ಬೇಸಿಗೆ ಬೆಳೆಗೆ ಹೆಚ್ಚಾಗಿ ರಸಹೀರುವ ಕೀಡೆಗಳಾದ ಥ್ರಿಪ್ಸ್, ಸುರುಳಿಪೂಚಿ ತಂಬಾಕಿನ ಕೀಡೆ ಹಿಲಿಯೋಥಿಸ್ ಹೆಚ್ಚಾಗಿರುತ್ತವೆ. ರೋಗಗಳಲ್ಲಿ ತುಕ್ಕು, ಕುಡಿಕೊಳೆ ರೋಗ ಹಾಗೂ ಬೇರು ಮತ್ತು ಕತ್ತುಕೊಳೆ ರೋಗ ಬರುತ್ತವೆ. ಈ ಕೀಟ ಪೀಡೆಗಳ ಬಾಧೆಯು ಕೃಷ್ಣಾ ಮೇಲ್ದಂಡೆ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರವಾಗಿ ಕಂಡು ಬರುತ್ತಿದ್ದು, ನಿರ್ವಹಣೆಗೆ ಈ ಕೆಳಗಿನ ಸಮಗ್ರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬಹುದು.
- ಬೀಜಕ್ಕೆ ಟ್ರೈಕೋಡರ್ಮಾ, ರೈಜೋಬಿಯಂ ನಿಂದ ಬೀಜೋಪಚಾರ ಮಾಡಬೇಕು.
- ಬೇವಿನ ಹಿಂಡಿಯನ್ನು ಎಕರೆಗೆ 2 ಕ್ವಿಂಟಾಲ್‍ನಂತೆ ಬಿತ್ತನೆಗೆ ಪೂರ್ವದಲ್ಲಿ ಭೂಮಿಯಲ್ಲಿ ಬೆರೆಸಬೇಕು.
- ಔಡಲ ಬೆಳೆಯನ್ನು ಬಲೆ ಬೆಳೆಯಾಗಿ ಪ್ರತಿ ಎಕರೆಗೆ ಶೇಂಗಾ ಬಿತ್ತನೆ ಬೀಜದಲ್ಲಿ 200 ಗ್ರಾಂ ಔಡಲ ಬೀಜ ಬೆರೆಸಿ ಬಿತ್ತಬೇಕು. ಹಾಗೂ ಸಜ್ಜೆಯನ್ನು ಕೀಟ ತಡೆ ಬೆಳೆಯಾಗಿ ಹೊಲದ ಸುತ್ತ ಒಂದು ದಿಂಡು 3-4 ಸಾಲು ಹಾಗೂ ಪ್ರತಿ 10 ಸಾಲಿಗೆ ಒಂದು ಸಾಲಿನಂತೆ ಬೆಳೆಯಬೇಕು.
- ಸ್ಪೋಡೊಪ್ಟೆರಾ ಕೀಟದ ಸಮೀಕ್ಷೆಗಾಗಿ ಪ್ರತಿ ಎಕರೆಗೆ ಕನಿಷ್ಟ 2 ಮೋಹಕ ಬಲೆಗಳನ್ನು 30 ಅಡಿಗೂ ಹೆಚ್ಚು ಅಂತರದಲ್ಲಿ ನೇತು ಹಾಕಬೇಕು. ಪ್ರತಿ 20 ದಿನಕ್ಕೊಮ್ಮೆ ಮೋಹಕ ವಸ್ತು ಲ್ಯೂರ್ ಗಳನ್ನು ಬದಲಾಯಿಸಬೇಕು ಹಾಗೂ ಬೆಳೆಯಿಂದ 2 ಅಡಿ ಎತ್ತರದಲ್ಲಿರಬೇಕು.
- ಸ್ಪೋಡೊಪ್ಟೆರಾ ಕೀಟದ ಮೊಟ್ಟೆ ಅಥವಾ ಮರಿಹುಳುಗಳು ಗುಂಪಾಗಿರುವುದರಿಂದ ಇವುಗಳನ್ನು ಶೇಂಗಾ ಹಾಗೂ ಔಡಲ ಬೆಳೆಯಿಂದ ಆಯ್ದು ನಾಶಪಡಿಸಬೇಕು.
- ಸ್ಪೋಡೊಪ್ಟೆರಾ ಎನ್.ಪಿ.ವಿ. 100 ಎಲ್.ಇ. ಪ್ರತಿ ಎಕರೆಗೆ ಬಳಸುವುದು.
- ವಿಷಪಾಷಣವನ್ನು ಪ್ರತಿ ಎಕರೆಗೆ 20 ಕಿ.ಗ್ರಾಂ ನಂತೆ ಸಾಯಂಕಾಲದ ಸಮಯ ಸಾಲುಗಳ ಮಧ್ಯೆ ಎರಚಬೇಕು. ವಿಷಪಾಷಾಣ ತಯಾರಿಸಲು 2 ಕಿ.ಗ್ರಾಂ ಬೆಲ್ಲ, 250 ಮಿ.ಲೀ. ಮೊನೋಕ್ರೋಟೋಫಾಸ್ 36 ಎಸ್.ಎಲ್. ನೀರಿನೊಂದಿಗೆ ಕರಗಿಸಿ ನಂತರ 2-3 ಲೀ. ನೀರಿನೊಂದಿಗೆ 20 ಕಿ.ಗ್ರಾಂ. ಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಬೆರೆಸಬೇಕು.
- ರಸ ಹೀರುವ ಕೀಟಗಳು ಕಂಡು ಬಂದಾಗ ಶೇ.5 ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು.
- ಎಲೆ ಸುರುಳಿ ಪೂಚಿ ಕೀಟದ ನಿರ್ವಹಣೆಗಾಗಿ 2 ಮಿ.ಲೀ. ಪ್ರೊಫೆನೋಫಾಸ್ 50 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಜೋಳದ ಎಲೆಯ ಕಷಾಯವನ್ನು ತಯಾರಿಸುವ ವಿಧಾನ
ಒಂದು ಭಾಗ ಒಣಗಿಸಿದ ಜೋಳದ ಎಲೆಯ ಪುಡಿಯನ್ನು 4 ಬಾಗ ನೀರಿನಲ್ಲಿ ಹಾಕಿ ಒಂದು ತಾಸಿನವರೆಗೆ ಕುದಿಸಿ ಸೋಸಬೇಕು.ನಂತರ ಒಂದು ಭಾಗ ಕಷಾಯವನ್ನು 9 ಭಾಗ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.
ಸೀತಾಫಲದ ಎಲೆಯ ಕಷಾಯವನ್ನು ಗೋಮೂತ್ರದಲ್ಲಿ ಮಾಡುವ ವಿಧಾನ : ಸಿಂಪರಣೆ ಮಾಡುವುದಕ್ಕಿಂತ 7 ದಿವ ಮೊದಲು ಸೀತಾಫಲದ ಎಲೆಯನ್ನು ಕುಟ್ಟಿ ಗೋಮೂತ್ರದಲ್ಲಿ (1:1 ಅನುಪಾತದಲ್ಲಿ) ನೆನೆಯಿಸಿ ಇಡಬೇಕು.ಏಳು ದಿವಸಗಳ ನಂತರ ಮಿಶ್ರಣವನ್ನು ಸೋಸಬೇಕು. ಈ ರೀತಿ ತಯಾರಿಸಲ್ಪಟ್ಟ ಸೀತಾಫಲದ ಎಲೆಯ ಗೋಮೂತ್ರ ಕಷಾಯವನ್ನು ಒಂದು ಲೀಟರ್ ನೀರಿಗೆ 50 ಮಿ.ಲೀ. ನಂತೆ ಬೆರೆಸಿ ಶೇಂಗಾ ಬೆಳೆಯಲ್ಲಿ ಸ್ಪೋಡೊಪ್ಟೆರಾ ಕೀಡೆಯ ನಿಯಂತ್ರಣಕ್ಕೆ ಉಪಯೋಗಿಸಬೇಕು. ರೋಗ ಅಥವಾ ಕೀಟ ಬಾಧೆ ಕಂಡು ಬಂದಾಗ ಮಾತ್ರ ಸಸ್ಯ ಸಂರಕ್ಷನಾ ಕ್ರಮಗಳನ್ನು ತೆಗೆದುಕೊಳ್ಲಬೇಕು. ಪ್ರತಿ ವರ್ಷವು ರೋಗ ಅಥವಾ ಕೀಟಗಳ ಬಾಧೆ ತಪ್ಪದೇ ಬರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
• ಬಸವರಾಜ ಕೆ., ಬಸವರಾಜ ಕಾಡನವರ, ಮಂಜುನಾಥ್ ಎನ್. ಶೃತಿ ಎನ್., ಮತ್ತು ಜಹೀರ್ ಅಹಮದ್,. ಕೃಷಿ ವಿಶ್ವವಿದ್ಯಾಲಯ, ರಾಯಚೂರು