ಪಾರ್ಥೇನಿಯಂ ಸಸ್ಯವನ್ನು ಪ್ರಾಣಿಗಳು ತಿನ್ನುವ ಮೂಲಕ ಪಾರ್ಥೇನಿನ್ ಹಾಗೂ ಆಲ್ಕಲೈಡ್ ಎಂಬ ರಾಸಾಯನಿಕ ಅಂಶವು ಮಾಂಸಾಹಾರ ಮತ್ತು ಹಾಲಿನ ಮೂಲಕ ಮನುಷ್ಯನ ಆಹಾರ ಚಕ್ರ ಸೇರುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರ್ ತಿಳಿಸಿದರು.
ನಗರದ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾಯೋಜನೆಗಳ ಘಟಕ ಇವರು ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಪಾರ್ಥೇನಿಯಂ ಜಾಗೃತಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದು ಪಾರ್ಥೇನಿಯಂ ಭಾರತದ 35 ದಶಲಕ್ಷ ಹೆಕ್ಟರ್ ಭೂಮಿಯನ್ನು ವ್ಯಾಪಿಸಿದ್ದು ಜಾನುವಾರುಗಳ ಮೇವಿನಲ್ಲಿ ಬೆರೆತು ಅವುಗಳ ದೇಹ ಪ್ರವೇಶಿಸಿ ಹಾಲು ವಿಷವಾಗಿ ಪರಿವರ್ತಿಸುವಂತೆ ಮಾಡುತ್ತಿದೆ. ನಮ್ಮದೇಶ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹಾಲಿನಲ್ಲಿ ಕಂಡುಬರುವ ಈ ರಾಸಾಯನಿಕದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿರಸ್ಕರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ಪಾರ್ಥೇನಿಯಂ ಮುಕ್ತ ಪರಿಸರ ಸೃಷ್ಟಿಸಲು ಮುಂದಾಗಬೇಕು ಎಂದು ಅವರು ಕರೆಕೊಟ್ಟರು.ಸಾಧ್ಯವಾದಷ್ಟು ಮಟ್ಟಿಗೆ ಪಾರ್ಥೇನಿಯಂ ಸಸ್ಯವನ್ನು ನಾಶಗೊಳಿಸುವ ಮೂಲಕ ಪರಿಸರ ಹಾಗೂ ಆಹಾರ ಚಕ್ರವನ್ನು ಸ್ವಸ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನಾಧಿಕಾರಿ ಡಾ. ಎಂ.ಎಂ ವೆಂಕಟೇಶ್, ಡಾ. ಎಂ ಧೂಳಪ್ಪ, ವಿದ್ಯಾರ್ಥಿ ಸಲಹೆಗಾರರಾದ ಡಾ. ಪಿ. ಶೀಲಾ ಹಾಗೂ ಡಾ. ಜಿ. ಎಂ ಸತೀಶ್ ಉಪಸ್ಥಿತರಿದ್ದರು.