ಶಿವಮೊಗ್ಗ ನವೆಂಬರ್ 19: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಇವರು ಇಂದು ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಬೆಕ್ಷೆ-ಕೆಂಜಿಗುಡ್ಡೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿದರು.

ಬೆಳಿಗ್ಗೆ ಬೆಕ್ಷೆ-ಕೆಂಜಿಗುಡ್ಡೆ ಗ್ರಾಮ ವ್ಯಾಪ್ತಿಯ ಕುಡುಮಲ್ಲಿಗೆಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರೌಢಶಾಲೆಗೆ ಭೇಟಿ ನೀಡಿ, ಭೋಜನಾಲಯ ವೀಕ್ಷಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ನಿರ್ಮಿಸಿದ 15 ವರ್ಷ ಹಳೆಯ ಅಡಿಕೆ ತೋಟ ವೀಕ್ಷಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಾರವರ್ಧಿತ ಅಕ್ಕಿ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು ಹಾಗೂ ಐರನ್, ಫಾಲಿಕ್ ಆಸಿಡ್ ಸೇವನೆ ಪ್ರಾಮುಖ್ಯತೆ ಜೊತೆಗೆ ಪೌಷ್ಟಿಕಾಂಶಗಳ ಸೇವನೆ ಅತಿ ಮುಖ್ಯ ಎಂದು ತಿಳಿಸಿದರು.
ನಂತರ ಕುಡುಮಲ್ಲಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು. ಕುರುಣಿಮಕ್ಕಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಕುಡುಮಲ್ಲಿಗೆಯ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ವಿವಿಧ ಇಲಾಖೆಗಳು ತಮ್ಮ ಇಲಾಖೆಯಿಂದ ನೀಡಲಾಗುವ ಯೋಜನೆಗಳು, ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಅದನ್ನು ವೀಕ್ಷಿಸಿದ ಅವರು ಸಾರ್ವಜನಿಕರು ವಿವಿಧ ಇಲಾಖೆಗಳಿಂದ ದೊರೆಯುವ ಯೋಜನೆಗಳು, ಸೌಲಭ್ಯಗಳ ಸದುಪಯೋಗ ಪಡೆಯುವಂತೆ ತಿಳಿಸಿದರು. ಕೃಷಿ, ತೋಟಗಾರಿಕೆ, ಸಂಶೋಧನಾ ಇಲಾಖೆಯಿಂದ 02 ಮಳಿಗೆ, ಸಮಾಜ ಕಲ್ಯಾಣ ಇಲಾಖೆಯಿಂದ 01, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 01, ಗ್ರಾಮ ಒನ್ 01, ಆರೋಗ್ಯ ಇಲಾಖೆ 01, ತಾಲ್ಲೂಕು ಪಂಚಾಯತ್ 01, ಶಿಕ್ಷಣ ಮತ್ತು ಅಕ್ಷರ ದಾಸೋಹ 01 ಮಳಿಗೆ ಸ್ಥಾಪಿಸಲಾಗಿತ್ತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಅಮೃತ್ ಅತ್ರೇಶ್, ಎಸಿಎಫ್ ಪ್ರಕಾಶ್, ಆರ್‍ಎಫ್‍ಒ ಆದರ್ಶ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

error: Content is protected !!