ಬಾಳೆ ಉತ್ಪಾದಕತೆಗಾಗಿ ರೋಗಗಳ ಮತ್ತು ಕೀಟಗಳ ನಿರ್ವಹಣೆ ಅಗತ್ಯ. ಎಲೆಚುಕ್ಕೆ ರೋಗವನ್ನು ಸಿಗಟೋಕ ಚುಕ್ಕೆ ರೋಗ ಎಂತಲೂ ಕರೆಯುತ್ತಾರೆ. ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳನ್ನು ಉಂಟುಮಾಡುತ್ತದೆ. ನಂತರ ಈ ಚುಕ್ಕೆಗಳು ಕಣ್ಣು ಗುಡ್ಡೆ ಆಕಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಇಡೀ ಎಲೆಯನ್ನು ಆವರಿಸಿಕೊಳ್ಳುತ್ತವೆ ಮತ್ತು ಚುಕ್ಕೆಗಳ ಅಂಚಿನಿಂದ ಹೊರಟ ತೆಳು ಹಳದಿ ಗೆರೆಗಳು ಎಲೆಗಳ ಎರಡು ಕಡೆಗಳಲ್ಲಿ ಕಂಡುಬರುತ್ತವೆ. ಇದರಿಂದ ಎಲೆಗಳು ಬಾಡಿ, ಒಣಗುತ್ತವೆ. ತೊಟ್ಟು ಒಣಗಿ ಬಾಗುತ್ತವೆ. ಒಣ ಹವೆ ಮತ್ತು ಹೆಚ್ಚಿನ ಉಷ್ಣಾಂಶವಿದ್ದಲ್ಲಿ ಈ ರೋಗದ ಬಾಧೆ ಇರುವುದಿಲ್ಲ.

ಗಡ್ಡೆ ಕೊಳೆಯುವಿಕೆ / ಟಿಪ್ ಓವರ್ / ಗಿಡ ಬಾಗುವಿಕೆ ರೋಗದ ಲಕ್ಷಣಗಳು ::
ಈ ರೋಗವು ಪ್ರಾರಂಭಿಕ ಹಂತದ 1-4 ತಿಂಗಳ ಗಿಡಗಳಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಟಿಶ್ಯುಕಲ್ಚರ್ (ಅಂಗಾಂಶ) ಸಸಿಗಳಿಗೆ ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ಇದು ಎರ್ವಿನಿಯಾ ಕೆರಟಾವೋರಾ ಎನ್ನುವ ದುಂಡಾಣುವಿನಿಂದ ಬರುವಂತ ರೋಗ. ಮೊಟ್ಟ ಮೊದಲಾಗಿ ಈ ರೋಗವು ಬಾಳೆ ಗಡ್ಡೆಗಳಿಗೆ ತಗಲುತ್ತದೆ. ರೋಗದ ಗಡ್ಡೆಗಳು ಕಂದು ಬಣ್ಣಕ್ಕೆ ತಿರುಗಿ ಕೊಳೆಯಲು ಆರಂಭಿಸುತ್ತವೆ. ರೋಗ ತಗುಲಿದ ಗಡ್ಡೆಗಳನ್ನು ಅಡ್ಡವಾಗಿ ಸೀಳಿದಾಗ / ಕತ್ತರಿಸಿದಾಗ ಕಂದು ಬಣ್ಣಕ್ಕೆ ತಿರುಗಿದ ಬಳೆಯಾಕಾರದ ವೃತ್ತಗಳು ಕಾಣುತ್ತವೆ. ನಂತರ ಗಡ್ಡೆಯು ಪೂರ್ತಿಯಾಗಿ ಕೊಳೆತು ವಾಸನೆ ಬರುತ್ತದೆ. ಈ ಸಮಯದಲ್ಲಿ ಬಾಳೆ ಗಿಡಗಳು ಗಾಳಿಯ ಒಡೆತನದಿಂದ ಬಾಗುತ್ತವೆ. ಇವೆಲ್ಲವೂ ಭೂಮಿಯ ಒಳಭಾಗದ ಲಕ್ಷಣಗಳಾದರೆ ಮೇಲ್ಭಾಗದಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಯ ಸುತ್ತಲೂ ಸುಟ್ಟಂತೆ ಕಾಣಿಸುತ್ತವೆ ಮತ್ತು ಗಿಡದ ಮಧ್ಯಭಾಗದ ಚಿಗುರುವ ಎಲೆಯು ಸಹ ಒಣಗುತ್ತದೆ. ಇದೆಲ್ಲದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತವೆ.

ನಿವಾರಣಾ ಕ್ರಮಗಳು :
⦁ ಹೊಸದಾಗಿ ನಾಟಿ ಮಾಡುವಾಗ ರೋಗರಹಿತ ಗಡ್ಡೆಗಳನ್ನು ಉಪಯೋಗಿಸಬೇಕು.
⦁ ನಾಟಿ ಮಾಡುವ ಮುನ್ನ ಸುಡೊಮಾನಸ್ ಪ್ಲೋರಸೆನ್ಸ್ ಜೈವಿಕ ಗೊಬ್ಬರ/ಜೈವಿಕ ಜೀವಾಣುಗಳನ್ನು ಬಾಳೆ ಗಡ್ಡೆಗಳಿಗೆ ಉಪಚಾರಣೆ ಮಾಡಬೇಕು.
⦁ 0.5 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ 50 ಡಬ್ಲ್ಯೂ.ಪಿ. ರಾಸಾಯನಿಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಗೆಡ್ಡೆಯ ಸುತ್ತ ಸುರಿಯಬೇಕು. ರಾಸಾಯನಿಕವು ಗಡ್ಡೆಯ ಮೇಲ್ಪದರವನ್ನು ಹಾವರಿಸಬೇಕು.

ಪನಾಮ ಸೊರಗು ರೋಗದ ಲಕ್ಷಣಗಳು :
ಈ ರೋಗವು ಫ್ಯುಸೇರಿಯಂ ಆಕ್ಸಿಸ್ಟೋರಂ ಕ್ಯೂಬೆನ್ಸ್ ಎನ್ನುವ ಶಿಲೀಂದ್ರದಿಂದ ಬರುತ್ತದೆ. ರೋಗಾಣುಗಳು ಮಣ್ಣಿನಲ್ಲಿ ವಾಸಿಸುತ್ತವೆ. ಸಸ್ಯ ಜಂತು ಹುಳುಗಳು ಬೇರಿನಲ್ಲಿ ಗಾಯಗಳನ್ನು ಮಾಡುವುದರ ಮುಖಾಂತರ ಗಿಡದ ಒಳಗೆ ಪ್ರವೇಶಿಸುತ್ತವೆ. ಚೆನ್ನಾಗಿ ನೀರು ಬಸಿದು ಹೋಗದೆ ಇರುವಂತ ಭೂಮಿಯಲ್ಲಿ ಈ ರೋಗದ ಬಾಧೆ ಹೆಚ್ಚು. ಈ ರೋಗವು ರೋಗಪೀಡಿತ ಬಾಳೆ ಕಂದುಗಳಿಂದ ಪ್ರಸಾರವಾಗುತ್ತದೆ. ರಸತಾಳಿ ತಳಿಗಳಾದ ರಸಬಾಳೆ, ಅಮೃತಪಾಣಿ, ಮಲಬಾಗ್ ಮತ್ತು ಮರಿಬಾನ್ ತಳಿಗಳನ್ನು ಬೆಳೆಯುವಂತ ಪ್ರದೇಶಗಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ.

⦁ ಮೊದಲಿಗೆ ಗಿಡದ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಚದುರುತ್ತವೆ. ಹೀಗೆ ಚದುರಿದ ಎಲೆಗಳು ತೊಟ್ಟಿನ/ದೇಟಿನ ಹತ್ತಿರ ಮುರಿದು ಕಾಂಡಕ್ಕೆ ಸಮನಾಗಿ ನೇತಾಡುತ್ತವೆ.
⦁ ಮೇಲಿನ ಎಲೆಗಳು ಗಿಡದಲ್ಲಿ ನೇರವಾಗಿ ನಿಂತಿರುತ್ತವೆ, ನಂತರ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತವೆ.
⦁ ಕಾಂಡವನ್ನು ಅಡ್ಡ ಸೀಳಿ ನೋಡಿದಾಗ ಕಂದು ಬಣ್ಣದ ತೇಪೆಗಳು ಕಂಡು ಬರುತ್ತವೆ.
⦁ ರೋಗದ ಭಾದೆ ಜಾಸ್ತಿಯಾದಾಗ, ಕಾಂಡವು ಉದ್ದನಾಗಿ ಸೀಳುವುದು, ಕೊಳೆತ ಮೀನಿನ ವಾಸನೆ ಬರುವುದು, ಕುಂಠಿತ ಬೆಳವಣಿಗೆ ಮತ್ತು ಕಂದುಗಳು ಕೊಳೆತು ಸಾಯುವುದು ಕಂಡು ಬರುತ್ತದೆ.
⦁ ಏಲಕ್ಕಿ ಬಾಳೆ ತಳಿಗಳಿಗೆ ಈ ರೋಗದ ಬಾಧೆ ಹೆಚ್ಚು, ಡ್ವಾರ್ಪ್ ಕ್ಯಾವೆಂಡಿಶ್ ತಳಿಯ ಗಿಡಗಳಿಗೆ ಈ ರೋಗ ಬರುವುದಿಲ್ಲ.
ನಿವಾರಣಾ ಕ್ರಮಗಳು :
⦁ ರೋಗ ರಹಿತ ಕಂದುಗಳನ್ನು ಬಳಸುವುದು ಮತ್ತು ಬೇರಿಗೆ ಗಾಯಗಳಾಗದಂತೆ ನೋಡಿಕೊಳ್ಳುವುದು.
⦁ ರೋಗಪೀಡಿತ ಗಿಡಗಳನ್ನು ಕಿತ್ತು ಸುಟ್ಟುಹಾಕುವುದು.
⦁ ರೋಗ ಇರುವಂತ ಭೂಮಿಯಲ್ಲಿ ಕನಿಷ್ಠ 3-4 ವರ್ಷಗಳವರೆಗೆ ಬಾಳೆ ಬೆಳೆಯಬಾರದು.
⦁ ಕಂದುಗಳನ್ನು ನಾಟಿಮಾಡುವ ಮುನ್ನ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ಕಾರ್ಬನ್‍ಡೈಜಿಮ್ 50 ಡಬ್ಲ್ಯೂ.ಪಿ. ಬೆರೆಸಿದ ದ್ರಾವಣದಲ್ಲಿ 30 ನಿಮಿಷ ಅದ್ದಿ ನಾಟಿ ಮಾಡಬೇಕು.
⦁ ನಾಟಿ ಮಾಡಿದ ನಂತರ ರೋಗದ ಲಕ್ಷಣಗಳು ಕಂಡುಬಂದರೆ, 1 ಗ್ರಾಂ. ಕಾರ್ಬನ್‍ಡೈಜಿಮ್ 50 ಡಬ್ಲ್ಯೂ.ಪಿ. ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಒಂದು ಗಿಡಕ್ಕೆ ಸುಮಾರು 3 ಲೀಟರ್ ಸುರಿಯಬೇಕು.

       *ಜಹೀರ್ ಅಹಮದ್ ಬಿ., & ವಾಸುದೇವ ನಾಯಕ್ 
error: Content is protected !!