ಸಕಲ ಸಿದ್ದತೆಯೊಂದಿಗೆ ಸಜ್ಜುಗೊಂಡಿರುವ ನಗರ
ಶಿವಮೊಗ್ಗ, ಫೆಬ್ರವರಿ 26,: ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಫೆ.27 ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ವಿಮಾನ ನಿಲ್ದಾಣದೊಂದಿಗೆ ಇತರೆ ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿಯವರು ನೆರವೇರಿಸುವರು.
ವಿಮಾನ ನಿಲ್ದಾಣ ಲೋಕಾರ್ಪಣೆಗೆ ಹಾಗೂ ಇತರೆ ಕಾಮಗಾರಿಗಳ ಲೋಕಾರ್ಪಣೆಗೆ ಸರ್ವ ರೀತಿಯಲ್ಲಿ ಸಿದ್ದತೆ ಮಾಡಲಾಗಿದ್ದು, ಇಡೀ ನಗರವೇ ಪ್ರಧಾನಿಯವರ ಸ್ವಾಗತಕ್ಕಾಗಿ ಸಿಂಗರಿಸಿಕೊಂಡು ಸಜ್ಜಾಗಿದೆ.
ಪ್ರಧಾನಿಯವರ ಕಾರ್ಯಕ್ರಮಕ್ಕೆ 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 02 ಕಡೆ ಊಟದ ವ್ಯವಸ್ಥೆ ಇದ್ದು ಒಂದೊಂದು ಕಡೆ 100 ಕೌಂಟರ್‍ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ 04 ಕಡೆ ವಿಶಾಲವಾದ ಪ್ರಾಜೆಕ್ಟರ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲ ಕಡೆ ಸಿಸಿ ಕ್ಯಾಮೆಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರೆಲ್ಲರೂ ಬೆಳಿಗ್ಗೆ 10 ಗಂಟೆಯ ಒಳಗೆ ಕಾರ್ಯಕ್ರಮದ ಆವರಣದೊಳಗೆ ಬರಬೇಕು. ವಾಹನಗಳ ನಿಲುಗಡೆಗೆ ಶಿವಮೊಗ್ಗ-ಸಂತೇಕಡೂರು ರಸ್ತೆಯ ಎರಡೂ ಕಡೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಯಾರೂ ಕೂಡ ಕಪ್ಪು ಬಣ್ಣದ ಬಟ್ಟೆ, ಕರ್ಚೀಫ್‍ಗಳನ್ನು ಧರಿಸಿ ಬರುವಂತಿಲ್ಲ. ನೀರಿನ ಬಾಟಲ್, ಹ್ಯಾಂಡ್ ಬ್ಯಾಗ್ ಮತ್ತು ಕಪ್ಪು ಕರ್ಚೀಫ್‍ಗಳನ್ನು ತರುವಂತಿಲ್ಲ. ಮೊಬೈಲ್ ಮತ್ತು ಪರ್ಸ್‍ಗೆ ಮಾತ್ರ ಅವಕಾಶ ಇರುತ್ತದೆ. ಎರಡು ಹಂತದ ತಪಾಸಣೆ ಇರುತ್ತದೆ.
ದಿನಾಂಕ: 26-06-2023 ಮತ್ತು 27-02-2023 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್ ಸರ್ಕಲ್‍ನಿಂದ ಎನ್.ಆರ್.ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್‍ವರೆಗೆ, ಮತ್ತೂರು-ಮಂಡೇನಕೊಪ್ಪ-ಸೋಗಾನೆ ವಿಮಾನ ನಿಲ್ದಾಣದವರೆಗೆ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚಿಸಲಾಗಿದೆ.
ದಿನಾಂಕ 27-02-2023 ರಂದು ಸಾರ್ವಜನಿಕ ವಾಹನ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಮಾರ್ಗವನ್ನು ನಿಗದಿಗೊಳಿಸಲಾಗಿದೆ.
ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳು:
ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ರೂ.449.22 ಕೋಟಿ ವೆಚ್ಚದಲ್ಲಿ ಎಟಿಆರ್ 72 ರಿಂದ ಏರ್‍ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ ರನ್‍ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣ
ಒಟ್ಟು ರೂ.896.16 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ, ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ ರೂ.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೂ.2 ಲಕ್ಷ ಲೀಟರ್ ಸಾಮಥ್ರ್ಯದ ಹಾಲು, ಮೊಸಲು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಉದ್ಘಾಟನ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ರೂ.8 ಕೋಟಿ ವೆಚ್ಚಲ್ಲಿ ನಿರ್ಮಿಸಿರುವ ಮ್ಯಾಮ್‍ಕೋಸ್‍ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡ.
ಶಂಕುಸ್ಥಾಪನೆಗೊಳ್ಳುವ ಯೋಜನೆಗಳು:
ರೂ.995 ಕೋಟಿ ವೆಚ್ಚದಲ್ಲಿ 103 ಕಿ.ಮೀ ಉದ್ದದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಶಂಕುಸ್ಥಾಪನೆ, ರೂ.97.18 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ರೂ.862 ಕೋಟಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಮತ್ತು ರೂ.91.50 ಕೋಟಿ ಮೊತ್ತದ ಕಾಮಗಾರಿ ಲೋಕಾರ್ಪಣೆ
ರೂ.66.44 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್ ನಿರ್ಮಾಣ, ರೂ.96.20 ಕೋಟಿ ವೆಚ್ಚದಲ್ಲಿ ರಾ.ಹೆ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ. ರೂ.56.56 ಕೋಟಿ ವೆಚ್ಚದಲ್ಲಿ ರಾ.ಹೆ 169 ಶಿವಮೊಗ್ಗ-ಮಂಗಳೂರು ರಸ್ತೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ದಿ.