ಶಿವಮೊಗ್ಗ, ಡಿಸೆಂಬರ್ 24 : ಬಿ.ಪಿ.ಎಲ್. ಕುಟುಂಬದ ಸದಸ್ಯರುಗಳಿಗೆ ರೂ.5.00ಲಕ್ಷದವರೆಗೆ ಹಾಗೂ ಎ.ಪಿ.ಎಲ್. ಕುಟುಂಬದ ಸದಸ್ಯರಿಗೆ ರೂ.1.5ಲಕ್ಷದವರೆಗೆ ಆರೋಗ್ಯ ರಕ್ಷಣೆ ನೀಡುವಂತಹ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡನ್ನು ವಿತರಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಅವರು ಇಂದು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿರುವ ಅವರು, ಈವರೆಗೆ ಜಿಲ್ಲೆಯಲ್ಲಿ ಕೇವಲ 3-4ಲಕ್ಷ ಜನರು ಮಾತ್ರ ಆರೋಗ್ಯ ಕಾರ್ಡಿನ ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನೂ 10ಲಕ್ಷಕ್ಕೂ ಹೆಚ್ಚಿನ ಜನ ಈ ಕಾರ್ಡ್ನ್ನು ಹೊಂದಬೇಕೆಂಬ ಸದುದ್ದೇಶದಿಂದ ಪ್ರೇರಣಾ ಟ್ರಸ್ಟ್ ಈ ಕಾರ್ಡನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸುತ್ತಿದ್ದು, ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ., ಸಿ.ಎಸ್.ಸಿ. ಸೆಂಟರ್ಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಉಚಿತವಾಗಿ ಕಾರ್ಡ್ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೆ ಡಿಸೆಂಬರ್ 25ರಂದು ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ ನಿಮಿತ್ತ 4ದಿನಗಳ ಈ ಅಭಿಯಾನಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9.00ಕ್ಕೆ ಕಾರ್ಡ್ ವಿತರಣೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಪ್ರೇರಣಾ ಟ್ರಸ್ಟ್ ಸಹಯೋಗದೊಂದಿಗೆ ಉಚಿತವಾಗಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ : ಬಿ.ವೈ.ರಾಘವೇಂದ್ರ
