ಶಿವಮೊಗ್ಗ, ಜುಲೈ-21: ಕರೋನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‍ಗಳ ವ್ಯಾಪ್ತಿಯಲ್ಲಿ ಜುಲೈ 23ರ ಬೆಳಿಗ್ಗೆ 5ಗಂಟೆಯಿಂದ ಜು.30ರ ಬೆಳಿಗ್ಗೆ 5ರವರೆಗೆ ಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.
ಹಳೆ ಶಿವಮೊಗ್ಗ ಕ್ಲಸ್ಟರ್‍ನಲ್ಲಿ ಬರುವ ವಾರ್ಡ್ ಸಂಖ್ಯೆ 22, 23, 29 ಮತ್ತು 30 ಹಾಗೂ ವಾರ್ಡ್ ಸಂಖ್ಯೆ 12, 13 ಮತ್ತು 33ರಲ್ಲಿನ ಭಾಗಶಃ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಜಾರಿಯಾಗಲಿದೆ. ಕರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಬೆಕ್ಕಿನ ಕಲ್ಮಠ ಬಿ.ಹೆಚ್.ರಸ್ತೆ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್ ರಸ್ತೆಯ ತುಂಗಾ ಹೊಸ ಸೇತುವೆವರೆಗೆ ಬರುವಂತಹ ಪ್ರದೇಶದಲ್ಲಿ ಜಾರಿಯಾಗಲಿದೆ.
ಈ ಪ್ರದೇಶದಲ್ಲಿನ ಸಾರ್ವಜನಿಕರು ಈ ಅವಧಿಯಲ್ಲಿ ಸದರಿ ಪ್ರದೇಶದಿಂದ ಹೊರಗೆ ಹೋಗುವುದನ್ನು ಹಾಗೂ ಬೇರೆ ಪ್ರದೇಶದಲ್ಲಿನ ಸಾರ್ವಜನಿಕರು ಸದರಿ ಪ್ರದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಆದರೆ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಮತ್ತು ಹಾಲು ಮಾರಾಟ ಕೇಂದ್ರಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ತರಕಾರಿ, ದಿನಸಿ ಮತ್ತು ಹಣ್ಣು ಮಾರಾಟ ಕೇಂದ್ರಗಳಿಗೆ ಬೆಳಿಗ್ಗೆ 5ರಿಂದ ಬೆ.10ರವರೆಗೆ ವಿನಾಯಿತಿ ನೀಡಲಾಗಿದ್ದು, ಇತರ ಎಲ್ಲಾ ಅಂಗಡಿ ಮುಂಗಟ್ಟುಗಳ ವ್ಯವಹಾರವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.