲದ್ದಿಯು ಶೇಖರವಾಗಿರುವುದು ಕಂಡುಬರುತ್ತದೆ. ಗರಿಗಳು ಬಇಳಿ ಹಾಳೆಯಂತೆ ಕಾಣುತ್ತವೆ ಮತ್ತು ಒಣಗಲು ಆರಂಭವಾಗುತ್ತವೆ. ತೀವ್ರವಾಗಿ ಹಾನಿಗೊಳಗಾಗಿರುವ ಗದ್ದೆಗಳು ಹಾನಿಯಿಂದ ಬಳಲುತ್ತವೆ. ಬೆಳೆಯು ಬೂಟ್‍ಲೀಫ್ ಹಂತದಲ್ಲಿ ಹಾನಿಗೊಳಗಾದರೆ ಧಾನ್ಯದ ಇಳುವರಿ ಬಹಳಷ್ಟು ಕಡಿಮೆಯಾಗುತ್ತದೆ.

ಜೀವನಚಕ್ರ: ಹಳದಿ ಬಣ್ಣದ ಪತಂಗ ಚಿಕ್ಕದಾಗಿದ್ದು (1 ಸೆಂ.ಮೀ. ರೆಕ್ಕೆಗಳು) ಮುಂದಿನ ಮತ್ತು ಹಿಂದಿನ ರೆಕ್ಕೆಗಳ ಮೇಲೆ ಎರಡು ಮತ್ತು ಒಂದು ಅಡ್ಡವಾದ ಕಂದು ರೇಖೆಗಳನ್ನು ಕಾಣಬಹುದು. ಎರಡೂ ರೆಕ್ಕೆಗಳಲ್ಲಿಯೂ ಹೊರಗಿನ ಅಂಚಿನಲ್ಲಿ ಕಂದುಬಣ್ಣದ ಗೆರೆ ಹೊಂದಿರುತ್ತವೆ. ಗರಿಗಳ ಮೇಲ್ಮೈಯಲ್ಲಿ ಒಂದು ಅಥವಾ ಎರಡು ಮೊಟ್ಟೆಗಳನ್ನು ಜೋಡಿಯಾಗಿ ಇಡುತ್ತವೆ. ಮೊಟ್ಟೆಯ ಅವಧಿ 4-7 ದಿನಗಳು. ತಿಳಿ ಹಸಿರು ಮರಿಹುಳುಗಳು 15-27 ದಿನಗಳಲ್ಲಿ ಪೂರ್ಣವಾಗಿ ಬೆಳೆಯುತ್ತವೆ ಮತ್ತು ಸುರಳಿ ಒಳಗೆ ಕೋಶಾವಸ್ಥೆಗೆ ಹೋಗುತ್ತವೆ. ಕೋಶದ ಅವಧಿ 6-8 ದಿನಗಳು. ಒಟ್ಟು ಜೀವನಚಕ್ರವು 25-42 ದಿನಗಳಿಂದ ಮುಗಿಸುತ್ತವೆ.
ನಿರ್ವಹಣಾ ಕ್ರಮಗಳು:
ಬದುಗಳ ಮತ್ತು ಗದ್ದೆಯ ಸುತ್ತಮುತ್ತ ಕಳೆಯನ್ನು ನಿರ್ಮೂಲನೆ ಮಾಡುವುದು.
ಅತಿಯಾದ ರಸಗೊಬ್ಬರಗಳ ಬಳಕೆ ತಪ್ಪಿಸುವುದು
ನಾಟಿ ಮಾಡಿದ 37.44 ಮತ್ತು 51 ದಿನಗಳಲ್ಲಿ ಮೊಟ್ಟೆಯ ಪರಾವಲಂಬಿ ಟ್ರೈಕೋಡ್ರೋಮಾ ಚಿಲೋನಿಸ್ ಕಾರ್ಡ್‍ಗಳನ್ನು ಎ 5 ಸಿ.ಸಿ./ಹೆಕ್ಟೇರ್ ಬಿಡುಗಡೆಗೊಳಿಸುವುದು.
ಕ್ಲೋರ್‍ಪೈರಿಫಾಸ್ 20 ಇ.ಸಿ.ಎ 2 ಮಿ.ಲೀ/ ಲೀ ಅಥವಾ ಪಿಫ್ರೋನಿಲ್ 1.5 ಮಿ.ಲೀ./ಲೀ. ಅಥವಾ ಹರಳು ರೂಪದ ಕಾರ್ಟಾಪ್ ಹೈಡ್ರೋಕ್ಲೋರೈಡ್ 750 ಗ್ರಾಂ ಆಕ್ಟಿವ್ ಇನ್ಸೋಡಿಯಂಟ್ (20 ಕೆ.ಜಿ./ಹೆಕ್ಟೇರ್) ಅಥವಾ ಪಿಪ್ರೋನಿಲ್ 75 ಗ್ರಾಂ ಆ.ಇ.(25 ಕೆ.ಜಿ./ ಹೆಕ್ಟೇರ್).

  1. ಸ್ಕಿಪ್ಪರ್ ಮರಿಹುಳು, ಪೆಲೋಪಿಡಾನ್ ಮಥಿಯಾನ್ (Peಟoಠಿiಜಚಿs mಚಿಣhiಚಿs) ಹೆಪ್ಪೆರಿಡೆ, ಲೆಪಿಡಾಪ್ಟೆರಾ
    ಮರಿಹುಳು ಗರಿಗಳ ಅಂಚುಗಳನ್ನು ತಿನ್ನುತ್ತವೆ. ಇದು ಸಾಮಾನ್ಯವಾಗಿ ಅಲ್ಪ ಪ್ರಮಾಣದಲ್ಲಿ ಹಾನಿಮಾಡುವ ಕೀಟ. ವಯಸ್ಕ ಪತಂಗಗಳು ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿದ್ದು, ಮೀಸೆಯು (ಅಂಟೆನಾ) ಬಾಗಿರುತ್ತದೆ. ಮರಿಹುಳುವಿನ ಕುತ್ತಿಗೆಯು ತಲೆಗಿಂತ ಚಿಕ್ಕದಾಗಿದ್ದು, ತಲೆಯ ಮೇಲೆ ಕೆಂಪಾದ ‘ಗಿ’ ಆಕಾರದ ಗುರುತು ಇರುತ್ತದೆ.
    ನಿರ್ವಹಣೆ: ಮರಿಹುಳುಗಳು ಕೈಯಿಂದ ಆರಿಸಿ ನಾಶಪಡಿಸುವುದು.
  2. ಭತ್ತದ ಕೊಂಬಿನ ಮರಿಹುಳು, ಮೆಲಾನಿಟಸ್ ಲೆಡಾ ಇಸ್ಮನೆ () ನಿಂಪಾಲಿಡೆ, ಲೆಪಿಡಾಪ್ಟರಾ:
    ಮರಿಹುಳುಗಳು ಗರಿಗಳ ಅಂಚುಗಳನ್ನು ತಿನ್ನುತ್ತವೆ. ಇದು ಸಹ ಭತ್ತಕ್ಕೆ ಅಲ್ಪಪ್ರಮಾಣದಲ್ಲಿ ಹಾನಿಮಾಡುವ ಕೀಟ. ಮರಿಹುಳುಗಳ ಮೇಲೆ ಎರಡು ಕೆಂಪು ಬಣ್ಣದ ಕೊಂಬುಗಳು ಮತ್ತು ಗುದದ ತುದಿಯಲ್ಲಿ ಎರಡು ಹಳದಿ ಕೊಂಬುಗಳಿರುತ್ತವೆ. ಕೋಶವು ಹಸಿರು ಮಿಶ್ರಿತ ಬಣ್ಣದಾಗಿದ್ದು ಕ್ರೈಸಾಲಿಸ್ ಎಂದು ಕರೆಯುತ್ತಾರೆ. ಪ್ರೌಢ ಚಿಟ್ಟೆಯು ಕಂದುಬಣ್ಣದ್ದಾಗಿದ್ದು ತೆಳ್ಳಗಿದ್ದರೂ ದೊಡ್ಡ ರೆಕ್ಕೆಗಳನ್ನು (2.5 ಸೆಂ.ಮೀ.) ಹೊಂದಿರುತ್ತವೆ. ಮುಂಭಾಗದ ರೆಕ್ಕೆಗಳ ಮುಂಚೂಣಿಯಲ್ಲಿ ಹಳದಿಬಣ್ಣದ ಮಚ್ಚೆಯನ್ನು ಹೊಂದಿವೆ.
    ನಿರ್ವಹಣೆ: ಮರಿಹುಳುಗಳನ್ನು ಮತ್ತು ಕೋಶಗಳನ್ನು ಆರಿಸಿ ನಾಶಪಡಿಸುವುದು.
  3. ಮುಳ್ಳುದುಂಬಿ, ಡಿಕ್ಲಾಡಿಸ್ಪಾ ಆರ್ಮಿಜೆರಾ, ಕೈಸೋಮೆಲಿಡೆ, ಕೋಲಿಯಾಪ್ಟೆರಾ
    ಪ್ರೌಢ ದುಂಬಿಗಳು ಹಸಿರು ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಬಿಳಿಯಾದ ಗೆರೆಗಳು ಮೂಡುತ್ತವೆ. ಎಲೆಯ ಉದ್ದಕ್ಕೂ ಬಿಳಿ ತೇಪೆಗಳು ಕಾಣಿಸಿಕೊಳ್ಳುತ್ತವೆ. ಮರಿಹುಳುಗಳು (ಗ್ರಚ್ಸ್) ಎಲೆಗಳ ಮೇಲೆ ಬಿಳಿಗುಳ್ಳೆಗಳನ್ನು ಮೂಡಿಸುತ್ತವೆ.
    ಜೀವನ ಚಕ್ರ: ಪ್ರೌಢ ಹುಳುಗಳ ಕಪ್ಪು ಬಣ್ಣದ್ದಾಗಿದ್ದು 3-4 ಮಿ.ಮೀ ರಷ್ಟು ಸಣ್ಣ ಬೀಟಲ್ ಗುಂಪಿಗೆ ಸೇರಿದ ಕೀಟಗಳು. ಮುಂದಿನ ರೆಕ್ಕೆಗಳು (ಎಲಿಟ್ರಾ-ಇಟಥಿಣಡಿಚಿ) ಮೇಲೆ ಮುಳ್ಳುಗಳಿರುವುದರಿಂದ ಮುಳ್ಳುದುಂಬಿ ಎಂದು ಕರೆಯುತ್ತಾರೆ. ಇವು ಎಲೆಳ ತುದಿಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಮರಿಹುಳುವು ಚಪ್ಪಟೆಯಾಗಿದ್ದು ಹಳದಿ ಬಣ್ಣದ್ದಾಗಿರುತ್ತವೆ. ಎಲೆಗಳ ಗಣಿಗಳು/ ಗುಳ್ಳೆಗಳ ಒಳಗೆ ಕೋಶಾವಸ್ಥೆಗೆ ಹೋಗುತ್ತವೆ. ಮೊಟ್ಟೆಯ ಅವಧಿ: 4-5 ದಿನಗಳು, ಮರಿಹುಳುಗಳ ಅವಧಿ: 7-12 ದಿನಗಳು, ಕೋಶಾವಸ್ಥೆಯ ಅವಧಿ: 3-5 ದಿನಗಳು ವರ್ಷಕ್ಕೆ ಆರು ವೇಳೆಯನ್ನು ಮುಗಿಸುತ್ತವೆ.
    ನಿರ್ವಹಣೆ:
     ಗಣಿ(ಗುಳ್ಳೆ)ಗಳನ್ನು ಹೊಂದಿರುವ ಎಲೆಗಳ ತುದಿಯನ್ನು ಕತ್ತರಿಸಿ ನಾಶಪಡಿಸಬೇಕು.
     ಮುಳ್ಳುದುಂಬಿಗಳನ್ನು ಕೀಟಗಳ ಬಲೆಗಳಿಂದ (sತಿeeಠಿ ಟಿeಣ) ಹಿಡಿದು ನಾಶಪಡಿಸುವುದು.
     ಅವಶ್ಯವಿದ್ದರೆ ಸಂಪರ್ಕ ಕೀಟನಾಶಕ ಬಳಕೆ.
  4. ಮಿಡತೆಗಳು: ಹೈರೋಗ್ಲೈಪಸ್ ಬ್ಯಾನಿಯಾನ (ಊieಡಿogಟಥಿಠಿhus bಚಿಟಿiಚಿಟಿ) ನತ್ತಯ ಆಕ್ಸಿಯಾ ನಿಟಿಡುಲಾ (oxಥಿಚಿ ಟಿiಣiಜuಟಚಿ), ಅಕ್ರಿಪಿಡೆ, ಆರ್ಥೋಪ್ಟೆರಾ:
    ಹಾನಿಯ ಲಕ್ಷಣಗಳು: ಅಪ್ಸರೆಗಳು ಮತ್ತು ಪ್ರೌಢ ಹುಳುಗಳು, ಗರಿಗಳ ಅಂಚಿನಿಂದ ನಡುದಿಂಡನ್ನು ಬಿಟ್ಟು ಅಡ್ಡಾದಿಡ್ಡಿಯಾಗಿ ತಿಂದು ಸಸ್ಯಗಳನ್ನು ವಿರೂಪಗೊಳಿಸುತ್ತವೆ. ಹೂವಿನ ಭಾಗಗಳನ್ನು ಸಹ ತಿನ್ನುತ್ತವೆ.
    ಮಿಡತೆ ಪ್ರಬೇಧಗಳ ಗುರುತಿಸುವಿಕೆ: ಮಿಡತೆ ಜಾತಿಗೆ ಸೇರಿದ ಬಹಳಷ್ಟು ಕೀಟಗಳು ಭತ್ತಕ್ಕೆ ಹಾನಿಮಾಡುತ್ತವೆ ಅವುಗಳಲ್ಲಿ ಮೇಲೆ ತಿಳಿಸಿದ ಎರಡು ಜಾತಿಗಳು ಬಹಳ ಪ್ರಮುಖವಾಗಿದೆ. ಹೈರೋಗ್ಲೈಪಸ್ ಬ್ಯಾನಿಯಾನ್ ದೊಡ್ಡ ಮಿಡತೆಯಾಗಿದ್ದು ಸುಮಾರು 3.75 ಸೆಂ.ಮೀ. ಉದ್ದವಾಗಿರುತ್ತದೆ ಮತ್ತು ಎದೆಯ (ಪ್ರೊಥೋರಾಕ್ಸ್) ಮೇಲೆ ಮೂರು ಅಡ್ಡ ಕಪ್ಪು ರೇಖೆಗಳಿದ್ದು ಕಾಲಿನ್ ಟಿಬಿಯಾ (ಖಿibiಚಿ) ನೀಲಿ ಬಣ್ಣದ್ದಾಗಿರುತ್ತದೆ. ಈ ಮಿಡತೆಯು ಭತ್ತ, ಕಬ್ಬು, ರಾಗಿ ಮತ್ತು ಇತರೆ ಸಿರಿಧಾನ್ಯಗಳ ಮೇಲೂ ಹಾನಿಮಾಡುತ್ತದೆ.
    ಆಕ್ಸಿಯಾ ನಿಟಿಡುಲಾ ಮಿಡತೆಗಳು ಚಿಕ್ಕದಾಗಿದ್ದು, ಸುಮಾರು 2.5 ಸೆಂ.ಮೀ. ಉದ್ದವಿರುತ್ತವೆ. ದೇಹದ ಎರಡು ಬದಿಯಲ್ಲಿ ಕಂದು ಬಣ್ಣದ ಗೆರೆಯನ್ನು ಹೊಂದಿವೆ. ಇವು ಭತ್ತ ಮತ್ತು ಇತರೆ ಕಳೆಗಳ ಮೇಲೆ ದಾಳಿ ಮಾಡುತ್ತವೆ.
    ಜೀವನ ಚಕ್ರ: ಸಾಮಾನ್ಯವಾಗಿ ಇವು ಒಂದು ವರ್ಷದಲ್ಲಿ ಒಂದು ವಂಶವನ್ನು ಮುಗಿಸುತ್ತವೆ. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಬದುಗಳಲ್ಲಿ ಅಥವಾ ಮರಳುಮಣ್ಣಿನಲ್ಲಿ 30-40 ಗುಂಪಿನಲ್ಲಿ 5 ಸೆಂಟಿ ಮೀಟರ್ ಆಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆ ಮೊಟ್ಟೆಗಳು ಮಳೆಗಾಲದಲ್ಲಿ ಅಂದರೆ ಜೂನ್-ಜುಲೈನಲ್ಲಿ ಮರಿಗಳಾಗಿ ಹೊರಬಂದು ಹುಲ್ಲು ಕಳೆಗಳ ಎಲೆಗಳನ್ನು ತಿನ್ನುತ್ತಾ ಭತ್ತವನ್ನು ನಾಟಿ ಮಾಡಿದಾಗ ಗದ್ದೆಗೆ ಚಲಿಸುತ್ತವೆ. ಅಪ್ಸರೆಗಳು 2-3 ತಿಂಗಳುಗಳಲ್ಲಿ ಪ್ರೌಢ ಹುಳುಗಳಾಗಿ ಮಾರ್ಪಾಡಾಗುತ್ತವೆ. ಮೊಟ್ಟೆಗಳು ಅಕ್ಟೋಬರ್‍ನಿಂದ ಜೂನ್‍ವರೆಗೆ ಮಣ್ಣಿನೊಳಗೆ ಉಳಿಯುತ್ತವೆ.
    ನಿರ್ವಹಣೆ:
    ಬೇಸಿಗೆ ಕಾಲದಲ್ಲಿ ಆಳವಾಗಿ ಉಳುಮೆಮಾಡುವುದರಿಂದ ಮೊಟ್ಟೆಗಳು ಮಣ್ಣಿನ ಮೇಲ್ಪದರಕ್ಕೆ ಬಂದು ಶಾಖಕ್ಕೆ ಅಥವಾ ಪಕ್ಷಿಗಳ ಬಾಯಿಗೆ ತುತ್ತಾಗುತ್ತವೆ.
    ಬದುಗಳನ್ನು ಆದಷ್ಟು ಸಣ್ಣಗಿಡಬೇಕು ಮತ್ತು ಬದುಗಳನ್ನು ಕೊಚ್ಚುವುದರಿಂದ (ಟ್ರಿಮ್ ಮಾಡುವುದರಿಂದ) ಅಲ್ಲಿ ಇಟ್ಟಿರುವ ಮೊಟ್ಟೆಗಳು ಸಾಯುತ್ತವೆ.
    ಅವಶ್ಯವಿದ್ದ ಪ್ರದೇಶದಲ್ಲಿ ಶಿಫಾರಸ್ಸು ಮಾಡಿದ ಸಂಪರ್ಕ ಕೀಟನಾಶಕವನ್ನು ಬಳಸುವುದು.
  5. ಭತ್ತದ ನೀಲಿ ಜೀರುಂಡೆ, ಲೆಪ್ಟಿಸ್ಪಾ ಪಿಗ್ಮಾಯ್, ಕ್ರಸೋಮೆಲಿಡೆ, ಕೋಲಿಯಾಪ್ಟೆರಾ
    ಪ್ರೌಢಹುಳುಗಳು ಸಣ್ಣ ನೀಲಿ ಜೀರುಂಡೆಗಳಾಗಿದ್ದು (3.4 ಮಿ.ಮಿ) ಅದರ ಮರಿಹುಳುಗಳು (ಗ್ರಬ್ಸ್) ಸಣ್ಣದಾಗಿದ್ದು ಬಿಳಿ ಬಣ್ಣದ್ದಾಗಿವೆ. ಮರಿಹುಳುಗಳು ಮತ್ತು ಪ್ರೌಢಹುಳುಗಳ ಗರಿಗಳನ್ನು ಕೆರೆದು ತಿನ್ನುತ್ತವೆ. ಗರಿಗಳ ಮೇಲ್ಮೈಯಲ್ಲಿ ಬಿಳಿ ಗೆರೆಗಳೊಂದಿಗೆ ಎಲೆಗಳು ಮೇಲಕ್ಕೆ ಸುರುಳಿಕೊಳ್ಳುತ್ತವೆ.
    ಭತ್ತಕ್ಕೆ ಕಾಣುವ ನುಸಿಪೀಡೆಗಳು:
  6. ಎಲೆ ನುಸಿ, ಒಲಿಗೋನಿಕಪ್ ಒರೈಜಾ (oಟigoಟಿಥಿಛಿhus oಡಿಥಿzಚಿe) ಟೆಟ್ರಾನಿಕೆಡೆ : ನುಸಿಗಳು ಎಲೆಗಳ ಮೇಲ್ಮೈಯಲ್ಲಿ ಹಾನಿ ಮಾಡುತ್ತವೆ. ನಿರಂತರವಾಗಿ ಬಾಧೆ ಮಾಡುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸಸಿಮಡಿಗಳು ಹಾನಿಗೊಳಗಾದಲ್ಲಿ ಸಸಿಗಳು ಒಣಗಬಹುದು. ಹಾನಿಗೊಳಗಾಗಿರುವ ಗದ್ದೆಗಳಲ್ಲಿ ಸಸ್ಯಗಳು ಹಳದಿಯಾಗಿ ಬೆಳವಣಿಗೆ ಕುಂಠಿತವಾಗುತ್ತವೆ.
  7. ಎಲೆ ಕವಚ ನುಸಿ, ಅಕ್ಯಾರಿನಾ ಸ್ಟೇನಿಯೋಟಾರ್ಸೋನೀಮಸ್ ಸ್ಪಿಂಕಿ, ಟಾರ್ನೊನಿಮಿಡೆ.: ಈ ನುಸಿಗಳು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಎಲೆಕವಚ ಮತ್ತು ತೆನೆಗೆಳಿಗೆ ವ್ಯಾಪಕ ಹಾನಿಯನ್ನುಂಟು ಮಾಡುತ್ತವೆ. ತೆನೆಗಳಿಗೆ ಹಾನಿ ಮಾಡಿದಾಗ ಕಾಳುಗಳು ಕಪ್ಪುಬಣ್ಣಕ್ಕೆ ತಿರುಗುತ್ತವೆ ಮತ್ತು ಅವು ಜಳ್ಳಾಗುತ್ತವೆ.
    ನಿರ್ವಹಣೆ: ಕರಗುವ ಗಂಧಕ (3 ಗ್ರಾಂ ಪ್ರತಿ ಲೀಟರ್‍ಗೆ) ಪರಿಣಾಮಕಾರಿಯಾಗಿದ್ದು ಆದರೆ ಮೊಟ್ಟೆಗಳು ಸಾಯುವುದಿಲ್ಲ. ಪೆನಾಜಾಕ್ಪಿನ್ ಎ 1.7 ಮಿ.ಲೀ./ಲೀ ಅಥವಾ ಪ್ರೊಪೆಸೋಫಾಸ್ ಎ 1.0 ಮಿ.ಲೀ/ಲೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
    ಮೇಲೆ ತಿಳಿಸಿದ ಎಲ್ಲಾ ಕೀಟಗಳು ಅಥವಾ ನುಸಿಗಳು ಒಂದೆ ಗದ್ದೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ವಾತಾವರಣದ ಅನುಗುಣದಂತೆ ಒಂದು ಪ್ರದೇಶದಲ್ಲಿ 2-3 ಕೀಟಗಳು ಬಾಧೆ ಮಾಡಬಹುದಷ್ಟೆ. ಇಂತಹ ಕೀಟಗಳನ್ನು ಶಿಫಾರಸ್ಸು ಮಾಡಿದಂತೆ ಹತೋಟಿ ಮಾಡಬಹುದು. ಆದರೆ ಕೆಲವು ಕೀಟಗಳು ಒಂದು ಪ್ರದೇಶದಲ್ಲಿ ಪ್ರತಿ ವರ್ಷವೂ ಹಾನಿಮಾಡಿ ಬಹಳ ಪ್ರಮುಖ ಪೀಡೆಗಳಾಗಿ ಪರಿಣಮಿಸುತ್ತವೆ. ಅದರಿಂದ ಸಮಗ್ರ ಪೀಡೆ ಕ್ರಮಗಳನ್ನು ಅಳವಡಿಸಿಕೊಂಡರೆ ಪ್ರಮುಖ ಕೀಟಗಳ ಬಾಧೆಯನ್ನು ಕಡಿಮೆ ಪ್ರಮಾಣದಲ್ಲಿಟ್ಟು ಹೆಚ್ಚಿನ ಲಾಭ ಪಡೆಯಬಹುದು. ಕೀಟನಾಶಕಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಸಿಂಪಡಣೆ ಮಾಡಿದರೆ ಬಹಳಷ್ಟು ರೈತಮಿತ್ರ ಕೀಟಗಳು ಮತ್ತು ಜೇಡಗಳು ಕೀಟಪೀಡೆಗಳ ಸಂಖ್ಯೆಯನ್ನು ಕಡಿಮೆ ಮಟ್ಟದಲ್ಲಿಡುತ್ತವೆ.

ಭತ್ತದಲ್ಲಿ ಸಮಗ್ರ ಪೀಡೆ ನಿರ್ವಹಣೆ:

  1. ಸಾಗುವಳಿ ಪದ್ಧತಿಗಳು:
    ಹಂಗಾಮ ಪೂರ್ವದಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಕೀಟಗಳ ಕೋಶಗಳು, ಮೊಟ್ಟೆಗಳು ಬಿಸಿಲಿನ ಶಾಖಕ್ಕೆ ಸಾಯುವುವು ಅಥವಾ ಪಕ್ಷಗಳಿಗೆ ಆಹಾರವಾಗುವುವು.
    ಗದ್ದೆಯಲ್ಲಿ ಕಂದು ಜಿಗಿಹುಳುವಿನ ಹಾವಳಿ ಇದ್ದಲ್ಲಿ ನೀರು ಬಸಿದು ಹೋಗುವಂತೆ ಮಾಡಿ ಒಣಗಿಸುವುದರಿಂದ ಬಾಧೆಯ ಪ್ರಮಾಣ ಕಡಿಮೆ ಮಾಡಬಹುದಾಗಿದೆ.
    ತಳಿಗಳ ಆಯ್ಕೆ: ಒಂದು ಪ್ರದೇಶದಲ್ಲಿ ಪದೇ ಪದೇ ಕಂಡು ಬರುವ ಕೀಟಗಳ ಹತೋಟಿಗೆ ನಿರೋಧಕ ತಳಿಗಳ ಆಯ್ಕೆ ಮಾಡುವುದು ಸೂಕ್ತ.
    ಬೆಳೆ ಪರಿವರ್ತನೆ: ಪ್ರತಿ ಹಂಗಾಮಿನಲ್ಲಿಯೂ ಒಂದೇ ಬೆಳೆಯನ್ನು ಬೆಳೆಯುವುದರಿಂದ ಕೀಟಗಳು ವೃದ್ಧಿಯಾಗುತ್ತವೆ. ಆಗಾಗ್ಗೆ ಬೆಳೆ ಪರಿವರ್ತನೆ ಮಾಡುವುದು ಉತ್ತಮ.
    ಸಕಾಲಕ್ಕೆ ನಾಟಿ: ಒಂದು ಪ್ರದೇಶದಲ್ಲಿ ಎಲ್ಲರೂ ಒಟ್ಟಾಗಿ ನಾಟಿ ಮಾಡುವುದರಿಂದ (ಹೆಚ್ಚು ದಿನಗಳ ವ್ಯತ್ಯಾಸವಿಲ್ಲದೆ) ನಷ್ಟವನ್ನು ತಗ್ಗಿಸಬಹುದು.
    ಸಸಿಗಳ ತುದಿ ಕತ್ತರಿಸುವುದು: ಭತ್ತದ ನಾಟಿಗೆ ಸಿದ್ದವಾಗಿರುವ ಸಸಿಗಳ ತುದಿಯನ್ನು ಕತ್ತರಿಸುವುದರಿಂದ ಎಲೆಗಳ ತುದಿಯಲ್ಲಿರುವ ಕಾಂಡಕೊರಕ ಕೀಟದ ಮೊಟ್ಟೆಗಳ ಗುಂಪುಗಳು ನಾಶಗೊಳ್ಳುತ್ತವೆ.
    ಸಮತೋಲನ ರಸಗೊಬ್ಬರ ಬಳಕೆ: ಪ್ರದೇಶಕ್ಕೆ ಅನುಗುಣವಾಗಿ ಶಿಫಾರಸ್ಸಿನ ಪ್ರಕಾರ ಪೋಷಕಾಂಶಗಳನ್ನೂ ನೀಡುವುದು. ಸಾವಯವ ಗೊಬ್ಬರಗಳನ್ನು ತಪ್ಪದೇ ಬಳಸಬೇಕು. ಇದರಿಂದ ಬೆಳೆಗೆ ಕೀಟ ಮತ್ತು ರೋಗನಿರೋಧಕ ಶಕ್ತಿ ಬರುತ್ತದೆ.
  2. ಯಾಂತ್ರಿಕ ಪದ್ಧತಿಗಳು:
    ಬೆಳಕಿನ ಬಲೆ ಮತ್ತು ಮೋಹಕ ಬಲೆ ಬಳಕೆ: ಕಾಂಡಕೊರೆಯುವ ಪತಂಗಗಳು, ಎಲೆ ಸುರುಳಿ ಹುಳುಗಳ ಪತಂಗಗಳು, ಕಂದುಜಿಗಿಹುಳು ಮತ್ತು ಹಸಿರು ಜಿಗಿಹುಳುಗಳು ಬೆಳಕಿನ ಬಲೆ (ಚಿತ್ರ….) ಆಕರ್ಷಿತವಾಗಿ ಸಾಯುತ್ತವೆ. ಬೆಳಕಿನ ವಲಯ ಕೆಳಗೆ ಸೋಪು ಮಿಶ್ರಿತ ನೀರನ್ನು ಇಟ್ಟಲ್ಲಿ ಆಕರ್ಷಿತವಾದ ಪತಂಗಗಳು ನೀರಿನಲ್ಲಿ ಬಿದ್ದು ಸಾಯುತ್ತವೆ.
  3. ಜೈವಿಕ ನಿಯಂತ್ರಣ:
    ಮೊಟ್ಟೆ ಮತ್ತು ಪರತಂತ್ರ ಜೀವಿಗಳಾದ ಟೈಕೋಗ್ರಾಮ ವಿವಿಧ ಜಾತಿಯ ಜೇಡಗಳು, ಮೀರಿಡ್ ತಿಗಣೆ, ಗುಲಗಂಜಿ ಹುಳು, ಕ್ರೈಸೋಲಪರ್ಲ, ಮಳೆಹುಳು (ಡ್ರಾಗನ್ ಪ್ಲೈ ಮತ್ತು ಡ್ಯಾಮ್ಸಲ್ ಪ್ಲೈ) ಹುಳುಗಳನ್ನು ಸಂರಕ್ಷಿಸುವುದು.
    ಕೀಟಪೀಡೆಗಳ ಮೊಟ್ಟೆಗಳ ಪರತಂತ್ರ ಜೀವಿಗಳು: ನಾಟಿ ಮಾಡಿದ ತಿಂಗಳ ನಂತರ ಒಂದು ವಾರದ ಅಂತರದಲ್ಲಿ ಮೂರು ಬಾರಿ ಟ್ರೈಕೋಗ್ರಾಮಾ (ಟ್ರೈಕೋಕಾರ್ಡ್) ಕೀಟದ ಕಾರ್ಡ್‍ಗಳನ್ನು ಬಿಡುಗಡೆ ಮಾಡಬಹುದು.
    ಪ್ಲಾಟಿಗಾಸ್ಟೆರ್ ಒರೈಜ್ ಪರಾವಲಂಬಿ ಗಾಲ್‍ಗಳನ್ನು ಕಣಿಹುಳು ವಿರುದ್ಧ ಬಳಸುವುದು.
  4. ಕೀಟನಾಶಕಗಳ ಬಳಕೆ:
    ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಹೇಳಿದ ಪ್ರಮಾಣದಲ್ಲಿ ಬಳಸಿದರೆ ಮಾತ್ರ ಉತ್ತಮ. ಇದರಿಂದ ನೈಸರ್ಗಿಕ ಶತ್ರುಗಳ ನಾಶ ಮತ್ತು ಆಹಾರದಲ್ಲಿ ಉಳಿಕೆಗಳನ್ನು ಕನಿಷ್ಠ ಮಟ್ಟದಲ್ಲಿಡಬಹುದು.
     ಸಸಿಮಡಿಯಲ್ಲಿ ಹಾನಿಗನುಸಾರವಾಗಿ ಕೀಟಕ್ಕೆ ಸಂಬಂಧಿಸಿದಂತೆ ಕೀಟನಾಶಕ ಬಳಸುವುದು.
     ನಾಟಿ ಮಾಡುವ ಬದಲು ಕಿತ್ತ ಸಸಿಮಡಿಗಳನ್ನು ಕ್ಲೋರ್‍ಫೈರಿಫಾಸ್ ದ್ರಾವಣದಲ್ಲಿ ಉಪಚಾರ ಮಾಡುವುದು (ಕಾಂಡಕೊರೆಯುವ ಹುಳು ಮತ್ತು ಕಣಿ ಹುಳು ಹತೋಟಿಗೆ)
     ಕ್ಲೋರಾಂಟ್ರನಿಪ್ರೋಲ್ 0.4 ಜಿ ಕೀಟನಾಶಕವನ್ನು ನಾಟಿ ಮಾಡಿದ 15-20 ದಿವಸಗೊಳಗಾಗಿ 4 ಕೆ.ಜಿ. ಕೀಟನಾಶಕವನ್ನು 4 ಕೆ.ಜಿ. ಮರಳಿನೊಂದಿಗೆ ಮಿಶ್ರಣಮಾಡಿ ಒಂದು ಎಕರೆ ಪ್ರದೇಶಕ್ಕೆ ಸಮಾನಾಗಿ ಎರಚಬೇಕು. 48 ಗಂಟೆಗಳವರೆಗೆ ಹಾಗೆ ಗದ್ದೆಯಲ್ಲಿ ನೀರನ್ನು ನಿಲ್ಲಿಸಿರಬೇಕು.
     ಕ್ಲೋರ್‍ಪೈರಿಫಾಸ್ 2 ಮಿ.ಲೀ. ಅಥವಾ ಪಿಫ್ರೋನಿಲ್ 1.5 ಮಿ.ಲೀ/ಲೀ ಅಥವಾ ಹರಳು ರೂಪದ ಕೀಟನಾಶಕಗಳಾದ ಕಾರ್ಟಾಪ್‍ಹೈಡ್ರೋಕ್ಲೋರೈಡ್ 25 ಕೆ.ಜಿ. ಅಥವಾ ಪಿಪ್ರೋನಿಲ್ 0.3% ಜಿ 25 ಕೆ.ಜಿ. ಪ್ರತಿ ಹೆಕ್ಟೇರ್‍ಗೆ ಬಳಸಬಹುದು. ದ್ರವರೂಪದ ಕೀಟನಾಶಕಗಳನು ಕಾಂಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು ಮತ್ತು ಹರಳು ರೂಪದ ಕೀಟನಾಶಕಗಳನ್ನು 25 ಕೆ.ಜಿ. ಮರಳಿನಲ್ಲಿ ಮಿಶ್ರಣ ಮಾಡಿ ಗದ್ದೆಯ ಎಲ್ಲಾ ಭಾಗಕ್ಕೆ ಸಮನಾಗಿ ಬೀಳುವಂತೆ ಎರಚಬೇಕು.
    <><><><><>

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ಡಾ.ಸಿ.ಎಂ.ಕಲ್ಲೇಶ್ವರಸ್ವಾಮಿ, ಸಹಾಯಕ ಪ್ರಾಧ್ಯಾಪಕರು, (ಕೀಟಶಾಸ್ತ್ರ), ಕೃಷಿ ಕಾಲೇಜು, ಶಿವಮೊಗ್ಗ ಮೊಬೈಲ್‌ ಸಂಖ್ಯೆ: 94495 37578

error: Content is protected !!