ಕರ್ನಾಟಕ ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗ ವತಿಯಿಂದ ಸ್ವಚ್ಛ ಭಾರತ್ ಅಭಿಯಾನದಡಿ ಶಿವಮೊಗ್ಗದ ಸಕ್ರೆಬೈಲ್‍ನ ಆನೆ ಬಿಡಾರದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ಲಾಸ್ಟಿಕ್ ಒಂದು ಮಾರಕ ಸಮಸ್ಯೆಯಾಗಿ ಇಂದು ತಲೆಯೆತ್ತಿ ನಿಂತಿದೆ. ಭೂಮಿಯಲ್ಲಿ ಕರಗದ, ಮಣ್ಣಿನಲ್ಲಿ ಫಲವಂತಿಕೆಯನ್ನು ತಂದುಕೊಡದ ಈ ವಿಚಿತ್ರವಾದ ಪ್ಲಾಸ್ಟಿಕ್‍ಗೆ ಎಲ್ಲರೂ ಅವಲಂಬಿತವಾಗುತ್ತಿದ್ದು ಸಮಸ್ಯೆಯಾಗಿ ನಿಂತಿದೆ. ಇನ್ನು ಕಸದ ಸಮಸ್ಯೆ ಮಹಾನಗರಗಳಿಂದ ಹಿಡಿದು ಗ್ರಾಮಗಳವರೆಗೆ ತಲೆನೋವಾಗಿದೆ. ಇವೆಲ್ಲದರ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಹಸಿಕಸ, ಒಣಕಸ ಬೇರೆ ಮಾಡುವುದು, ನಮ್ಮ ನಮ್ಮ ಪರಿಸರ ಪ್ರದೇಶವನ್ನು ನಾವೇ ಹೇಗೆ ಚೊಕ್ಕಗೊಳಿಸಿಕೊಳ್ಳಬೇಕು ಎನ್ನುವ ಬಗ್ಗೆಯೂ ನಾಟಕ ಮತ್ತು ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಮಹಾತ್ಮಾಗಾಂಧೀಜಿಯವರ ಗ್ರಾಮರಾಜ್ಯದ ಪರಿಕಲ್ಪನೆ ಮತ್ತು ಗ್ರಾಮಗಳ ಉದ್ಧಾರದ ಕುರಿತು ಅವರು ಕೈಗೊಂಡ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಾಗ ಅದನ್ನು ಹೇಗೆ ಚೊಕ್ಕಟವಾಗಿಡಬೇಕು ಎನ್ನುವ ಬಗ್ಗೆಯೂ ತಿಳಿಸಲಾಯಿತು.
ಆನೆ ಬಿಡಾರವನ್ನು ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಅವರೂ ಕೂಡ ಬಿಡಾರದ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛಭಾರತ್ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿ ಗೀತಗಾಯನ, ಕಿರುನಾಟಕಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಭಾರ್ಗವ್, ವಿದ್ಯಾರ್ಥಿ: ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಮಹಾತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ್ ದೇಶದ ಎಲ್ಲ ರಾಜ್ಯಗಳಲ್ಲಿಯೂ ಜಾರಿಯಲ್ಲಿದೆ. ಈ ಯೋಜನೆಯಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೈ ಜೋಡಿಸಿ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಪರಿಚಯಿಸಲಾಗುತ್ತಿದೆ.
ಡಾ|| ಪ್ರಕಾಶ್, ಡೀನ್, ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗ: ನಮ್ಮ ನೆಲ-ಜಲ-ಪರಿಸರ ಮಲಿನವಾಗದಂತೆ ನೋಡಿಕೊಳ್ಳಬೇಕು. ಅದರಲ್ಲಿ ಯುವಜನರು ಸ್ವಚ್ಛತೆಯನ್ನು ಕಾಪಾಡುವಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ತಾವೂ ಅದರಲ್ಲಿ ತೊಡಗಿಕೊಳ್ಳಬೇಕು. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸುವ ಸ್ವಚ್ಛ ಭಾರತ್ ಅಭಿಯಾನ ನಡೆಸುತ್ತಿದ್ದಾರೆ.
ಗೀತಾಂಜಲಿ, ವಿದ್ಯಾರ್ಥಿನಿ: ನಾವು ಒಬ್ಬರು ಕಸ ಎಸೆಯುವುದರಿಂದ ಯಾವ ಸಮಸ್ಯೆ ಆಗುವುದಿಲ್ಲ. ಹೀಗೆಂದುಕೊಂಡೇ ಎಲ್ಲರೂ ಪ್ರವಾಸಿ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕಿ ತೆರಳುತ್ತಾರೆ. ನಮ್ಮ ಕೈಗಳು ಸ್ವಚ್ಛತೆಗೆ ಮುಂದಾಗಬೇಕು. ನಮ್ಮ ಭೂಮಿ-ನಮ್ಮ ಪರಿಸರ ನಮ್ಮ ಜವಾಬ್ದಾರಿಯಾಗಬೇಕು.
ವಿದ್ಯಾ, ವಿದ್ಯಾರ್ಥಿನಿ: ಸ್ವಚ್ಛ ಭಾರತ್ ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಬೀದಿನಾಟಕ, ಸ್ವಚ್ಛತೆಯ ಧ್ಯೇಯವಾಕ್ಯಗಳನ್ನೊಳಗೊಂಡ ಘೋಷಣೆಯೊಂದಿಗೆ ಮೆರವಣಿಗೆ ಮುಂತಾದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.
ಬೈಟ್: ಶಿವರಾಜ ಮಠದ್, ವಲಯ ಅರಣ್ಯಾಧಿಕಾರಿ: ಶಿವಮೊಗ್ಗ ಜಿಲ್ಲೆಯಲ್ಲಿರುವ ಆನೆ ಬಿಡಾರಕ್ಕೆ ರಾಜ್ಯ ಮತ್ತು ದೇಶದ ವಿವಿಧ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿ ಆಹಾರವನ್ನು ಸೇವಿಸಿ ಎಲ್ಲೆಂದರಲ್ಲಿ ಪೊಟ್ಟಣಗಳನ್ನು ಬಿಸಾಡದಂತೆ ಮತ್ತು ಅವುಗಳನ್ನು ಜಾಗ್ರತೆಯಿಂದ ಕಸದಬುಟ್ಟಿಗೆ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕ್ರಮ ಇಲ್ಲಿ ನಡೆದಿದೆ.
ಸಾಗರ್, ವಿದ್ಯಾರ್ಥಿ: ನಮ್ಮ ಎನ್‍ಎಸ್‍ಎಸ್ ಘಟಕದಿಂದ ಸ್ವಚ್ಛತೆಯ ಮಹತ್ವವನ್ನು ಜನತೆಗೆ ತಿಳಿಸುವ ಪ್ರಯತ್ನ ಈ ಅಭಿಯಾನದ ಮೂಲಕ ಮಾಡುತ್ತಿದ್ದೇವೆ. ನಮ್ಮ ದೇಶ-ನಮ್ಮ ಕೆಲಸ ಎನ್ನುವ ಮನೋಭಾವ ಬೆಳೆಯಬೇಕು.
ಮಿಥುನ್: ಜಲಮೂಲಗಳು ಮಲಿನಗೊಳ್ಳುತ್ತಿವೆ. ಇದರಿಂದ ಸಾಕಷ್ಟು ಸಮಸ್ಯೆಗಳು ನಮಗೆ ಎದುರಾಗುತ್ತಿವೆ. ಅಂತರ್ಜಲವನ್ನು ಉಳಿಸಿಕೊಳ್ಳಬೇಕು, ಜಲ ಪರಿಸರದ ತ್ಯಾಜ್ಯಗಳನ್ನು ಬಿಸುಡುವುದರಿಂದ ಮಲಿನಗೊಳ್ಳುತ್ತಿದೆ. ಈ ಬಗ್ಗೆಯೂ ಜನಜಾಗೃತಿ ಮುಖ್ಯವಾಗಿದೆ.
ಕಾಸಿಂ: ಮಹಾತ್ಮಾಗಾಂಧೀಯವರ ಗ್ರಾಮರಾಜ್ಯದ ಪರಿಕಲ್ಪನೆಯೇ ಸ್ವಚ್ಛ ಭಾರತದ ಕಲ್ಪನೆ. ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಕಾಯಕದಲ್ಲಿ ನಾವೆಲ್ಲಾ ತೊಡಗಿಕೊಂಡಿದ್ದೇವೆ.