ಶಿವಮೊಗ್ಗ : ಡಿಸೆಂಬರ್ 08 : ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಶಿಕ್ಷಕರು ಬೋಧನೆಯಲ್ಲಿ ನೂತನ ಪದ್ದತಿ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ನಗರದ ಕಸ್ತೂರಬಾ ಬಾಲಿಕ ಪ್ರೌಢಶಾಲೆಯ ಸಭಾಂಗಣದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಕುರಿತು ಏರ್ಪಡಿಸಲಾಗಿದ್ದ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಗಾಗಲೇ ಪರೀಕ್ಷಾ ದಿನಾಂಕ ನಿಗಧಿಯಾಗಿದ್ದು, ವಾರ್ಷಿಕ ಪರೀಕ್ಷೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ಶಾಲೆಗಳ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಸಹಶಿಕ್ಷಕರನ್ನು ವಿಶ್ವಾಸಕ್ಕೆ ಪಡೆದು, ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಹಿಂದುಳಿದ ಮಕ್ಕಳ ಕಲಿಕೆಯಲ್ಲಿ ಉತ್ಸಾಹ ಹೆಚ್ಚಿಸುವ ಪ್ರೇರಣಾದಾಯಿ ಕಾರ್ಯಸೂಚಿಗಳನ್ನು ಸಿದ್ಧಪಡಿಸಿಕೊಂಡು ಅದನ್ನು ಕಾಲಕಾಲಿಕವಾಗಿ ಅನುಸರಿಸುವಂತೆ ಸೂಚಿಸಿದರು.
ಶೀಘ್ರದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ಇದರಿಂದಾಗಿ ಚುನಾವಣಾ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳುವ ಅಗತ್ಯವೂ ಇರಲಿದೆ. ಆದ್ದರಿಂದ ಮಕ್ಕಳ ಫಲಿತಾಂಶ ಹೆಚ್ಚಿಸುವಲ್ಲಿ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವಂತೆ ಶಿಕ್ಷಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು ಈ ಅವಧಿಯಲ್ಲಿ ಎದುರಾಗುವ ಸವಾಲುಗಳನ್ನು ಸದಾ ಸನ್ನದ್ಧರಾಗುವಂತೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರಮುಖ ಘಟ್ಟ. ಈ ಹಂತದಲ್ಲಿ ಪ್ರತಿ ವಿದ್ಯಾರ್ಥಿಯು ಉತ್ತೀರ್ಣರಾಗುವಂತೆ ಹಾಗೂ ಶಿಕ್ಷಣದಿಂದ ವಿಮುಖರಾಗಿ ಸಮುದಾಯದ ಆಶಯಕ್ಕೆ ವಿರುದ್ಧವಾಗಿ ಪರಿವರ್ತನೆಗೊಳ್ಳದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಪೂರ್ಣ ಅಥವಾ ಅರೆಕಾಲಿಕವಾಗಿ ಕಾರ್ಯನಿರ್ವಹಿಸಲು ಪಿ.ಯು.ಸಿ. ವಿದ್ಯಾರ್ಹತೆ ಹೊಂದಿರುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಎಸ್.ಎಸ್.ಎಲ್.ಸಿ.ಯಲ್ಲಿನ ಪ್ರತಿ ವಿದ್ಯಾರ್ಥಿಗಳ ಕಲಿಕೆಯ ಕುರಿತು ಶಿಕ್ಷಕರು ಮಾಹಿತಿ ಹೊಂದಿರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಲಿಕೆಯಲ್ಲಿನ ಸುಧಾರಣೆಯನ್ನು ಗಮನಿಸುವುದಲ್ಲದೇ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿ, ಪರೀಕ್ಷಾ ಭಯ ಹೋಗಲಾಡಿಸಿ, ವಿಶ್ವಾಸ ಹೆಚ್ಚಿಸಬೇಕು. ಆಗಾಗ್ಗೆ ಪೋಷಕರೊಂದಿಗೆ ಚರ್ಚಿಸಬೇಕೆಂದವರು ನುಡಿದರು.
ಪಠ್ಯ ಚಟುವಟಿಕೆಗಳ ಅಭ್ಯಾಸ ಹೆಚ್ಚಿಸಿ. ಕಳೆದ ಸಾಲಿನ ಫಲಿತಾಂಶವನ್ನು ಮೀರಿ, ರಾಜ್ಯದ ಅಗ್ರಪಂಕ್ತಿಯ 05ಜಿಲ್ಲೆಗಳಲ್ಲೊಂದಾಗಿ ಗುರುತಿಸುವಂತೆ ಕ್ರಮ ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಅವರು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅಂತಹ ಮಕ್ಕಳಿಗಾಗಿ ವಿಶೇಷ ತರಗತಿಗಳನ್ನು ನಡೆಸಿ. ಅಲ್ಲದೇ ವಿಶೇಷ ಕ್ರಿಯಾಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಮಕ್ಕಳ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಆಗಾಗ್ಗೆ ಕಿರುಪರೀಕ್ಷೆಗಳನ್ನು ನಡೆಸಿ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.
ಈ ಕಾಯಕ್ರಮದಲ್ಲಿ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಅಶೋಕ ಕಾಮತ್ ಅವರು ಶಾಲಾ ನಾಯಕತ್ವ ಮತ್ತು ಫಲಿತಾಂಶ ಸುಧಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಹ ನಿರ್ದೇಶಕ ಮಂಜುನಾಥ್, ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಲೋಕೇಶಪ್ಪ, ಉಮೇಶ್, ರಾಮಪ್ಪಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.