ಶಿವಮೊಗ್ಗ : ಜೂನ್ 20 : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಕನ್ನಡ ಕೃತಿಗಳನ್ನು ಆಹ್ವಾನಿಸಿದೆ.
ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2018ರ ಜನವರಿಯಿಂದ ಡಿಸೆಂಬರ್ ಮಾಹೆಯೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ-2018 ಎಂದು ಅಚ್ಚಾಗಿರಬೇಕು.
ಕಾವ್ಯ(ವಚನಗಳು ಮತ್ತು ಹನಿಗವನಗಳು ಸೇರಿ), ಯುವಕವಿಗಳ ಪ್ರಥಮ ಕವನ ಸಂಕಲನ(ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ-30ವರ್ಷದೊಳಗಿನ ಯುವಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತಪ್ರತಿಯನ್ನು ಕಳುಹಿಸಿಕೊಡಬೇಕು. ಕಾದಂಬರಿ, ಸಣ್ಣಕತೆ, ನಾಟಕ, ಲಲಿತಪ್ರಬಂಧ(ಹರಟೆ ಮತ್ತು ವಿನೋದ ಸಾಹಿತ್ಯ), ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ಆತ್ಮಕತೆ, ಗ್ರಂಥ ಸಂಪಾದನೆ(ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ(ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜಿನಿಯರಿಂಗ್, ವೈದ್ಯ, ಭೂ ಖಗೋಳ, ಗೃಹ ವಿಜ್ಞಾನ, ಪರಿಸರ) ಮಾನವಿಕ(ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ), ಸಂಶೋಧನೆ(ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕøತಿಗಳಿಗೆ ಸಂಬಂಧಿಸಿದ ಸಂಶೋಧನೆ), ವೈಚಾರಿಕ/ಅಂಕಣ ಬರಹ, ಅನುವಾದ-ಸೃಜನ-(ಕಾದಂಬರಿ, ಕಾವ್ಯ, ಸಣ್ಣಕತೆ, ನಾಟಕ, ಲಲಿತಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ), ಸೃಜನೇತರ ಸಾಹಿತ್ಯ-(ಶಾಸ್ತ್ರ ಸಾಹಿತ್ಯ, ಸಾಹಿತ್ಯ ವಿಮರ್ಶೆ), ಅನುವಾದ-2-(ಸೃಜನ/ಸೃಜನೇತರ) ಕನ್ನಡದಿಂದ ಅನ್ಯಭಾಷೆಗೆ ಅನುವಾದಗೊಂಡ ಕೃತಿ, ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ : 2018ರಲ್ಲಿ ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಯೆಂದು ಖಾತರಿಪಡಿಸುವ ದೃಢೀಕರಣ ಪತ್ರ ಲಗತ್ತಿಸಬೇಕು. ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮುಂತಾದ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದು.
ಇದಲ್ಲದೇ ವಿಶೇಷ ಪುರಸ್ಕಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಮುದ್ರಣ-ಮಾಧ್ಯಮ ಪುರಸ್ಕಾರ –(ದಿನಪತ್ರಿಕೆ/ವಾರಪತ್ರಿಕೆ/ಮಾಸಪತ್ರಿಕೆ/ತ್ರೈಮಾಸಿಕ-ಸಾಹಿತ್ಯಕ್ಕೆ ನೀಡಿದ ಸ್ಥಾನ ಹಾಗೂ ಮೌಲ್ಯವನ್ನು ಅನುಲಕ್ಷಿಸಿ), ಡಿಜಿ ವಾಙ್ಮಯ ಪುರಸ್ಕಾರ-(ಜಾಲತಾಣಗಳು/ಬ್ಲಾಗ್‍ಗಳು/ಸಾಮಾಜಿಕ ತಾಣ(ಟ್ವಿಟರ್/ಫೇಸ್‍ಬುಕ್), ಯುಟ್ಯೂಬ್-ಇವುಗಳಲ್ಲಿ ಸಾಹಿತ್ಯಕ್ಕೆ ನೀಡಿದ ಸ್ಥಾನ ಹಾಗೂ ಮೌಲ್ಯವನ್ನು ಅನುಲಕ್ಷಿಸಿ), ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪಾದಕರು ಈ ಪುರಸ್ಕಾರಗಳಿಗೆ ತಮ್ಮ ಮಾಧ್ಯಮಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸ್ಥಾನ ಹಾಗೂ ಮೌಲ್ಯದ ಹಿನ್ನೆಲೆಯಲ್ಲಿ ವಿವರಣೆಗಳೊಂದಿಗೆ ಸಲ್ಲಿಕೆಯನ್ನು ನೀಡಬಹುದಾಗಿದೆ.
ಮರುಮುದ್ರಣವಾದ ಪುಸ್ತಕಗಳು, ಜಾನಪದ ಕೃತಿಗಳು, ಪಿ.ಹೆಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿಪುರಸ್ಕøತ ಸಾಹಿತಿಗಳ ಕೃತಿಗಳು, ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು, ಒಂದೇ ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೆ ಪ್ರಕಾರದಲ್ಲಿ ಪ್ರಕಟಿತ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ. ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ-ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯಲು ಅವಕಾಶವಿದೆ.
ಆಸಕ್ತ ಬರಹಗಾರರು ನಿಗಧಿಪಡಿಸಿದ ಅವಧಿಯಲ್ಲಿ ಪ್ರಕಟವಾದ ತಲಾ 4ಕೃತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ನೋಂದಾಯಿತ ಅಂಚೆ ಅಥವಾ ಕೋರಿಯರ್ ಮೂಲಕ ಅಥವಾ ಖುದ್ದಾಗಿ 2019ರ ಜುಲೈ 10ರೊಳಗಾಗಿ ಸಲ್ಲಿಸಬಹುದಾಗಿದೆ. ಲೇಖಕರು ಕೃತಿಯ ಲಕೋಟೆಯ ಮೇಲೆ ಯಾವ ಪ್ರಕಾರಕ್ಕೆ ಸೇರಿದೆ ಎಂಬುದನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.