ಶಿವಮೊಗ್ಗ: ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ಜತೆಯಲ್ಲಿ ಸಂವಹನ, ನಾಯಕತ್ವ ಸೇರಿದಂತೆ ಉತ್ತಮ ಕೌಶಲ್ಯಗಳ ಕಲಿಕೆಗೆ ಸಹಕಾರಿ ಆಗುತ್ತದೆ ಎಂದು ರಂಗಭೂಮಿ ಕಲಾವಿದೆ ವಿಜಯಲಕ್ಷ್ಮೀ ಹೇಳಿದರು.
ಶಿವಮೊಗ್ಗ ತಾಲೂಕಿನ ತೋಪಿನಘಟ್ಟದಲ್ಲಿ ಸಮನ್ವಯ ಟ್ರಸ್ಟ್‌ನಿಂದ ಆಯೋಜಿಸಿರುವ “ಮಕ್ಕಳ ಹಬ್ಬ ಮಕ್ಕಳಿಗಾಗಿ ವಿಶೇಷ ಉಚಿತ ಬೇಸಿಗೆ ಶಿಬಿರ”ಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಸಾಹಿತ್ಯ, ಸಂಗೀತ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದಾಗ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಶಿಕ್ಷಣದ ಜತೆಯಲ್ಲಿ ಮಕ್ಕಳು ಬೇಸಿಗೆ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮಕ್ಕಳು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡು, ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಉಚಿತ ಶಿಬಿರ ನಡೆಸುತ್ತಿರುವ ಸಮನ್ವಯ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಮಕ್ಕಳಿಗೆ ಶಿಬಿರದಲ್ಲಿ ಪರಿಸರ ಕಾಳಜಿ, ಕೃಷಿ ತಿಳವಳಿಕೆ, ತಾರಸಿ ತೋಟ, ಸಂಗೀತ ಕಲಿಕೆ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಆಗಿರುವಂತೆ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮಕ್ಕಳ ಬೇಸಿಗೆ ಸಂಪೂರ್ಣ ಉಚಿತವಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಎಲ್ಲ ರೀತಿ ನಾಯಕತ್ವ, ಸಂವಹನ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಉತ್ತಮ ಸ್ವಯಂಸೇವಕ ಪುರಸ್ಕೃತ ಅಭಿ ಎಚ್.ಎನ್.ಗೌಡ, ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾ ದೇವಿ, ತ್ರಿವೇಣಿ, ವಿಜಯ್, ಸಮನ್ವಯ ಸ್ವಯಂಸೇವಕರು ಮತ್ತಿತರರು ಉಪಸ್ಥಿತರಿದ್ದರು.