ಶಿವಮೊಗ್ಗ, ಡಿಸೆಂಬರ್-17 : ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ 2018 ಮುಂಗಾರು ಹಂಗಾಮಿನ ಜಿಲ್ಲೆಯ 3646 ರೈತರ 7.66 ಕೋಟಿ ರೂ. ಬೆಳೆ ವಿಮೆ ಬಾಕಿ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ. 2018ನೇ ಸಾಲಿನಲ್ಲಿ ಜಿಲ್ಲೆಯ 13557 ರೈತರಿಗೆ ರೂ. 27.39ಕೋಟಿ ವಿಮಾ ಕ್ಲೇಮನ್ನು ಯುನೈಟೆಡ್ ಇಂಡಿಯಾ ಇನ್ಸೊರೆನ್ಸ ಕಂಪನಿ ಲಿ. ಇವರು ಬಿಡುಗಡೆ ಮಾಡಬೇಕಾಗಿತ್ತು. ಈ ಪೈಕಿ ಮೊದಲನೇ ಕಂತಿನಲ್ಲಿ 10291 ರೈತರಿಗೆ ರೂ. 21.17 ಕೋಟಿಯನ್ನು ರೈತರ ಬ್ಯಾಂಕ್ ಖಾತೆಗೆ ಆರ್ ಟಿ ಜಿ ಎಸ್ ಮುಖಾಂತರ ಪಾವತಿಸಲಾಗಿತ್ತು. ಉಳಿದಂತೆ ಜಿಲ್ಲೆಯಲ್ಲಿ ಶಿಕಾರಿಪುರ, ಸೊರಬ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 3646 ರೈತರ 7.66 ಕೋಟಿ ರೂ. ಪಾವತಿಗೆ ಬಾಕಿ ಉಳಿಸಲಾಗಿತ್ತು. ಈ ಕುರಿತು ಡಿಸೆಂಬರ್ 14ರಂದು ಬೆಂಗಳೂರಿನಲ್ಲಿ ಕೃಷಿ ಇಲಾಖೆ ಆಯುಕ್ತರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಕಿ ಹಣ ತಕ್ಷಣ ಪಾವತಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಬಾಕಿ ಮೊತ್ತ 7.66ಕೋಟಿ ರೂ. ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ 2018ರ ಹಿಂಗಾರು ಹಂಗಾಮಿನ ಶಿಕಾರಿಪುರ ಮತ್ತು ಸೊರಬ ತಾಲ್ಲೂಕಿನ 516 ರೈತರಿಗೆ 17.98 ಲಕ್ಷ ರೂ. ವಿಮಾ ಕ್ಲೇಮು ಬಿಡುಗಡೆ ಆಗಿರುತ್ತದೆ. 2017ರ ಮುಂಗಾರು ಹಂಗಾಮಿನ 26963 ರೈತರ 40.28ಕೋಟಿ ಮೊತ್ತದ ವಿಮಾ ಕ್ಲೇಮನ್ನು ಯಾವುದೇ ಬಾಕಿ ಇಲ್ಲದೆ ಈಗಾಗಲೇ ಶಿವಮೊಗ್ಗ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. |