

ತೀರ್ಥಹಳ್ಳಿ ತಾಲೂಕಿನ ಅರಗ ಗ್ರಾಮದಲ್ಲಿ ಇತ್ತೀಚೆಗೆ ಸಸ್ಯಜನ್ಯ ವಿಷಬಾಧೆಯಿಂದ ಕೆಲವು ಜಾನುವಾರುಗಳು ಮರಣವನ್ನಪ್ಪಿದ್ದು ಈ ಕುರಿತು ಜಾನುವಾರು ನಿಗೂಢ ಕಾಯಿಲೆ ಸಂಶೋಧನಾ ಕೇಂದ್ರ, ಶಿವಮೊಗ್ಗ ಇದರ ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು ಮತ್ತು ಸಸ್ಯಜನ್ಯ ವಿಷಬಾಧೆಯಲ್ಲಿ ತಜ್ಞರಾದ ಡಾ: ಎನ್.ಬಿ.ಶ್ರೀಧರ ಮತ್ತು ಅವರ ತಂಡ ತಪಾಸಣೆ ನಡೆಸಿತು. ಜಾನುವಾರುಗಳು ಮರಣ ಹೊಂದಿದ್ದು ಕಡಿದು ಹಾಕಿದ ಬಸರಿಮರದ ಎಲೆಗಳನ್ನು ಜಾನುವಾರುಗಳು ಅಕಸ್ಮಾತ್ ತಿಂದು ಮರಣವನ್ನಪ್ಪಿದ್ದು, ಈ ಕುರಿತು ಜಾನುವಾರು ಪಾಲಕರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದರೂ ಸಹ ಆಗಾಗ ಈ ರೀತಿಯ ವಿಷಬಾಧೆಯ ಪುನರಾವರ್ತನೆ ನಡೆಯುತ್ತಿದೆ ಹಾಗೂ ಈ ಕುರಿತು ಮಲೆನಾಡಿನ ಜಾನುವಾರು ಪಾಲಕರಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದು ಬಸರಿ ಸೊಪ್ಪಿನ ವಿಷಬಾಧೆ ಮತ್ತು ಚಿಕಿತ್ಸೆ ಕಂಡು ಹಿಡಿದ ಸಂಶೋಧಕ ಮತ್ತು ವಿಜ್ಞಾನಿ ಡಾ:ಎನ್.ಬಿ. ಶ್ರೀಧರ್ ತಿಳಿಸಿದರು.
ಅಲ್ಲದೇ ತೀರ್ಥಹಳ್ಳಿ ತಾಲೂಕಿನ ವಿವಿಧ ಹಳ್ಳಿಗಳ ಕಳೆದ ಒಂದು ವರ್ಷದಿಂದ “ಅನುತ್ಪಾದಕತೆಯಿಂದ ಉತ್ಪಾದಕತೆಯೆಡೆಗೆ” ಸಂಶೋಧನಾ ಯೋಜನೆಯಡಿ ತಪಾಸಣೆ ಮಾಡಿ ಅನುಸರಣೆ ಮಾಡಿದ ಬಹುತೇಕ ಜಾನುವಾರುಗಳು ಉತ್ಪಾದಕವಾಗಿದ್ದು, ಈ ಸಂಶೋಧನಾ ಯೋಜನೆಯ ಇನ್ನೂ ಹೆಚ್ಚಿನ ಪ್ರಯೋಜನವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿಧ ವಿಷಕಾರಿ ಮತ್ತು ಔಷಧ ಗಿಡಗಳನ್ನು ಗುರುತಿಸುವ ಕಾರ್ಯ ನಡೆಸಲಾಯಿತು.
ಕೃಷಿಕರಾದ ಶ್ರೀ ಸುರೇಶ್ ಹಂಸಗಾರು, ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಮತ್ತು ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ ಇವರ ಸಹಕಾರದಿಂದ ವಿವಿಧ ರೈತರ ಜಾನುವಾರುಗಳ ವಿವಿಧ ಸಮಸ್ಯೆಗಳಿಗೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು.
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡಾ: ಸತೀಶ್, ಡಾ:ಮಣಿಕಾಂತ್ ಮತ್ತಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳಾದ ಡಾ: ಅರುಣ್ ಕುಮಾರ್, ಡಾ: ಯುವರಾಜ ಹೆಗ್ಡೆ ಇವರು ಇವರು ಸಹಕರಿಸಿದರು.