ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಶನಿವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರೊಂದಿಗೆ ಜಿಲ್ಲೆಯ ನೆರೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ ಬಳಿಕ ಅವರು ರಾಮಣ್ಣ ಶ್ರೇಷ್ಟಿ ಪಾರ್ಕ್‍ನಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಸಂತ್ರಸ್ತರೊಂದಿಗೆ ಮಾತನಾಡಿದರು. ಪ್ರವಾಹ ಪೀಡಿತರಿಗೆ ಸರ್ಕಾರ ಎಲ್ಲಾ ನೆರವು ಒದಗಿಸಲಿದ್ದು, ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರವಾಹ ಹಾನಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದರು.

ಆ ಬಳಿಕ ಅವರು ನೆರೆ ನೀರು ಆವರಿಸಿರುವ ಕುಂಬಾರ ಗುಂಡಿ, ಭಾರತಿ ಕಾಲೊನಿ, ವಿದ್ಯಾನಗರ, ನಂಜಪ್ಪ ಕಾಲೊನಿ, ಕವಲಗುಂದಿ ಹಾಗೂ ಕೋಡಿ ಒಡೆದು ನಷ್ಟ ಸಂಭವಿಸಿರುವ ಭದ್ರಾವತಿ ತಾಲೂಕಿನ ಜನ್ನಾಪುರ ಕೆರೆ, ಅಪ್ಪರ್ ಹುತ್ತಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು. ಬಳಿಕ ಅಪ್ಪರ್ ಹುತ್ತಾದಲ್ಲಿನ ಒಕ್ಕಲಿಗರ ಸಭಾ ಭವನದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಸಂತ್ರಸ್ತರೊಂದಿಗೆ ಊಟ ಸೇವಿಸಿದರು.

ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!