ಶಿವಮೊಗ್ಗ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಶಿವಮೊಗ್ಗ ವತಿಯಿಂದ 2022ರ ನವೆಂಬರ್‌ 7ರಿಂದ 2022ರ ಡಿಸೆಂಬರ್ 7 ರವರೆಗೆ “ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನ” ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 3ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಮನೆ ಆವರಣಕ್ಕೆ ಬರುವ ಪಶು ವೈದ್ಯಾಧಿಕಾರಿಗಳಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಕಾಲುಬಾಯಿ ರೋಗ ನಿಯಂತ್ರಿಸಲು ಶ್ರಮಿಸಬೇಕು. ಪಶುಪಾಲಕರು, ರೈತರು ಅಭಿಯಾನದಲ್ಲಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಿಸಬೇಕು.
ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ, ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆಗೊಳಿಸಿ ಪ್ರತಿ 6 ತಿಂಗಳಿಗೊಮ್ಮೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.
ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ ಆಗಿದ್ದು, ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು. ರೋಗ ಬರದಂತೆ ಜಾನುವಾರುಗಳನ್ನು ಸಂರಕ್ಷಿಸಬೇಕು. ದನ, ಎಮ್ಮೆ, ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು.
ರಾಷ್ಟ್ರೀಯ ಜಾನುವಾರು ರೋಗ ಲಸಿಕೆ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಕಾಲುಬಾಯಿ ಲಸಿಕೆ ಸರಬರಾಜಾಗಿದೆ. ಪ್ರತಿ ಜಾನುವಾರುವಿಗೆ ಪ್ರತ್ಯೇಕ ಸಿರಿಂಜ್‌ ಹಾಗೂ ನೀಡಲ್‌ ಬಳಸಲಾಗುತ್ತದೆ.
ಲಸಿಕೆದಾರರು ಪ್ರತಿ ಗ್ರಾಮ, ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಲಸಿಕಾ ಅಭಿಯಾನದ ಮಾಹಿತಿಗೆ ಸಮೀಪದ ಪಶುಪಾಲನಾ ಇಲಾಖೆ ಅಧಿಕಾರಿ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘ ಸಂಪರ್ಕಿಸಬಹುದು.

ಕಾಲುಬಾಯಿ ರೋಗ ಮುಕ್ತ ವಲಯವಾಗಿ ಶಿವಮೊಗ್ಗ ಜಿಲ್ಲೆಯನ್ನು ರೂಪಿಸಬೇಕು. ನವೆಂಬರ್‌ 7ರಿಂದ ಆರಂಭವಾಗುವ ಕಾಲುಬಾಯಿ ಲಸಿಕಾ ಅಭಿಯಾನದಲ್ಲಿ 6.40 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗುವುದು. ಚರ್ಮಗಂಟು ರೋಗ ನಿಯಂತ್ರಣ ಲಸಿಕೆ ಹಾಕಿಸಿದ್ದರೂ ಕಾಲುಬಾಯಿ ರೋಗ ಲಸಿಕೆ ಹಾಕಿಸಬಹುದು.
| ಡಾ. ಶಿವಯೋಗಿ ಬಿ ಯಲಿ, ಉಪನಿರ್ದೇಶಕರು
ಪಶುಪಾಲನಾ ಮತ್ತು ಪಶು ವೈದ್ಯಕೀಯ
ಸೇವಾ ಇಲಾಖೆ, ಶಿವಮೊಗ್ಗ ಜಿಲ್ಲೆ

ಜಾನುವಾರು ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಭಿತ್ತಿಪತ್ರಗಳನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಬಿಡುಗಡೆಗೊಳಿಸಿದರು. ಡಾ. ಶಿವಯೋಗಿ ಬಿ.ಯಲಿ, ಡಾ. ರಾಜೇಶ್‌ ಸುರಗಿಹಳ್ಳಿ ಉಪಸ್ಥಿತರಿದ್ದರು.

error: Content is protected !!