ಪಶುವಿನ ಉದರ, ಶ್ವಾಸಕೋಶ, ಹಿಂಬಾಗ ಇತ್ಯಾದಿಗಳಲ್ಲಿ ಹರ್ನಿಯಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಹರ್ನಿಯಾ ಅಂದರೆ ಶರೀರದ ಯಾವುದೇ ಭಾಗದಲ್ಲಿ ಚರ್ಮ ಸಡಿಲಾಗಿ ಅದರ ಮೂಲಕ ಅಂಗಗಳು ವರ್ತುಲಾಕಾರದ ಮೂಲಕ ತೂರಿಕೊಂಡು ಬರುವುದು. ಮನುಷ್ಯನಂತೆ ಎಲ್ಲಾ ಪ್ರಾಣಿಗಳಲ್ಲೂ ಸಹ ಹರ್ನಿಯಾ ಸಾಮಾನ್ಯ. ಆದರೆ ಇದನ್ನು ಗುರುತಿಸುವ ಬಗ್ಗೆ ಒಂದಿಷ್ಟು ಜ್ಞಾನ ಅವಶ್ಯ. ಅನೇಕ ರೀತಿಯ ಹರ್ನಿಯಾಗಳು ಕೆಲವೊಮ್ಮೆ ಕಾದಾಡಿ ಗಾಯವಾದಾಗ ಅಥವಾ ಜನ್ಮಜಾತವಾಗಿಯೇ ಬಂದುಬಿಡುತ್ತವೆ. ಸಾಮಾನ್ಯವಾಗಿ ಜಾನುವಾರು, ಕುರಿ, ಮೇಕೆ, ಕುದುರೆ ಮತ್ತು ಕತ್ತೆ ಸೇರಿದಂತೆ ಹೆಚ್ಚಿನ ಜಾತಿಗಳಲ್ಲಿ ಕರುಳು ಸೇರಿದಂತೆ ಹೊಟ್ಟೆಯ ವಿವಿಧ ಅಂಗಗಳು ಈ ಹರ್ನಿಯಾದ ಮೂಲಕ ಹೊರತೂರಿ ಬರುತ್ತವೆ. ಬಹುತೇಕ ಹರ್ನಿಯಾಗಳು ನೋವು ರಹಿತವಾಗಿದ್ದರೂ ಸಹ ಕೆಲವೊಮ್ಮೆ ನೋವಿನಿಂದ ಕೂಡಿ ಮತ್ತು ಪಶುವಿಗೆ ತೊಂದರೆಯಾಗಬಹುದು. ವಿವಿಧ ಪಶುಗಳಲ್ಲಿ ವಿವಿಧ ರೀತಿಯ ಹರ್ನಿಯಾಗಳು ಕಾಣಬಹುದು. ಆದರೆ ದನಗಳಲ್ಲಿ ಹೊಕ್ಕಳಿನ ಭಾಗದ ಹರ್ನಿಯಾ, ವೃಷಣಗೂಡಿನ ಹರ್ನಿಯಾ, ಗುದದ್ವಾರದ ಮೂಲಕ ತೂರಿಕೊಂಡು ಬರುವ ಮೂತ್ರಕೋಶದ ಹರ್ನಿಯಾ ಇತ್ಯಾದಿ ಬಹಳ ಸಾಮಾನ್ಯ.

ಹೊಕ್ಕಳಿನ ಹರ್ನಿಯಾ

ಹುಟ್ಟಿದ ಕರುಗಳಲ್ಲಿ ಇದು ಬಹಳ ಸಾಮಾನ್ಯ. ಹುಟ್ಟಿದ ಕರುಗಳಲ್ಲಿ ಹೊಕ್ಕಳ ಬಳ್ಳಿಯಿಂದ ಕರು ತಾಯಿಯಿಂದ ಕಳಚಿಕೊಂಡ ತಕ್ಷಣ ಆ ಭಾಗ ಬೇಗ ಕೂಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ಇದು ತಡವಾದಲ್ಲಿ ಉದರದಲ್ಲಿರುವ ಕರುಳಿನಂತಹ ಅಂಗಗಳು ಈ ಭಾಗದ ಮೂಲಕ ಹೊರಬಂದು ಚರ್ಮದಡಿ ಸೇರಿಕೊಂಡು ಊದಿಕೊಳ್ಳುತ್ತದೆ. ಹೆಚ್ ಎಫ್ ಮಿಶ್ರತಳಿಯ ಹೆಣ್ಣು ಕರುಗಳಲ್ಲಿ ಇದು ಬಹಳ ಸಾಮಾನ್ಯ. ಕೆಲವೊಮ್ಮೆ ಇದು ಅನುವಂಶಿಕವಾಗಿ ಬಂದರೂ ಬರಬಹುದು. ಕೆಲವೊಮ್ಮೆ ಇದು ಹೊಕ್ಕಳುಬಾವಿನಂತೆ ಕಂಡು ಗಲಿಬಿಲಿಗೊಳಿಸಬಹುದು. ಹೊಕ್ಕಳಬಾವು ಸೋಂಕಾದಾಗಾಲೂ ಸಹ ಇದರ ಜೊತೆಯೇ ಹರ್ನಿಯಾ ಸಹ ಇರಬಹುದು.

ಹರ್ನಿಯಾದಲ್ಲಿ ಹಲವು ವಿಧಗಳು. ಕರುವು ಬೆಳೆದಂತೆ ಹರ್ನಿಯಾವೂ ಸಹ ಗಾತ್ರದಲ್ಲಿ ದೊಡ್ದದಾಗುತ್ತಾ ಹೋಗಬಹುದು. ಹೊಕ್ಕಳ ಹರ್ನಿಯಾ ಅಥವಾ ಇತರ ಹರ್ನಿಯಾವನ್ನು ಪತ್ತೆ ಹಚ್ಚುವುದೇನೂ ಕಷ್ಟವಿಲ್ಲ. ಉಬ್ಬಿದ ಭಾಗವನ್ನು ಒತ್ತಿದಾಗ ಅದು ಸುಲಭವಾಗಿ ಒಳಹೋಗಿ ಅಲ್ಲೊಂದುವೃತ್ತಾಕಾರದ ತೆರೆಯುವಿಕೆ ಕಾಣಿಸಿಕೊಂಡರೆ ಅದನ್ನು ಹರ್ನಿಯಾ ಎನ್ನಬಹುದು. ಹೊಕ್ಕಳು ಬಾವು ಆಗಿದ್ದಲ್ಲಿ ಅದು ಘಟ್ಟಿಯಾಗಿ ಚೆಂಡಿನ೦ತಿರುತ್ತದೆ.

ಹೊಟ್ಟೆ ಭಾಗದ ಹರ್ನಿಯಾ

ಇದು ಹೊಟ್ಟೆಯ ಯಾವುದೇ ಭಾಗದಲ್ಲಿ ವೃತ್ತಾಕಾರದ ತೆರೆಯುವಿಕೆಯ ಮೂಲಕ ಕರುಳು, ಉದರದ ಯಾವುದೇ ಭಾಗಗಳು ಹೊರಬಂದು ಬಲೂನಿನಂತೆ ಊದಿಕೊಳ್ಳುವುದು. ಈ ವೃತ್ತಾಕಾರದ ತೆರೆಯುವಿಕೆಯ ಮೂಲಕ ಒಂದೆರಡು ಕೈಬೆರಳು ಕೆಲವೊಮ್ಮೆ ಇಡೀ ಕೈಯನ್ನೇ ತೂರಿಸಬಹುದು. ಇದಕ್ಕಿಂತ ದೊಡ್ಡದಾದಾಗ ಅದು ಅಪಾಯಕಾರಿ ಎನ್ನಬಹುದು. ಹರ್ನಿಯಾದಲ್ಲಿ ಇಣುಕಿದ ಕರುಳು ಚರ್ಮಕ್ಕೆ ಅಂಟಿಕೊ೦ಡು ಮುರಿಹಾಕಿಕೊಂಡರೆ ದನದ ಜೀವಕ್ಕೆ ಅಪಾಯ. ಕರುಳಿನ ಭಾಗ ದ್ವಾರದ ಮೂಲಕ ಸುಲಲಿತವಾಗಿ ಓಡಾಡಿಕೊಂಡಿದ್ದರೆ ಅಪಾಯ ರಹಿತ ಅನ್ನಬಹುದು. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅವಶ್ಯ.
ವೃಷಣದ ಹರ್ನಿಯಾ

ಗಂಡು ಕರುಗಳು ಮತ್ತು ಕೆಲವೊಮ್ಮೆ ಹೋರಿಗಳಲ್ಲಿ ವೃಷಣದ ದ್ವಾರದ ಮೂಲಕ ಕರುಳು ಅಥವಾ ಹೊಟ್ಟೆಯ ಭಾಗದ ಅಂಗಗಳು ತೂರಿಕೊಂಡು ಬರಬಹುದು. ಇದು ಬಹುತೇಕ ಆನುವಂಶಿಕ. ಕೆಲವೊಮ್ಮೆ ಕಸಿ ಮಾಡುವಾಗ ಒಳಮಾಂಸಖಂಡವು ತುಂಡರಿಸಿದರೆ ಸಹ ಹರ್ನಿಯಾವಾಗಬಹುದು.
ಹೊಟ್ಟೆಯ ಕೆಳಭಾಗದ ಹರ್ನಿಯಾ
ಕೆಲವೊಮ್ಮೆ ಹೊಟ್ಟೆಯ ಚರ್ಮದ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿದಾಗ ಪ್ರಾಣಿ ಅದನ್ನು ನೆಕ್ಕಿಕೊಂಡು ಸರಿಯಾಗಿ ಗಾಯ ವಾಸಿಯಾಗದಿದ್ದರೆ ಅದರ ಮೂಲಕ ಕೂಡಾ ಹೊಟ್ಟೆಯ ವಿವಿಧ ಅಂಗಗಳು ತೂರಿಕೊಂಡು ಬರಬಹುದು. ಆಗ ಕರುಳಿನ ಹೆಚ್ಚಿನ ಭಾಗವು ಹೊರಬಂದು ಒಂದಕ್ಕೊ೦ದು ತಳಕು ಹಾಕಿಕೊಂಡು ಅಲ್ಲಿ ಕೊಳೆತ ಉಂಟಾಗಿ ಜಾನುವಾರಿನ ಜೀವಕ್ಕೆ ಕುತ್ತು ಬರಬಹುದು.
ತೊಡೆ ಸಂದಿಯ ಹರ್ನಿಯಾ

ದನದ ಗರ್ಭಾಶಯವು ಗರ್ಭಾವಧಿ ಸಮಯದಲ್ಲಿ ಕಾರಣಾಂತರಗಳಿಂದ ಯಾವುದಾದರೊಂದು ತೊಡೆಸಂಧಿಯ ನಳಿಕೆಯಲ್ಲಿ ಜಾರಿ ಕೂತರೆ ಅದನ್ನು ತೊಡೆ ಸಂದಿ ಹರ್ನಿಯಾ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ತೊಡೆ ಸಂದಿಯಲ್ಲಿ ದೊಡ್ಡ ಊತವನ್ನು ಕಾಣಬಹುದು.

ಹಿಂಬಾಗದ ಹರ್ನಿಯಾ

ಆಕಳುಗಳಲ್ಲಿ ಮೂತ್ರದ್ವಾರದ ಮೂಲಕ ಮೂತ್ರಕೋಶ ಹೊರಬಂದು ಹರ್ನಿಯಾ ಸಂಭವಿಸಬಹುದು. ಈ ಭಾಗವು ದೊಡ್ಡ ಬಲೂನಿನಂತೆ ಊದಿಕೊಳ್ಳುವುದು ಸಾಮಾನ್ಯ. ಆಗ ಮೂತ್ರ ಮಾಡುವಾಗ ಹಸು ತುಂಬಾ ತಿಣುಕುತ್ತಾ ಕಷ್ತ ಪಡುತ್ತಿರುತ್ತದೆ. ಈ ಭಾಗವನ್ನು ಸ್ವಲ್ಪ ಮೇಲಿತ್ತಿದರೆ ಸುಲಲಿತವಾಗಿ ಮೂತ್ರ ವಿಸರ್ಜನೆ ಸಾಧ್ಯ.

ವಫೆಯ ಹರ್ನಿಯಾ

ಹೈನುರಾಸುಗಳಲ್ಲಿ ಎದೆ ಮತ್ತು ಉದರದ ಗೂಡುಗಳು ಒಂದು ತೆಳುವಾದ ಮಾಂಸದ ಪದರದಿಂದ ಬೇರ್ಪಡಿಸಿರುತ್ತದೆ. ಈ ಪದರಕ್ಕೆ ವಫೆೆ ಎಂದು ಕರೆಯುತ್ತಾರೆ. ಗರ್ಭಾವಧಿಯಲ್ಲಿ ಹೊಟ್ಟೆ ತುಂಬ ತಿಂದು ಹಸುಗಳು ಕೆಳಗೆ ಮಲಗಿದಾಗ ಅಥವಾ ಬೆಳೆಯುತ್ತಿರುವ ಕರುವಿನಿಂದ ವಫೆಯ ಮೇಲೆ ಹೆಚ್ಚಾದ ಒತ್ತಡ ಉಂಟಾಗಿ ವಫೆ ಒಡೆದು ಅಥವಾ ಸೀಳಿಕೊಂಡು ಅದರ ಮೂಲಕ ಗರ್ಭಾಶಯ ಹೊರಳಿ ಎದೆ ಗೂಡಿನ ಶ್ವಾಸಕೋಶದ ಮೇಲೆ ದಷ್ಪರಿಣಾಮ ಬೀರುತ್ತದೆ. ಇದನ್ನು ಪತ್ತೆ ಹಚ್ಚುವುದು ¸ಲ್ಪ ಕಷ್ಟವೇ ಸರಿ.

ಹರ್ನಿಯಾಕ್ಕೆ ಕಾರಣಗಳೇನು?

❖ ದುರ್ಬಲಗೊಂಡ ಮತ್ತು ಶಕ್ತಿಹೀನ ಉದರದ ಮಾಂಸಖ೦ಡಗಳು.
❖ ಗರ್ಭಧರಿಸಿದ ಹಸುಗಳ ಹೊಟ್ಟೆಯ ಮೇಲೆ ಕಾರಣಾಂತರಗಳಿಂದಾಗುವ ಗುದ್ದುಗಳು ಅಥವಾ ಹೊಡೆತಗಳು.
❖ ಬೇರೆ ಹಸುಗಳ ಕೊಂಬಿನಿಂದಾಗುವ ಹೊಡೆತ ಅಥವಾ ಒದೆತ
❖ ಗರ್ಭಧರಿಸಿದ ರಾಸುಗಳು ಕಾಲುಜಾರಿ ಕೆಳಗೆ ಬಿದ್ದಾಗ ಅಘಾತಕ್ಕೊಳಗೊಂಡÀ ಉದರದ ಸ್ನಾಯುಗಳು
❖ ಅನುವಂಶೀಯ ಕಾರಣಗಳು

ಹರ್ನಿಯಾದಿಂದಾಗುವ ದುಷ್ಪರಿಣಾಮಗಳು

ಗರ್ಭಾಶಯದ ಚಿಕ್ಕಭಾಗ ಹರ್ನಿಯಾಕ್ಕೆ ಒಳಗಾದಾಗ ಅಂತಹ ದುಷ್ಪರಿಣಾಮಗಳು ಕಂಡುಬರುವುದಿಲ್ಲ. ಹರ್ನಿಯಾದಲ್ಲಿ ಗರ್ಭಾಶಯದ ಹೆಚ್ಚಿನ ಭಾಗ ಒಳಪಟ್ಟರೆ ಗರ್ಭಾಶಯದಲ್ಲಿ ಬೆಳೆಯುತ್ತಿರುವ ಪಿಂಡದ ಮೇಲೆ ದುಷ್ಪರಿಣಾಮ ಬೀಳಬಹುದು. ಪಿಂಡಕ್ಕೆ ಪೂರೈಕೆಯಾಗುವ ಆಹಾರ ಸಮರ್ಪಕವಾಗದೆ ಪಿಂಡ ಸಾಯಲೂಬಹುದು. ಇಲ್ಲದಿದ್ದರೆ ಪ್ರಸವದ ಸಮಯದಲ್ಲಿ ಕಾರಣಾಂತರಗಳಿ೦ದ ಪಿಂಡದ ಯಾವುದಾದರೊಂದು ಭಾಗ ಹರ್ನಿಯಾದಲ್ಲಿ ಸಿಲುಕಿ ಪ್ರಸವದ ತೊಂದರೆಯಾಗಬಹುದು.
ಚಿಕಿತ್ಸೆಯೇನು?

ಹರ್ನಿಯಾ ಚಿಕ್ಕ ಪ್ರಮಾಣದಲ್ಲಿದ್ದರೆ ಅದರಿಂದ ಜಾನುವಾರಿಗೆ ಯಾವುದೇ ತೊಂದರೆ ಇಲ್ಲದಿದ್ದರೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಆದರೆ ದೊಡ್ಡ ಹರ್ನಿಯಾವಾಗಿ ಅದರಲ್ಲಿ ಅಂಗಗಳು ತೂರಿ ಬಂದರೆ ಇದಕ್ಕೆ ತಜ್ಞ ಪಶುವೈದ್ಯರಿಂದ ಸೂಕ್ತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಶಸ್ತ್ರಚಿಕಿತ್ಸೆಯ ತಂತ್ರಗಳ ಸಂದರ್ಭದಲ್ಲಿ, ಎರಡು ರೀತಿಯ ಚಿಕಿತ್ಸೆಗಳಾದ ತೆರೆದ ಮತ್ತು ಮುಚ್ಚಿದ ಕಾರ್ಯಾಚರಣೆಗಳಿವೆ. ಅಂತೆಯೇ, ಗಾತ್ರದಲ್ಲಿ ಚಿಕ್ಕದಾಗಿರುವ ಸರಳ ಮತ್ತು ಸಣ್ಣ ಹರ್ನಿಯಾ ಸಂದರ್ಭದಲ್ಲಿ ಗಾಯದಲ್ಲಿಯೇ ಹೀರಿಕೊಳ್ಳುವ ಹೊಲಿಗೆ ಹಾಕುವುದರ (ಹೆರ್ನಿಯೊರ್ರಾಫಿ) ಮೂಲಕ ಹರ್ನಿಯಾ ದ್ವಾರವನ್ನು ಮುಚ್ಚಿ ಚಿಕಿತ್ಸೆ ನೀಡುತ್ತಾರೆ. ಆದರೆ ದೊಡ್ಡ ಹರ್ನಿಯಾವಾದ ಸಂದರ್ಭದಲ್ಲಿ ಸ್ನಾಯುಗಳನ್ನು ಬೆಂಬಲಿಸಲು ಜಾಲರಿಯನ್ನು ಬಳಸಬೇಕಾಗುತ್ತದೆ. ಇದನ್ನು ಹೆರ್ನಿಯೊಪ್ಲಾಸ್ಟಿ ಎನ್ನುತ್ತಾರೆ. ಜಾಲರಿಯಿಂದ ಉಂಟಾಗುವ ಕಿರಿಕಿರಿ, ಶಸ್ತ್ರಚಿಕಿತ್ಸೆಯ ನಂತರದ ನೋವು ಮತ್ತು ಗಾಯಮಾಯುವಲ್ಲಿನ ವಿಳಂಬವು ಹರ್ನಿಯಾ ನಿರ್ವಹಣೆಯ ಸಮಯದಲ್ಲಿ ಕಂಡುಬರುವ ಕೆಲವು ತೊಡಕುಗಳಲ್ಲಿ ಒಂದಾಗಿದೆ. ಕಾರಣ ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ಸಂದರ್ಭದಲ್ಲಿ ಅದು ಸಂಪೂರ್ಣ ಗುಣವಾಗುವ ವರೆಗೆ ಪಶುವೈದ್ಯರು ಸೂಚಿಸಿದ ರೀತಿಯಲ್ಲಿ ಜಾನುವಾರಿನ ಕಾಳಜಿ ತೆಗೆದುಕೊಳ್ಳುವುದು ಬಹಳ ಅವಶ್ಯ.

ತಡೆಗಟ್ಟಬಹುದೇ?

ಕೆಲವೊಮ್ಮೆ ಮಾತ್ರ ಸೂಕ್ತ ಎಚ್ಚರಿಕೆಯಿಂದ ತಡೆಗಟ್ಟಬಹುದು. ಚೂಪಾದ ಕೊಂಬಿನ ಜಾನುವಾರುಗಳನ್ನು ಇತರ ಪ್ರತ್ಯೇಕಿಸಿರಬೇಕು ಅಥವಾ ಚೂಪಾದ ಕೊಂಬಿನ ಭಾಗವನ್ನು ಸೂಕ್ತ ರೀತಿಯಲ್ಲಿ ಕತ್ತರಿಸಬೇಕು. ಕೊಟ್ಟಿಗೆಯಲ್ಲಿ ಚೂಪಾದ ವಸ್ತು ಇರದಂತೆ ಎಚ್ಚರ ವಹಿಸಬೇಕು.

ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

error: Content is protected !!