ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ ಸಾಲ ಪಡೆಯದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಇದುವರೆಗೆ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 504 ರೈತರು ಮಾತ್ರ ತಮ್ಮ ಹೆಸರು ನೊಂದಾಯಿಸಿದ್ದಾರೆ. ಇವರ ಪೈಕಿ 266ಮಂದಿ ಸಾಲ ಪಡೆದಿರುವ ರೈತರು, 238 ಸಾಲ ಪಡೆಯದ ರೈತರು ಇದ್ದು, 952ಎಕ್ರೆ ವಿಸ್ತೀರ್ಣವಿದೆ. ಇದುವರೆಗೆ ಸಾಲ ಪಡೆದ ರೈತರು ಕಡ್ಡಾಯವಾಗಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಈ ಬಾರಿ ಬೆಳೆ ವಿಮೆಯಿಂದ ತಮ್ಮನ್ನು ಕೈಬಿಡುವಂತೆ ಸಾಲ ಪಡೆದ ರೈತರು ಘೋಷಣಾ ಪತ್ರ ನೀಡಿದರೆ ಅವರನ್ನು ಕೈಬಿಡಲಾಗುವುದು. ಈ ಹಿನ್ನೆಲೆಯಲ್ಲಿ ಸಾಲ ಪಡೆಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ನೊಂದಾಯಿಸಬೇಕು ಎಂದು ಅವರು ಹೇಳಿದರು.
ಬೆಳೆ ವಿಮೆ ಸಂಸ್ಥೆಯು ತನ್ನ ಪ್ರತಿನಿಧಿಗಳನ್ನು ರೈತರ ಸಹಾಯಕ್ಕಾಗಿ ಪ್ರತಿ ತಾಲೂಕಿನಲ್ಲಿ ನಿಯೋಜಿಸಬೇಕು. ಬೆಳೆ ವಿಮೆ ನೊಂದಣಿ ಮತ್ತು ಪರಿಹಾರ ಇತ್ಯರ್ಥ ಕುರಿತಾಗಿ ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಾಮನ್ ಸರ್ವಿಸ್ ಸೆಂಟರ್‍ಗಳ ಮೂಲಕ ಸಾಲ ಪಡೆಯದ ರೈತರ ನೊಂದಣಿಯನ್ನು ಪ್ರೋತ್ಸಾಹಿಸಬೇಕು. ನೊಂದಣಿ ಸಂದರ್ಭದಲ್ಲಿ ಆಧಾರ ಲಿಂಕ್ ಇರುವ ಬ್ಯಾಂಕ್ ಖಾತೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಬ್ಯಾಂಕುಗಳಿಗೆ ಸೂಚನೆ: ಕರೋನಾ ಸಂದರ್ಭದಲ್ಲಿ ಸರ್ಕಾರ ವಿವಿಧ ಫಲಾನುಭವಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಅವರ ಸಾಲದ ಮೊತ್ತಕ್ಕೆ ಕಟಾಯಿಸಬಾರದು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದು ಜಿಲ್ಲಾಧಿಕಾರಿ ಅವರು ಬ್ಯಾಂಕರ್‍ಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಅಂತಿಮ ದಿನಾಂಕ: ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಬೆಳೆಗಳಿಗೆ ನೊಂದಾಯಿಸಲು ಆಗಸ್ಟ್ 14 ಮತ್ತು ಮುಸುಕಿನ ಜೋಳ ಬೆಳೆ ವಿಮೆ ನೊಂದಾಯಿಸಲು ಜುಲೈ 31 ಅಂತಿಮ ದಿನಾಂಕವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ಅವರು ಹೇಳಿದರು.
ಅವಧಿ ವಿಸ್ತರಣೆ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಶುಂಠಿ ಮತ್ತು ಕಾಳು ಮೆಣಸು ಬೆಳೆಯುವ ರೈತರಿಗೆ ಮುಂಗಾರು ಅವಧಿಗೆ ಹೆಸರು ನೊಂದಾಯಿಸುವ ಅವಧಿಯನ್ನು ಜುಲೈ 10ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರನ್ನು ನೊಂದಾಯಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪ್ರಚಾರ ಸಾಮಾಗ್ರಿ ಬಿಡುಗಡೆ: ಯೋಜನೆ ಕುರಿತ ಪ್ರಚಾರ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗಿಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!