ಶಿವಮೊಗ್ಗ, ಜೂನ್.5 : ದೇಶದ ಪ್ರತಿಯೊಬ್ಬ ಪ್ರಜೆಯು ಪರಿಸರ ರಕ್ಷಣೆಗೆ ಪಣ ತೊಟ್ಟು ಕಾರ್ಯನಿರ್ವಹಿಸಿದಾಗ ಮಾತ್ರ ಈಗಿರುವ ಅರಣ್ಯ ಸಂಪತ್ತನ್ನು ರಕ್ಷಿಸಿಕೊಂಡು ಗಿಡಗಳನ್ನು ಬೆಳೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ನಗರದ ಹೊರವಲಯದ ಮುದ್ದಿನಕೊಪ್ಪ ಟ್ರೀ ಪಾರ್ಕನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾಡಳಿತದಿಂದ ಅನೇಕ ಪರಿಸರ ಕುರಿತಾದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಆದರೆ ಜನರು ಇವುಗಳಿಂದ ತಿಳುವಳಿಕೆ ಮೂಡಿಸಿಕೊಂಡು ಪರಿಸರ ರಕ್ಷಣೆಯೊಂದಿಗೆ ಪ್ಲಾಸ್ಟಿಕ್ ಮುಕ್ತವಾದ ಜಿಲ್ಲೆ ಹಾಗೂ ದೇಶ ನಿರ್ಮಾಣ ಮಾಡಬೇಕಿದೆ ಎಂದು ಅವರು ಹೇಳಿದರು.
ಪರಿಸರ ನಾಶದಿಂದ ಆಗುತ್ತಿರುವ ಪರಿಣಾಮ ಜಿಲ್ಲೆಯ ಮೇಲೂ ಬೀರಿದ್ದು ಈಗಾಗಲೇ ತಾಪಮಾನದಲ್ಲಿ ಹೆಚ್ಚಳ, ನೀರಿನ ಅಭಾವ ಕಂಡುಬಂದಿದೆ. ಇನ್ನಾದರು ಜನತೆ ಎಚ್ಚೆತ್ತುಕೊಳ್ಳದೆ ಹೋದರೆ ಇದಕ್ಕಿಂತಲೂ ಅಪಾಯದ ಸ್ಥಿತಿಗೆ ತಲುಪಲಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶೇಕಡ 22ರಷ್ಟಿರುವ ಅರಣ್ಯ ಪ್ರದೇಶವನ್ನು ಹೆಚ್ಚಿಗೆ ಮಾಡಲು ಇಂದು ಸಾಧ್ಯವಿಲ್ಲ. ಆದರೆ ಮನೆಯ ಸುತ್ತಮುತ್ತ, ರಸ್ತೆಗಳ ಅಕ್ಕ-ಪಕ್ಕ ಗಿಡಗಳನ್ನು ಬೆಳೆಸುವ ಮೂಲಕ ಇರುವ ಪ್ರದೇಶಗಳನ್ನ ಹಸಿರುಗೊಳಿಸ ಬಹುದು. ಪ್ರತಿಯೊಬ್ಬರು ವರ್ಷಕ್ಕೊಂದು ಗಿಡ ಬೆಳೆಸಿದರೆ ಸಾಕು ಅದು ಪ್ರಕೃತಿಗೆ ಕೊಡುವ ದೊಡ್ಡ ಕೊಡುಗೆಯಾಗಿರುತ್ತದೆ ಎಂದು ಅವರು ಸಲಹೆ ನೀಡಿದರು.
ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯಿಂದ ಸಾಂಕೇತಿಕವಾಗಿ ಇಂದು ಗಿಡಗಳನ್ನು ನೆಡುತ್ತಿದ್ದು ಮಳೆ ಆರಂಭವಾದ ನಂತರ ಇನ್ನು ಹೆಚ್ಚಿನ ಗಿಡಗಳನ್ನು ನೆಡಲು ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ ಎಂದು ಅವರು ತಿಳೀಸಿದರು.
ನಂತರ ಜಿಲ್ಲೆಯ ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಎ.ಎಸ್ ಚಂದ್ರಶೇಖರ ಮಾತನಾಡಿ ಪ್ರತಿ ಆರು ನಿಮಿಷಕ್ಕೆ ಆರು ಟ್ರಕ್ ಲೋಡಿನಷ್ಟು ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ. ಇದರಲ್ಲಿ ನಮ್ಮ ಪಾಲು ಇದ್ದು ಎಚ್ಚರಿಕೆ ವಹಿಸಬೇಕು ಎಂದರು.
ಜನತೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಬೇಕು, ಇದಕ್ಕೆ ಸರ್ಕಾರ ಸಹ ಮುಂದಾಗಬೇಕು. ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ವಾಹನಗಳನ್ನು ಸಂಪೂರ್ಣ ವಿದ್ಯುತ್ ಚಾಲಿತವಾಗುವಂತೆ ಮಾಡಬೇಕು ಇದರಿಂದ ವಾಯುಮಾಲಿನ್ಯದ ಪ್ರಮಾಣ ತಗ್ಗಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ ಹಿರೇಮಠ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿಇಓ ಶಿವರಾಮೇಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್ ಮರಿಯಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!