ಶಿವಮೊಗ್ಗ ನವೆಂಬರ್ 07 : ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ವಿವಿಧ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಪೌರಕಾರ್ಮಿಕರ ಅದಾಲತ್ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ವೃತ್ತಿ ನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ವೇತನ, ಪಿ.ಎಫ್. ಇಎಸ್‍ಐ, 10 ವರ್ಷ, 15 ವರ್ಷ ಸೇರಿದಂತೆ ಟೈಂಬಾಂಡ್ ವೇತನ ಬಡ್ತಿ, ಮೆಡಿಕಲ್ ಬಿಲ್ ಹೀಗೆ ಅವರ ವಿವಿಧ ರೀತಿಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಲವು ಪೌರಕಾರ್ಮಿಕರಿಗೆ ತಿಳಿದಿಲ್ಲ. ಈ ಕುರಿತು ಅರಿವು ಮೂಡಿಸಲು ಹಾಗೂ ಅವರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಂದ ಪೌರಕಾರ್ಮಿಕರ ಸಮಸ್ಯೆಗಳ ಪಟ್ಟಿ ಪಡೆದು ಡಿಸೆಂಬರ್ ಕೊನೆಯ ವಾರದಲ್ಲಿ ‘ಪೌರಕಾರ್ಮಿಕರ ಅದಾಲತ್’ ಏರ್ಪಡಿಸುವಂತೆ ಸೂಚನೆ ನೀಡಿದರು.
ಸಮಿತಿ ಸದಸ್ಯರಾದ ಚಿನ್ನಯ್ಯರವರು ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ಮತ್ತು ಇನ್ನಿತರ ಕಡೆ ಪೌರಕಾರ್ಮಿಕರು ನೇರವಾಗಿ ಮ್ಯಾನ್‍ಹೋಲ್ ಒಳಗೆ ಇಳಿದು ಕೆಲಸ ಮಾಡುತ್ತಿದ್ದಾರೆಂಬ ದೂರಿನ ಕುರಿತು ಜಿಲ್ಲಾಧಿಕಾರಿಗಳು, ಈಗಾಗಲೇ ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಇನ್ನೊಮ್ಮೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಬಗ್ಗೆ ಪರಿಶೀಲಿಸಬೇಕು, ಒಂದು ವೇಳೆ ಇದು ನಡೆಯುತ್ತಿದ್ದರೆ ಸಂಬಂಧಿಸಿದ ಸೂಪರ್‍ವೈಸರ್ ಮತ್ತು ಕಂಟ್ರಾಕ್ಟರ್ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಹೊರಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ಸಂಬಂಧಿಸಿ ಏಜೆನ್ಸಿಯವರು ಪೌರಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಕೆಲವೆಡೆ ನೀಡಿಲ್ಲವೆಂದು ಸಮಿತಿ ಸದಸ್ಯರು ದೂರಿದ್ದು, ಈ ಕೂಡಲೇ ಎಲ್ಲ ಗುತ್ತಿಗೆದಾರರು ತಮ್ಮ ನೌಕರರಿಗೆ ಗುರುತಿನ ಚೀಟಿಯನ್ನು ನೀಡಬೇಕೆಂದು ಸೂಚಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೇರವಾಗಿ ಮಲಮೂತ್ರಗಳನ್ನು ತೆರೆದ ಚರಂಡಿಗೆ ಬಿಡುತ್ತಿರುವ ಕುರಿತು ಸಮಿತಿ ಸದಸ್ಯರು ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರಿದರು. ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಒಂದು ತಂಡ ರಚಿಸಿ, ಚರಂಡಿಗೆ ಮಲಮೂತ್ರಗಳನ್ನು ಬಿಡುತ್ತಿರುವ ಬೀದಿಗಳಿಗೆ ಭೇಟಿ ನೀಡಿ ದಂಡ ವಿಧಿಸುವಂತೆ ಹಾಗೂ ಹೀಗೆ ಮಾಡದಂತೆ ಅರಿವು ಹಾಗೂ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ಭದ್ರಾವತಿಯ ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ತೆಗೆದುಹಾಕಿದ ಸಂಬಂಧ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಪಾವತಿಸಲಾಗುತ್ತಿರುವ ಪಿಎಫ್, ಇಎಸ್‍ಐ ಮತ್ತು ವೇತನದ ಕುರಿತು ಪರಿಶೀಲಿಸುವಂತೆ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮಗಳಿಂದ ಪೌರಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ಒದಗುವಂತೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಕ್ಟ್ರಾಟ್ರಸ್‍ಗಳಲ್ಲಿ ವಾಸವಾಗಿರುವ ಅರ್ಹ ಪೌರಕಾಮಿರ್ಕಕರನ್ನು ಗುರುತಿಸುವಲ್ಲಿ ವಿಳಂಬ ಮಾಡಲಾದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಿಳಿಸಿದರು.
ಸಮಿತಿ ಸದಸ್ಯರಾದ ಚಿನ್ನಯ್ಯ, ಭದ್ರಾವತಿಯ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ವಸತಿ ಗೃಹಗಳನ್ನು ಶೀಘ್ರವಾಗಿ ಲೋಕಾರ್ಪಣೆ ಮಾಡಿಸಬೇಕೆಂದು ಕೋರಿದರು. ಭಾನುಪ್ರಕಾಶ್ ಮತ್ತು ಚಿನ್ನಯ್ಯ ಕ್ಲೀನರ್ಸ್, ಲೋಡರ್ಸ್ ಇತರೆ ನೇಮಕಾತಿಗೆ ಮಂಜೂರಾತಿ ದೊರೆತಿದ್ದು ಅರ್ಹರನ್ನು ನೇಮಕಾತಿ ಮಾಡುವ ಮೂಲಕ ಪಾರದರ್ಶಕತೆ ಅನುಸರಿಸಬೇಕೆಂದರು ಮನವಿ ಮಾಡಿದರು ಸಭೆಯಲ್ಲಿ
ಸಮಿತಿ ಸದಸ್ಯೆ ಶಾಂತಕುಮಾರಿ, ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಜ್ಜಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.